ಕಳೆದ ವಾರ ತೆರೆಕಂಡ ‘5ಅಡಿ 7ಅಂಗುಲ’ಚಿತ್ರ ಪ್ರೇಕ್ಷಕರು ಜೈ ಎಂದಿದ್ದು,ಯಶಸ್ವಿ ನತ್ತ ದಾಪುಗಾಲು ಹಾಕುತ್ತಿದೆ. ನಿರ್ಮಾಪಕ ಮತ್ತು ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ಅವರು ಸೇರಿದಂತೆ ಚಿತ್ರತಂಡ ಖುಷಿಯಾಗಿದೆ.
ಚಿತ್ರದ ಹೆಸರಿನಲ್ಲೇ ಕುತೂಹಲವಿದೆ. ಆ ಕುತೂಹಲ ಕೊನೆಯ ತನಕ ಉಳಿಯುವಂಥ ಕತೆಯೇ 5 ಅಡಿ 7 ಅಂಗುಲ ಸಿನಿಮಾ. ಹೊಸಬರ ಚಿತ್ರವಾದರೂ ಕತೆಯಲ್ಲಿನ ಗಟ್ಟಿತನ ಚಿತ್ರವನ್ನು ಕೊನೆಯವರೆಗೆ ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ.
ಐದು ಮಂದಿ ಯುವಕರು ಆತ್ಮೀಯ ಸ್ನೇಹಿತರು. ಅವರಲ್ಲಿ ಅಜಯ್ ಎನ್ನುವವನಿಗೆ ಸ್ನೇಹಿತರನ್ನು ಮೋಸ ಮಾಡುವುದರಲ್ಲಿ ಹುಚ್ಚು. ಉದಾಹರಣೆಗೆ ತಾನು ಅಪಘಾತದಲ್ಲಿ ಸತ್ತಿದ್ದಾಗಿ ಸುದ್ದಿ ಹರಡಿ ಗೆಳೆಯರನ್ನು ಕರೆಸಿ ಅದರ ಥ್ರಿಲ್ ತೆಗೆದುಕೊಳ್ಳುವಂಥ ಹುಚ್ಚು! ಇಂಥ ಹುಚ್ಚಾಟಗಳ ಸ್ನೇಹಿತರು ಐದು ಮಂದಿ ಸೇರಿ ಸಣ್ಣದೊಂದು ಟ್ರಿಪ್ ಆಯೋಜಿಸುತ್ತಾರೆ. ಮೂಗಿನ ತನಕ ಕುಡಿದಿದ್ದರೂ ಅವರು ಒಂದು ಯೋಜನೆ ಹಾಕಿಕೊಳ್ಳುತ್ತಾರೆ. ಅದರ ಪ್ರಕಾರ ಸ್ನೇಹಿತ ಅಜಯ್ ನನ್ನು ಶವಪೆಟ್ಟಿಗೆಯೊಳಗೆ ಕೂಡಿ ಹಾಕಿ ಅದರೊಳಗೆ ಉಸಿರಾಡಲು ಮಾತ್ರ ಗಾಳಿ ದೊರಕುವಂತೆ ಒಂದು ಪೈಪ್ ಇಟ್ಟು ಮಣ್ಣಿನಲ್ಲಿ ಹೂತು ಬಿಡುತ್ತಾರೆ. ಒಂದು ರಾತ್ರಿ ಆತನನ್ನು ಕೂಡಿ ಹಾಕಿ ಮರುದಿನ ಬಿಡಿಸೋಣವೆನ್ನುವುದು ಅವರ ಯೋಜನೆಯಾಗಿರುತ್ತದೆ. ಆದರೆ ಆ ರಾತ್ರಿ ಅವರು ಸಂಚರಿಸುತ್ತಿದ್ದ ವ್ಯಾನು ಮುಂದಿನಿಂದ ಸಡನ್ ಬ್ರೇಕ್ ಹಾಕಿದ ಲಾರಿಗೆ ಡಿಕ್ಕಿಯಾಗಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಸ್ಯಾಂಡಿ ಎಂಬಾತನನ್ನು ಗಂಭೀರ ಪರಿಸ್ಥಿತಿಯಲ್ಲಿಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಹಾಗಾದರೆ ಅಜಯ್ ನನ್ನು ಶವಪೆಟ್ಟಿಗೆಯೊಳಗಿನಿಂದ ಯಾರು ಬಿಡಿಸುತ್ತಾರೆ? ಮತ್ತು ಒಟ್ಟು ಘಟನೆಗಳ ಹಿಂದೆ ಅಡಗಿರುವಂಥ ಮಹಾ ಸತ್ಯವೇನು ಎನ್ನುವ ತಿರುವು ಭರಿತ ಕುತೂಹಲಕಾರಿ ಕತೆಯೇ ಐದು ಅಡಿ ಏಳು ಅಂಗುಲ ಚಿತ್ರ.
ಚಿತ್ರದ ಪ್ರಧಾನ ಪಾತ್ರವಾದ ಅಜಯ್ ಪಾತ್ರದಲ್ಲಿ ನವನಟ ರಾಸಿಕ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅವರ ಎತ್ತರವನ್ನೇ ಚಿತ್ರದ ಶೀರ್ಷಿಕೆಯಾಗಿಸಲಾಗಿದೆ. ಸ್ನೇಹಿತ ಕಿರಣ್ ಪಾತ್ರದಲ್ಲಿ ಭುವನ್ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಇವರಿಬ್ಬರೂ ಇನ್ನಷ್ಟು ಉತ್ತಮ ನಟನೆ ನೀಡಬಲ್ಲರೆಂಬ ಭರವಸೆ ಮೂಡುವಂತಿದೆ. ಅಜಯ್ ಜೋಡಿಯಾಗಿ ಶಾಲಿನಿ ಪಾತ್ರದಲ್ಲಿ ನಟಿಸಿರುವ ಅದಿತಿ ಪ್ರಥಮ ಚಿತ್ರದಲ್ಲಿಯೇ ವಿಭಿನ್ನ ರೀತಿಯ ಪಾತ್ರವನ್ನು ನಿರ್ವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ತಾಯಿ ಪಾತ್ರದಲ್ಲಿ ವೀಣಾ ಸುಂದರ್, ಚಾಲಕನ ಪಾತ್ರದಲ್ಲಿ ಪ್ರಣಯ ಮೂರ್ತಿ, ಪೊಲೀಸ್ ಅಧಿಕಾರಿಯಾಗಿ ರಂಗನಟ ಸತ್ಯನಾಥ್, ಸ್ವಾಮೀಜಿಯಾಗಿ ಚಕ್ರವರ್ತಿ ದಾವಣಗೆರೆ ಅಭಿನಯಿಸಿದ್ದಾರೆ. ಶಿವು ಪಾತ್ರದಲ್ಲಿ ಬಾಲನಟ ಡ್ರಾಮ ಖ್ಯಾತಿಯ ಮಹೇಂದ್ರ ಕುಮಾರ್ ಆಕರ್ಷಕ ನಟನೆ ನೀಡಿದ್ದಾರೆ.
ಚಿತ್ರ ಮರು ಬಿಡುಗಡೆಯಾಗಿ ಎಲ್ಲ ಸೆಂಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
Be the first to comment