ರಮೇಶ್ ಅರವಿಂದ್ ಅವರು ಯೂಟ್ಯೂಬ್ ವಾಹಿನಿಯೊಂದನ್ನು ಲಾಂಚ್ ಮಾಡಿದ್ದಾರೆ. ಲಾಕ್ಡೌನ್ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾದ ಯೂಟ್ಯೂಬ್ ವಾಹಿನಿಗಳಿಗೆ ಕೊರತೆ ಇಲ್ಲ. ಆದರೆ ಇದು ಅವೆಲ್ಲಕ್ಕಿಂತ ವಿಭಿನ್ನವೆನಿಸಿದ್ದು, ಆ ಕಾರಣದಿಂದಾಗಿಯೇ ಸ್ವತಃ ಲಾಂಚ್ ಮಾಡಲು ಮುಂದಾದೆ ಎಂದು ರಮೇಶ್ ಅವರು ತಿಳಿಸಿದ್ದಾರೆ. ‘positive picture’ಹೆಸರಿನ ಈ ವಾಹಿನಿಯಲ್ಲಿ ಸಿನಿಮಾರಂಗದ ಪಾಸಿಟಿವ್ ಸಂಗತಿಗಳ ಬಗ್ಗೆ ಹೇಳಲಾಗುವುದು ಎಂದು ವಾಹಿನಿಯ ನಿರ್ದೇಶಕ, ಪತ್ರಕರ್ತ ಶಶಿಕರ ಪಾತೂರು ತಮ್ಮಲ್ಲಿ ತಿಳಿಸಿರುವುದೇ ತಮಗೆ ಆಕರ್ಷಕವಾದ ಅಂಶ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
“ಸಾಮಾನ್ಯವಾಗಿ ಯಾವುದೇ ಯೂಟ್ಯೂಬ್ ಅಥವಾ ವೆಬ್ಸೈಟ್ ಸುದ್ದಿಗಳು ನೆಗೆಟಿವ್ ಸುದ್ದಿ ಅಥವಾ ನೆಗೆಟಿವ್ ಶೀರ್ಷಿಕೆಗಳ ಮೂಲಕವೇ ನೋಡುಗರನ್ನು ಸೆಳೆಯುತ್ತವೆ. ವಿಪರ್ಯಾಸ ಎನ್ನುವಂತೆ ಅವುಗಳಿಗೆ ಸಾಕಷ್ಟು ವ್ಯೂವ್ಸ್ ಕೂಡ ಬೀಳುತ್ತವೆ. ಹಾಗೆ ಅದನ್ನೇ ಯಶಸ್ಸಿನ ಸೂತ್ರ ಎಂದುಕೊಂಡು ಅಂಥ ಸುದ್ದಿ ಹರಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಅವೆಲ್ಲ ಸರ್ಕಸ್ ರಿವಾಲ್ವರ್ ನ ಹಾಗೆ. ಒಂದಲ್ಲ ಒಂದು ದಿನ ಅದು ನಮ್ಮ ಕಡೆಗೂ ತಿರುಗಿ ಬಿಡುತ್ತದೆ. ಹಾಗಾಗಿ ಪಾಸಿಟಿವ್ ಕಡೆಗೆ ಗಮನ ಕೊಡುವುದೇ ಉತ್ತಮ. ಅದನ್ನು ‘ಪಾಸಿಟಿವ್ ಪಿಕ್ಚರ್’ ಮಾಡುವುದೆಂಬ ಭರವಸೆ ಇದೆ. ತಂಡಕ್ಕೆ ಒಳ್ಳೆಯದಾಗಲಿ” ಎಂದಿದ್ದಾರೆ ರಮೇಶ್ ಅರವಿಂದ್.
‘ಪಾಸಿಟಿವ್ ಪಿಕ್ಚರ್’ ಯೂಟ್ಯೂಬ್ ವಾಹಿನಿಯ ಮೂಲಕ ಸಿನಿಮಾರಂಗದ ಖ್ಯಾತನಾಮರ ಸಂದರ್ಶನಗಳು, ಹೊಸಬರ ಪರಿಚಯಗಳು, ಸಿನಿಮಾ ಚಿತ್ರೀಕರಣದ ಲೊಕೇಶನ್ ಭೇಟಿ ಮೊದಲಾದವುಗಳ ಜತೆಗೆ `ತಾರೆಯರ ಸ್ವಗತ’ ಎನ್ನುವ ವಿಶೇಷ ಕಾರ್ಯಕ್ರಮ ಕೂಡ ಪ್ರಸಾರವಾಗಲಿದೆ. ಆಸಕ್ತರು ಇಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡುವ ಮೂಲಕ ‘ಪಾಸಿಟಿವ್ ಪಿಕ್ಚರ್’ ಯೂಟ್ಯೂಬ್ ವಾಹಿನಿಯನ್ನು ಸಬ್ ಸ್ರ್ಕೈಬ್ ಮಾಡಿಕೊಳ್ಳಬಹುದು.
Be the first to comment