ಬೆಂಗಳೂರು: ಭಾರತದ ಅತಿದೊಡ್ಡ ಮನರಂಜನಾ ಮಾಧ್ಯಮ ಸಂಸ್ಥೆಯಾದ ಜ಼ೀ ಎಂಟರ್ಟೈನ್ಮೆಂಟ್ ಎಂಟರ್ ಪ್ರೈಸಸ್ ಲಿಮಿಟೆಡ್ ಮಂಗಳವಾರ ಕೋವಿಡ್ – 19 ವಿರುದ್ಧದ ಹೋರಾಟಕ್ಕಾಗಿ ಸಿಎಸ್ ಆರ್ ಡ್ರೈವ್ ಅಡಿಯಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಇತರ ವೈದ್ಯಕೀಯ ಸಾಧನಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುುಖಾಂತರ ಜೀ ಕನ್ನಡ ಹಾಗೂ ಜ಼ೀ ಪಿಕ್ಚರ್ಸನ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಕರ್ನಾಟಕ ಸರ್ಕಾರಕ್ಕೆ ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರು.
ಸಾಮಾಜಿಕ ಕಳಕಳಿಯ ಜವಾಬ್ದಾರಿಯಿಂದ ಜೀ ಎಂಟರ್ಟೈನ್ಮೆಂಟ್ ಕೋವಿಡ್ 19 ವಿರುದ್ಧದ ಹೋರಾಟಕ್ಕಾಗಿ ಸಿಎಸ್ ಆರ್ ಬಜೆಟ್ ಅನುದಾನವನ್ನು ಬಳಸಿಕೊಂಡು ಕೊರೋನಾ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ 20 ಆಂಬ್ಯುಲೆನ್ಸ್ ವಾಹನಗಳು, 4 ಸಾವಿರ ಪಿಪಿಇ ಕಿಟ್ ಗಳು, 25 ಎಚ್ ಎಫ್ ಎನ್ ಸಿ ಯಂತ್ರಗಳನ್ನು ನೀಡಿದರು.
ರಾಷ್ಟ್ರವನ್ನು ಕೋವಿಡ್ -19 ನಿಂದ ಮುಕ್ತವಾಗಿಸಲು ಹಾಗೂ ಆರೋಗ್ಯವಂತ ದೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜೀ ಕಂಪನಿಯು ರಾಷ್ಟ್ರ ಮಟ್ಟದಲ್ಲಿ ಸಿಎಸ್ ಆರ್ ಡ್ರೈವ್ ಅನುದಾನವನ್ನು ಬಳಸಿಕೊಂಡು ಆರೋಗ್ಯ ಪರಿಕರಗಳನ್ನು ನೀಡುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 240ಕ್ಕೂ ಹೆಚ್ಚು ಆಂಬ್ಯುಲೆನ್ಸ್, 46 ಸಾವಿರಕ್ಕೂ ಅಧಿಕ ಪಿಪಿಇ ಕಿಟ್, 90ಕ್ಕೂ ಹೆಚ್ಚು ಎಚ್ ಎಫ್ ಎನ್ ಸಿ ಯಂತ್ರಗಳನ್ನು ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಕರ್ನಾಟಕ ರಾಜ್ಯಕ್ಕೂ ನೆರವಿನ ಹಸ್ತ ಚಾಚಲಾಗಿದೆ.
ಜೀ ಎಂಟರ್ಟೈನ್ಮೆಂಟ್ ಸಂಸ್ಥೆಯು 5 ಸಾವಿರಕ್ಕೂ ಅಧಿಕ ಜನರು ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗದಲ್ಲಿದ್ದಾರೆ. ಇವರಲ್ಲಿ 3400ಕ್ಕೂ ಅಧಿಕ ಉದ್ಯೋಗಿಗಳು ಪಿಎಂ ಕೇರ್ ಫಂಡ್ ಗೆ ದೇಣಿಗೆ ನೀಡಿದ್ದಾರೆ. ಈ ಉದ್ಯೋಗಿಗಳು ನೀಡಿದ ಹಣವನ್ನು ಈಗಾಗಲೇ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ ನೀಡಲಾಗಿದೆ.
ಜವಾಬ್ದಾರಿಯುತ ಮಾಧ್ಯಮವಾಗಿ ಮತ್ತು ಮನರಂಜನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಂಪನಿಯು, ಕೋವಿಡ್ – 19 ವಿರುದ್ಧದ ಹೋರಾಟಕ್ಕೆ ಸರ್ವ ರೀತಿಯಲ್ಲೂ ನೆರವಿಗೆ ಸಿದ್ಧವಿದೆ. ತನ್ನ ಅಗತ್ಯ ನೆರವನ್ನು ಕಂಪನಿ ಹೀಗೆಯೇ ಮುಂದುವರಿಸಲಿದೆ.
ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಸಂಸ್ಥೆಯು ಮನರಂಜನಾ ಕ್ಷೇತ್ರದ ಕ್ರಿಯಾಶೀಲ ಸಂಸ್ಥೆಯಾಗಿದ್ದು, ವೀಕ್ಷಕರಿಗೆ ಇಲ್ಲಿಯವರೆಗೆ ನಾನಾ ರೀತಿಯ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. 173ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿರುವ ಜೀ ಸಂಸ್ಥೆ, ಜಗತ್ತಿನಾದ್ಯಂತ 1.3 ಶತಕೋಟಿಗಿಂತಲೂ ಅಧಿಕ ಪ್ರೇಕ್ಷಕರನ್ನು ತಲುಪಿದೆ.
ನಾನಾ ಭಾಷೆ, ಹಲವು ವೈವಿದ್ಯತೆಗಳೊಂದಿಗೆ ವಿಶೇಷ ಪ್ಲಾಟ್ ಫಾರ್ಮಗಳ ಮೂಲಕ ವಿಶ್ವದ ಜನರನ್ನು ತಲುಪಿರುವ ಜೀ ಸಂಸ್ಥೆ, ಜಗತ್ತಿನ ಅತಿದೊಡ್ಡ ಮನರಂಜನಾ ಸಂಸ್ಥೆ ಒಂದಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಚಲನಚಿತ್ರ, ಸಂಗೀತ, ಡಿಜಿಟಲ್ ಮಾಧ್ಯಮ, ಹಾಗೂ ಲೈವ್ ಮನರಂಜನಾ ಕಾರ್ಯಕ್ರಮ ಮತ್ತು ರಂಗಭೂಮಿ ಕ್ಷೇತ್ರಗಳಿಗೂ ತನ್ನದೆಯಾದ ಕೊಡುಗೆ ನೀಡಿದೆ. ಇನ್ನು ಸಂಸ್ಥೆಯ ಮತ್ತೊಂದು ವಿಶೇಷತೆ ಎಂದರೆ 2,60,000 ಗಂಟೆಗಳಿಗಿಂತ ಹೆಚ್ಚು ಕಂಟೆಂಟ್ ಹೊಂದಿದ ಮತ್ತು ವಿಶ್ವದ ಅತಿದೊಡ್ಡ ಹಿಂದಿ ಚಲನಚಿತ್ರಗಳ ಲೈಬ್ರರಿ ಹೊಂದಿರುವ ಹೆಗ್ಗಳಿಕೆ ಸಂಸ್ಥೆಯದ್ದಾಗಿದೆ. ಇದಲ್ಲದೆ ವಿವಿಧ ಭಾಷೆಗಳ ಸುಮಾರು 4800ಕ್ಕೂ ಅಧಿಕ ಸಿನೆಮಾಗಳ ಹಕ್ಕುಗಳನ್ನು ಸಹ ಸಂಸ್ಥೆ ಹೊಂದಿದೆ. ಜೊತೆಗೆ ಸಂಸ್ಥೆ ಖುದ್ದಾಗಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದೆಯಲ್ಲದೇ ಹಲವಾರು ಸಿನೆಮಾಗಳಿಗೆ ವಿತರಣಾ ಜವಾಬ್ದಾರಿಯನ್ನೂ ನಿರ್ವಹಿಸಿದೆ. ಸಂಗೀತ ಕ್ಷೇತ್ರದಲ್ಲೂ ಸಂಸ್ಥೆ ಛಾಪು ಮೂಡಿಸಿದ್ದು, ಜೀ-5 ಆಯಪ್ ಮೂಲಕ ಡಿಜಿಟಲ್ ಕ್ಷೇತ್ರದಲ್ಲೂ ಅಪಾರ ಜನಮನ್ನಣೆ ಗಳಿಸಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಜೀ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪುನೀತ್ ಗೋಯೆಂಕಾ ರವರು “ಕರ್ನಾಟಕ ಸರ್ಕಾರವು ತನ್ನ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಕೆಲವು ಬಲವಾದ ಕ್ರಮಗಳನ್ನು ತೆಗೆದುಕೊಂಡಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಬಲವಾದ ಬೆಂಬಲವನ್ನು ನೀಡಲು ಜೀ ಬದ್ಧವಾಗಿದೆ. ದಾನ ಮಾಡಿದ ಆರೋಗ್ಯ ರಕ್ಷಣೆಯ ಅಗತ್ಯತೆಗಳು ಸಾಂಕ್ರಾಮಿಕ ರೋಗದಿಂದಾಗಿ ಎದುರಾಗುವ ಸವಾಲುಗಳನ್ನು ಎದುರಿಸಲು ಮತ್ತು ಅದರ ಒಟ್ಟಾರೆ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ ಎಂದು ಹೇಳಿದರು.
ರಾಜ್ಯದ ಜನರನ್ನು ಸುರಕ್ಷಿತವಾಗಿಡಲು ಮತ್ತು ಕೋವಿಡ್ -19 ವಿರುದ್ಧದ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಕರ್ನಾಟಕ ಸರ್ಕಾರ ಎಲ್ಲವನ್ನು ಮಾಡುತ್ತಿದೆ. ಕೋವಿಡ್ -19 ಪ್ರತಿಕ್ರಿಯೆ ಮತ್ತು ಪರಿಹಾರದ ಅಗತ್ಯವಿರುವ ಈ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಪುನೀತ್ ಗೋಯೆಂಕಾ ಮತ್ತು ಜೀ ಸಮೂಹಕ್ಕೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಬಿ.ಶ್ರೀ ರಾಮುಲು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತಾರಾ ಅನುರಾಧ, ಜ಼ೀ ವಾಹಿನಿಯ ಸಿನಿಯರ್ ಬ್ರ್ಯಾಂಡ ಮಾನ್ಯೇಜರ ಬಿ. ಆರ್.ಶ್ರೀರಾಮ, ಪಿಆರ್ ಶ್ವೇತಾ ಎಸ್, ಉಪಸ್ಥಿತರಿದ್ದರು. ವಿಜೆ ಚೈತ್ರಾ ನಿರೂಪಿಸಿದರು.
Pingback: 꽃계열 개나리