’ಓಂ’ ಚಿತ್ರದಲ್ಲಿ ಅಂಡರ್‌ವರ್ಲ್ಡ್ ಹೇಗಿರುತ್ತದೆಂದು ನಟ,ನಿರ್ದೇಶಕ ಉಪೇಂದ್ರ ತೋರಿಸಿ ಜೈ ಅನಿಸಿಕೊಂಡಿದ್ದರು. ಅದೇ ಚಿತ್ರದ ಪ್ರೇರಣೆಯಿಂದಲೇ ಸಾಕಷ್ಟು ಚಿತ್ರಗಳು ಬಂದು ಹೋಗಿದೆ, ಬರುತ್ತಲೆ ಇದೆ. ಈ ಸಾಲಿಗೆ ’ಹಿಟ್ಲರ್’ ಸಿನಿಮಾ ಸೇರ್ಪಡೆಯಾಗಿದೆ. ಭೂಗತ ಲೋಕದಲ್ಲಿ ಅನಾಥ ಹುಡುಗನೊಬ್ಬ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿಕೊಂಡು ಮುಂದೆ ಹೇಗೆ ತನ್ನ ಪಾರುಪಥ್ಯವನ್ನು ಸಾಧಿಸುತ್ತಾನೆ ಎನ್ನುವುದು ಒಂದು ಏಳೆಯ ಕತೆಯಾಗಿದೆ.

ಇದರೊಂದಿಗೆ ಭಾವನಾತ್ಮಕ ಸನ್ನಿವೇಶಗಳು, ಹಾಸ್ಯವು ಮಿಳಿತಗೊಂಡಿದೆ. ಪಕ್ಕಾ ರೌಡಿಸಂ ಗಾಥೆ ಆಗಿದ್ದು, ಯಾವುದೇ ವ್ಯಕ್ತಿಯ ನೈಜ ಘಟನೆಯನ್ನು ಆಯ್ದುಕೊಂಡಿರುವುದಿಲ್ಲ. ಎಲ್ಲವನ್ನು ಕಾಲ್ಪನಿಕವಾಗಿ ಮನರಂಜನೆ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದ್ದು, ಅಂತಿಮವಾಗಿ ತೂಕದ ಸಂದೇಶ ಇರಲಿದೆ.

ಅದು ಏನು ಎಂಬುದನ್ನು ಟಾಕೀಸ್‌ದಲ್ಲಿ ನೋಡಬೇಕಾಗಿದೆ. ಕೆಜಿಎಫ್ ಚಿತ್ರದಲ್ಲಿ ’ತಾಯಿ ಕುರಿತಾದ’ ಹಾಡಿಗೆ ಸಾಹಿತ್ಯ ಒದಗಿಸಿದ್ದ ಕೊಪ್ಪಳದ ಕಿನ್ನಾಳ್‌ರಾಜ್ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶಕನ ಸ್ಥಾನವನ್ನು ಅಲಂಕರಿಸಿದ್ದಾರೆ.

ಶೀರ್ಷಿಕೆಯನ್ನು ಶ್ರೀಮುರಳಿ ಕನ್ನಡ ರಾಜ್ಯೋತ್ಸವ ದಿನದಂದು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹೊಸ ಪ್ರತಿಭೆ ಲೋಹಿತ್ ನಾಯಕ, ಸಸ್ಯ ನಾಯಕಿಯಾಗಿ ಎರಡನೇ ಅವಕಾಶ. ಉಳಿದಂತೆ ಬಲರಾಜವಾಡಿ, ವರ್ಧನ್‌ತೀರ್ಥಹಳ್ಳಿ, ವಿಜಯ್‌ಚಂಡೂರ್, ವೈಭವ್‌ನಾಗರಾಜ್, ಮನಮೋಹನ್‌ರೈ, ಗಣೇಶ್‌ರಾವ್‌ಕೇಸರ್‌ಕರ್, ವೇದಹಾಸನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮೂರು ಹಾಡುಗಳಿಗೆ ಆಕಾಶ್‌ಪರ್ವ ರಾಗ ಒದಗಿಸಿದ್ದಾರೆ.

ಛಾಯಾಗ್ರಹಣ ಜಿ.ವಿ.ನಾಗರಾಜಕಿನ್ನಾಳ, ಸಂಕಲನ ಗಣೇಶ್‌ತೋರಗಲ್, ಸಾಹಸ ಚಂದ್ರುಬಂಡೆ ಅವರದಾಗಿದೆ. ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡು, ಫೈಟ್‌ನ್ನು ಸಂಡೂರುದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.

ಗಾನಶಿವ ಮೂವೀಸ್ ಸಂಸ್ಥೆ ಮುಖಾಂತರ ಶ್ರೀಮತಿ ಮಮತಾಲೋಹಿತ್ ನಿರ್ಮಾಣ ಮಾಡಿರುವುದು ಹೊಸ ಅನುಭವ. ಸದ್ಯದಲ್ಲೆ ಸ್ಟಾರ್ ನಟರಿಂದ ಟೀಸರ್ ಬಿಡುಗಡೆ ಮಾಡಿಸಲು ಸಿದ್ದತೆಗಳು ನಡೆಯುತ್ತಿದೆ.