IAS ಪರೀಕ್ಷೆಯಲ್ಲಿ 167ನೇ ಟಾಪರ್ ಆಗಿ ಉತ್ತೀರ್ಣರಾಗಿದ್ದಾರೆ.
ಕಲೆ ಅನ್ನೋದು ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎನ್ನುವುದು ನಾನ್ನುಡಿ ಹಾಗೂ ಹಳೆಯ ಮಾತು. ಇದು ನಿಜ ಕೂಡ ಆದರೆ ಅದೆಷ್ಟೋ ಜನ ಕಲೆಯ ಬರ ಸೆಳೆತಕ್ಕೆ ಸೂಜಿಗಲ್ಲಿನಂತೆ ಆಕರ್ಷಿತರಾಗಿ ಅದನ್ನು ಮೈಗೂಡಿಸಿಕೊಂಡು ತಲೆಯ ಮೇಲೆ ಹೊತ್ತು ಮೆರೆಸಿ ಉತ್ತುಂಗದ ಮಜಲನ್ನು ಏರಿದವರು ಇದ್ದಾರೆ, ಹಾಗೆಯೇ ಬಣ್ಣದ ಲೋಕದ ಪಾತರಗಿತ್ತಿಯಂತ ಆಸೆಯ ಕಡಲಿಗೆ ಧುಮುಕಿ ಈಜಲಾಗದೇ ಮುಳುಗಿ ಮತ್ತೆ ಮೇಲೇಳದವರು ಇದ್ದಾರೆ!.
ಹಾಗೆಯೇ ಬಾಲ ಕಲಾವಿದರು ಸಿನಿಮಾಲೋಕಕ್ಕೆ ಕಾಲಿಟ್ಟು ಅಲ್ಲಿನ ಆಕರ್ಷಣೆಗೆ ಒಳಗಾಗಿ ಓದಿನ ಕಡೆ ಗಮನಕೊಡದೇ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಕೊನೆಗೆ ತ್ರಿಶಂಕೂ ಸ್ಥಿತಿಗೆ ಸಿಕ್ಕವರು ಅನೇಕರು. ಆದರೆ ಇಲ್ಲೊಬ್ಬ ಬಾಲ ನಟಿ “ಬೇಬಿ ಕೀರ್ತನ” ಸುಮಾರು 36 ಚಿತ್ರಗಳಲ್ಲಿ ಅಭಿನಯಿಸಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಪಡೆದು ಕೊನೆಗೆ ತಂದೆಯ ಆಸೆಯಂತೆ ಇಂದು ಐ.ಎ.ಎಸ್. ಓದು ಮುಗಿಸಿ ಈಗ ಕರ್ನಾಟಕ ರಾಜ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ದಿನದ ಕ್ಷಣಗಣನೆ ಶುರುವಾಗಿದೆ ಎನ್ನಬಹುದು.
ಐಎಎಸ್ ಪರೀಕ್ಷೆಯಲ್ಲಿ 167ನೇ ರ‍್ಯಾಂಕ್ ಪಡೆದ ಕೀರ್ತನಾ ಒಂದು ಕಾಲದ ಸ್ಟಾರ್ ಬಾಲನಟಿ!
ಶಿವರಾಜ್ ಕುಮಾರ್ ಅಭಿನಯದ ದೊರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೀರ್ತನಾ ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶಿಲ್ಪ, ಶಶಿಕುಮಾರ್, ಮಾಲಾಶ್ರೀ, ಶೃತಿ, ಸಿತಾರ, ಜಯಮಾಲ ಹೀಗೆ ಬಹುತೇಕ ಎಲ್ಲಾ ದೊಡ್ಡ ಸ್ಟಾರ್ ನಟರ ಜೊತೆ ಬಾಲ ನಟಿಯಾಗಿ ಅಭಿನಯಿಸಿದ್ದಾರೆ. ಎಲ್ಲರಿಂದ ಪ್ರಶಂಸೆಯನ್ನು ಪಡೆದಿದ್ದ ಈ ನಟಿ ಈಗ ನಮ್ಮೆಲ್ಲರ “ಹೆಮ್ಮಯ ಕನ್ನಡತಿ” ಎಂದು ನಾವೆಲ್ಲಾ ಖುಷಿ ಪಡುವ ವಿಚಾರ.
ಈ ಒಂದು ಅಭೂತಪೂರ್ವ ಯಶಸ್ಸಿನ ಉತ್ತುಂಗಕ್ಕೇರಿರುವ ಕೀರ್ತನಾ ರವರನ್ನು ಇತ್ತೀಚೆಗೆ ಮಡಿವಾಳ ಜನಾಂಗದವರು ತಮ್ಮ ಕುಲದ ಮೊದಲ ಹೆಣ್ಣುಮಗಳು ಇಂತಹ ಒಂದು ದೊಡ್ಡ ಸಾಧನೆಯನ್ನು ಮಾಡಿರುವುದು ನಮ್ಮ ಜನಾಂಗಕ್ಕೆ ಕೀರ್ತಿ ಕಳಶ ಇದ್ದಂತೆ ಎಂದು “ದಿವ್ಯ ಪ್ರಜ್ಞಾ ಪ್ರತಿಷ್ಠಾನ”ದ ವತಿಯಿಂದ ಅಭಿನಂದಿಸಿದ್ದಾರೆ.
ದಿವ್ಯ ಪ್ರಜ್ಞಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ನಿವೃತ್ತ ಐ.ಪಿ.ಎಸ್. ಅಧಿಕಾರಿಯಾಗಿರವಂತಹ ಶ್ರೀಹೆಚ್.ಎಸ್. ವೆಂಕಟೇಶ್ ರವರು ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿ , ಹಲವಾರು ಸಮಾಜದ ಗಣ್ಯರ ಸಮ್ಮುಖದಲ್ಲಿ ಶ್ರೀಮತಿ ಕೀರ್ತನಾ ರವರನ್ನು ಅಭಿನಂದಿಸಿ, ಗೌರವಿಸಿದರು. ಈ ಸಮಾರಂಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ, ಎಲ್. ಹನುಮಂತಯ್ಯ, ನಿವೃತ್ತ ಐ.ಪಿ.ಎಸ್. ಅಧಿಕಾರಿಗಳು, ದಿವ್ಯ ಪ್ರಜ್ಞಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಎಸ್. ವೆಂಕಟೇಶ್, ಪೂನಾದ ಐ.ಆರ್.ಎಸ್. ಅಡೀಷನಲ್ ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳಾದ ಶಿವಾನಂದ ಕಲ್ಕೆರೆ, ನಿವೃತ್ತ ಐ.ಪಿ.ಎಸ್. ಅಧಿಕಾರಗಳು ಹಾಗೂ ಹಿಂದುಳಿದ ಜನಾಂಗದ ಮುಖಂಡರಾದ ಜಿ. ರಮೇಶ್ ಮುಂತಾದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೀರ್ತನಾ ಅಭಿನಂದನಾ ಸಮಾರಂಭ ನಡೆಯಿತು. ಕೀರ್ತನಾರವರ ಸಾಧನೆಯ ಹಿಂದೆ ಬಹಳ ದೊಡ್ಡ ಕಥೆಯೇ ಇದೆ ಎನ್ನಬಹುದು.
ಕೀರ್ತನಾರವರು ತಂದೆಯನ್ನು ಕಳೆದುಕೊಂಡು, ಮನೆಯಲ್ಲಿ ಬಡತನವಿದ್ದರೂ ಛಲ ಬಿಡದೇ ಅನೇಕ ಅಡೆ ತಡೆಗಳನ್ನು ಎದುರಿಸಿ ಇಂದು ಈ ನಾಡಿನ ಒಂದು ದೊಡ್ಡ ಸಾಧನೆಯ ಗುರಿ ಮುಟ್ಟಿ ಯಶಸ್ವಿಯಾಗಿದ್ದಾರೆ.ಅವರ ತಾಯಿ, ತಮ್ಮ ಹಾಗೂ ಅವರ ಪತಿಯ ಪ್ರೋತ್ಸಾಹ ಮತ್ತು ಸಹಕಾರ ದೊಂದಿಗೆ ಇಂದು ಈ ಒಂದು ಸಾಧನೆಗೆ ಭಾಜನರಾಗಿದ್ದಾರೆ.
ಅವರ ಮಾತಿನ ಪ್ರಕಾರ ಹೇಳುವುದೇನೆಂದರೆ ನಾನು ಮೊದಲಿನಿಂದ ಸಿನಿಮಾ ರಂಗದಲ್ಲಿ ಇದ್ದುದ್ದರಿಂದ ಕಲೆ ಮತ್ತು ಸಂಸ್ಕೃತಿ ಯ ವಲಯದಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಅಭಿವೃದ್ದಿಗಾಗಿ ದುಡಿಯಲು ಸಿದ್ದವಿದ್ದೇನೆ. ಎಂದು ಈ ಸಮಯದಲ್ಲಿ ತಿಳಿಸಿದರು. ಕೀರ್ತನಾರವರ ಸಾಧನೆ ನಿಜಕ್ಕೂ ಶ್ಲಾಘನೀಯ ವಾದದ್ದು. ಅವರು ಈ ನಾಡಿನ ಕೀರ್ತಿ ಮತ್ತಷ್ಟು ಹೆಚ್ಚಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂಬುದು ನಮ್ಮ ಆಶಯ.
Pingback: cpns imigrasi lulusan sma
Pingback: www.cheapreplicawatchesunder.com