ರಾಘವೇಂದ್ರ ರಾಜ್ ಕುಮಾರ್ ನಟನೆಯ ʻಆಡಿಸಿದಾತʼ ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ ಮತ್ತೊಂದು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಸಸ್ಪೆನ್ಸ್, ಥ್ರಿಲ್ಲರ್ ಜಾನರಿನ ಈ ಚಿತ್ರಕ್ಕೆ ʻಡಾರ್ಕ್ ಫ್ಯಾಂಟಸಿʼ ಎಂದು ಹೆಸರಿಡಲಾಗಿದೆ.
ಕೊರೋನಾ ಎನ್ನುವ ಹೆಸರು ಜನರ ಕಿವಿಗೆ ಬೀಳುವ ಮುನ್ನವೇ ಆರಂಭಗೊಂಡಿದ್ದ ಚಿತ್ರವಿದು. ಲಾಕ್ಡೌನ್ ಅನೌನ್ಸ್ ಆಗುವ ಹೊತ್ತಿಗೆ ಶೇ. 60ರಷ್ಟು ಚಿತ್ರೀಕರಣ ಕೂಡಾ ಪೂರ್ಣಗೊಂಡಿತ್ತು. ಒಂದು ವೇಳೆ ಕೋವಿಡ್ ಸಮಸ್ಯೆ ಎದುರಾಗದೇ ಇದ್ದಿದ್ದರೆ ಈ ಹೊತ್ತಿಗೆ ಚಿತ್ರ ತೆರೆಗೆ ಬಂದಿರುತ್ತಿತ್ತು. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರಲಿಲ್ಲವಾದ್ದರಿಂದ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಚಿತ್ರತಂಡ ಪೂರೈಸಿಕೊಂಡಿದೆ. ಡಾರ್ಕ್ ಫ್ಯಾಂಟಸಿಗಾಗಿ ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.
ಆರೋಗ್ಯ ಇಲಾಖೆಯ ಕೆಲವಾರು ಪ್ರಾಜೆಕ್ಟ್ ಗಳನ್ನು ರೂಪಿಸುತ್ತಿದ್ದವರು ನಾಗರಾಜ್ .ವಿ ಮತ್ತು ಆರ್.ವಿ. ನಿತಿನ್. ಅದೊಂದು ದಿನ ಎಸ್.ಎ. ಗೋವಿಂದರಾಜ್ ಮತ್ತು ಲಕ್ಷ್ಮಿ ಅವರು ʻಫಣೀಶ್ ಹೇಳುವ ಕತೆಯನ್ನು ಒಮ್ಮೆ ಕೇಳಿ. ಇಷ್ಟವಾದರೆ ನಿರ್ಮಾಣ ಮಾಡಿʼ ಎಂದು ಹೇಳಿದ್ದರಂತೆ. ಅದರಂತೆ, ಫಣೀಶ್ ಬಂದು ಕಥೆಯ ಒಂದು ಎಳೆಯನ್ನು ವಿವರಿಸಿದರಂತೆ. ತಕ್ಷಣ ಈ ಸಿನಿಮಾ ನಿರ್ಮಿಸಲೇಬೇಕು ಅಂತಾ ನಿತಿನ್ ಮತ್ತು ನಾಗರಾಜ್ ಅವರು ತೀರ್ಮಾನಿಸಿದ್ದ ಕಾರಣಕ್ಕೆ ಶುರುವಾದ ಚಿತ್ರ ಡಾರ್ಕ್ ಫ್ಯಾಂಟಸಿ. ಸದ್ಯ ಡಾರ್ಕ್ ಫ್ಯಾಂಟಸಿಯ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಹಣದ ಸುತ್ತ ನಡೆಯುವ ಕತೆ ಇದಾಗಿದೆ. ನಾಯಕಿ ಸಂದರ್ಭದ ಹಿಡಿತದಿಂದ ಒಂದು ಕತ್ತಲ ಬಂಗಲೆಯಲ್ಲಿ ಸಿಲುಕಿರುತ್ತಾಳೆ. ಹೊರಗೆ ಆಕೆಯ ಪ್ರಿಯಕರ ಪರಿತಪಿಸುತ್ತಿರುತ್ತಾನೆ. ಬದುಕಲ್ಲಿ ನೆಲೆನಿಲ್ಲಬೇಕು ಎಂದು ಬಯಸುವ ನಾಯಕನಟ, ಜೂಜು, ಬೆಟ್ಟಿಂಗುಗಳಿಂದ ಹಣ ಮಾಡಲು ನಿಂತ ಮತ್ತೊಬ್ಬ ವ್ಯಕ್ತಿ… ಹೀಗೆ ಹಲವಾರು ಪಾತ್ರಗಳು ಒಂದು ಕಡೆ ಸೇರುತ್ತವೆ. ಕತ್ತಲಿನಲ್ಲಿ ಸಿಕ್ಕಿಕೊಂಡ ನಾಯಕಿಗೆ ಬೆಳಕು ಗೋಚರಿಸುತ್ತದಾ? ದುಡ್ಡು ಮನುಷ್ಯರ ಚಿಂತನೆಯನ್ನು ಹೇಗೆ ಬದಲಿಸುತ್ತದೆ? ಹಣಕ್ಕಾಗಿ ಹೇಗೆ ಮಾರ್ಪಾಟಾಗುತ್ತಾರೆ? ಒಬ್ಬೊಬ್ಬರ ಬದುಕಲ್ಲೂ ನೋಟು ಹೇಗೆ ಆಟವಾಡುತ್ತದೆ ಅನ್ನೋದು ಚಿತ್ರದ ಎಳೆ.
ಡಾರ್ಕ್ ಫ್ಯಾಂಟಸಿಯಲ್ಲಿ ಸುನೀತಾ ಮತ್ತು ಸುಶ್ಮಿತಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಶೋಭರಾಜ್, ಮನದೀಪ್ ರಾಯ್, ಮೋಹನ್ ಜುನೇಜ ಮುಂತಾದವರ ತಾರಾಗಣವಿದೆ. ನಾಗರಾಜ್ .ವಿ ಮತ್ತು ನಿತಿನ್ ಆರ್.ವಿ. ಸೇರಿ ನಿರ್ಮಿಸುತ್ತಿರುವ ಚಿತ್ರಕ್ಕೆ ಫಣೀಶ್ ಭಾರಧ್ವಾಜ್ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಆನಂದ್ ಇಲ್ಲರಾಜ ಛಾಯಾಗ್ರಹಣ, ಕ್ಲಾರೆನ್ಸ್ ಅಲೆನ್ ಕ್ರಾಸ್ಟಾ ಸಂಗೀತ, ತುಳಸೀರಾಮರಾಜು ಸಂಕಲನ, ಪದ್ಮನಾಭ್ ಭಾರದ್ವಾಜ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ಡಾರ್ಕ್ ಫ್ಯಾಂಟಸಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾ.ರಾಜ್ ಅವರ ಮೊಮ್ಮಕ್ಕಳಾದ ಧೀರೇನ್ ರಾಮ್ ಕುಮಾರ್, ಷಣ್ಮುಖ ಮತ್ತು ಎಸ್.ಎ. ಗೋವಿಂದರಾಜ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ʻಈ ಚಿತ್ರದ ನಾಯಕನಟ ಶ್ರೀ ನಮ್ಮ ಊರಿನ ಕಡೆಯವರು. ಇವರನ್ನು ನೋಡಿದಾಗಲೆಲ್ಲಾ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾರೆ ಎನ್ನುವ ಭರವಸೆ ಮೂಡುತ್ತದೆ. ನಿರ್ಮಾಪಕರು ಸಹಾ ನನ್ನ ಆತ್ಮೀಯರು ಡಾರ್ಕ್ ಫ್ಯಾಂಟಸಿ ಚಿತ್ರತಂಡಕ್ಕೆ ಒಳಿತಾಗಲಿʼ ಎಂದು ಎಸ್.ಎ. ಗೋವಿಂದರಾಜ್ ಹರಸಿದರು.
ಫಣೀಶ್ ಅವರು ಸಿದ್ಧಸೂತ್ರಗಳ ಆಚೆಗೆ ಯೋಚಿಸುವ ನಿರ್ದೇಶಕ. ಅವರ ಹೊಸ ಪ್ರಯೋಗಗಳು, ಚೌಕಟ್ಟು ಮೀರಿ ಯೋಚಿಸುವ ಅವರ ಕ್ರಿಯಾಶೀಲತೆ ನನಗೆ ಬಹಳವಾಗಿ ಇಷ್ಟವಾಗುತ್ತದೆ. ಡಾರ್ಕ್ ಫ್ಯಾಂಟಸಿ ಸಿನಿಮಾ ಕೂಡಾ ಅಷ್ಟೇ ಅದ್ಭುತವಾಗಿ ಮೂಡಿಬರುತ್ತಿದೆ. ಉಳಿದ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿ ತೆರೆ ಮೇಲೆ ನೋಡುವ ಕಾತುರ ನನ್ನದು. ಗೋವಿಂದರಾಜ್ ಮತ್ತು ಲಕ್ಷ್ಮಿ ಅಮ್ಮ ಅವರಿಂದಲೇ ಈ ಚಿತ್ರದಲ್ಲಿ ನಾನು ನಟಿಸುವಂತಾಯಿತು. ಈ ಕಾರಣಕ್ಕೆ ನಾನವರಿಗೆ ಅಭಾರಿಯಾಗಿದ್ದೇನೆ ಎನ್ನುವುದು ಡಾರ್ಕ್ ಫ್ಯಾಂಟಸಿಯ ಹೀರೋ ಶ್ರೀ ಅವರ ನುಡಿಗಳು.
ಮತ್ತೆ ಬಂದರು ಬಾಲರಾಜ್
ಎಂಭತ್ತರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಶಿವರಾಜ್ ಕುಮಾರ್ ಅವರೊಟ್ಟಿಗೆ ಸಿನಿಮಾಗಳಲ್ಲಿ ನಟನೆ ಆರಂಭಿಸಿ ಡಾ.ರಾಜ್ ಕುಮಾರ್ ಅಭಿನಯದ ಜೀವನಚೈತ್ರ, ಮುಂತಾದ ಸಿನಿಮಾಗಳಲ್ಲಿ ಪಾತ್ರಪೋಷಣೆ ಮಾಡಿ ಹೆಸರು ಮಾಡಿದವರು ಬಾಲರಾಜ್. ಈಗ ಡಾರ್ಕ್ ಫ್ಯಾಂಟಸಿಯಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸುವ ಮೂಲಕ ಮತ್ತೆ ಸಿನಿಮಾ ನಟನೆಗೆ ಮರುಪ್ರವೇಶ ನೀಡಿದ್ದಾರೆ.
ʻʻನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಮದರಾಸಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. ಆನಂದ್ ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ. ಫಣೀಶ್ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ. ಹಗಲೂ ರಾತ್ರಿ ಚಿತ್ರೀಕರಣ ನಡೆಸಿದ್ದೇವೆ. ಎಲ್ಲರೂ ಶ್ರಮಿಸಿದ್ದೇವೆ. ಈ ಚಿತ್ರ ಇಡೀ ತಂಡಕ್ಕೆ ಉತ್ತಮ ಹೆಸರು ತಂದುಕೊಡಲಿದೆ. ʼʼ
ಬಾಲರಾಜ್, ನಟಸಿನಿಮಾ ನಿರ್ಮಿಸುವ ಅವಕಾಶ ಒದಗಿಬಂದರೆ, ಬಿಡದೇ ಮಾಡಬೇಕು ಎಂದು ಕಾದಿದ್ದೆ. ನನ್ನ ಆಂತರ್ಯದ ಬಯಕೆಗೆ ತಕ್ಕಂತೆ ಫಣೀಶ್ ಅವರು ಕಾಡುವಂಥ ಕಥೆಯನ್ನು ಹೇಳಿದರು. ಅವರು ಸ್ಟೋರಿ ಲೈನ್ ಹೇಳಿ ಐದು ನಿಮಿಷಕ್ಕೆಲ್ಲಾ ʻಈ ಸಿನಿಮಾ ಮಾಡೋಣʼ ಅಂತಾ ನನ್ನ ಸ್ನೇಹಿತರಾದ ನಾಗರಾಜ್ ಅವರಿಗೆ ತಿಳಿಸಿದೆ. ಅಂದುಕೊಂಡಂತೇ ಸಿನಿಮಾ ಮಾಡಿದ್ದೇವೆ. ಕೊರೋನಾ ಸಮಸ್ಯೆ ಎದುರಾಗದೇ ಇದ್ದಿದ್ದರೆ ಇಷ್ಟರಲ್ಲಾಗಲೇ ಚಿತ್ರವನ್ನು ರಿಲೀಸ್ ಮಾಡಿರುತ್ತಿದ್ದೆವು. ಸದ್ಯ ಎಂಭತ್ತು ಪರ್ಸೆಂಟ್ ಕೆಲಸ ಮುಗಿದಿದೆ. ಡಿಸೆಂಬರ್ ವೇಳೆಗೆ ತೆರೆಮೇಲೆ ಡಾರ್ಕ್ ಫ್ಯಾಂಟಸಿ ಅನಾವರಣಗೊಳ್ಳಲಿದೆ.
-ನಿತಿನ್ ಆರ್.ವಿ. ನಿರ್ಮಾಪಕ
Pingback: DevOps Outsourcing companies