ರೋರಿಂಗ್ ಸ್ಟಾರ್ ಶ್ರೀಮುರಳಿ ಟೀಸರ್ ಅನ್ನು ಲಾಂಚ್ ಮಾಡಿದರೆ, ಕ್ಯಾರೆಕ್ಟರ್ ಟೀಸರ್ ನಲ್ಲಿ ರಾಂಕಿಂಗ್ ಸ್ಟಾರ್ ಯಶ್ರ ಧ್ವನಿ ನೀಡಿ ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದರು. ಚಿತ್ರಕ್ಕೆ ಶುಭ ಹಾರೈಸಿ ಮಾತನಾಡಿದ ನಟ ಶ್ರೀಮುರಳಿ, ಸೂಪರ್ಸ್ಟಾರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಒಬ್ಬ ಸ್ಟಾರ್ ನಟ ಬಂದಂತಾಗಿದ್ದು, ಸರಳ, ಪ್ರೀತಿ ಹಾಗೂ ಗೌರವದಿಂದ ಮುಂದೆ ಸಾಗಿ ಯಶಸ್ವಿ ನಟನಾಗಿ ಚಿತ್ರರಂಗದಲ್ಲಿ ಮಿಂಚಲಿ, ಉಪ್ಪಿ ಸಾರ್ರಂತಹ ಚಿಕ್ಕಪ್ಪ ಸಿಕ್ಕಿರುವುದು ನಿರಂಜನ್ಗೆ ವರದಾನ ಆತ ದೊಡ್ಡ ಮಟ್ಟದ ಸ್ಟಾರ್ ಆಗಲಿ ಎನ್ನುತ್ತಾ, ನಾನು ಕೂಡ ಉಪೇಂದ್ರ ಅವರ ಪಕ್ಕಾ ಅಭಿಮಾನಿ ಬ್ಲ್ಯಾಕ್ನಲ್ಲಿ ಟಿಕೆಟ್ ಪಡೆದು ಅವರ ಚಿತ್ರಗಳನ್ನು ನೋಡಿದ್ದೇನೆ, ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದರು.
ನಂತರ ನಟ ಉಪೇಂದ್ರ ಮಾತನಾಡಿ, ನಾನು ಬಹಳಷ್ಟು ವಿಚಾರಗಳನ್ನು ಹೇಳಿದ್ದೇನೆ, ನಿರಂಜನ್ ಕೂಡ ಈಗಿನ ಟ್ರೆಂಡ್ಗೆ ತಕ್ಕಂತೆ ವರ್ಕೌಟ್ ಮಾಡಿಕೊಂಡು ಪೂರ್ವ ತಯಾರಿಯೊಂದಿಗೆ ಬರುತ್ತಿದ್ದಾನೆ, ಕೊರೊನಾ ನಡುವೆಯೂ ಹೊಸ ಚೈತನ್ಯ ತುಂಬಲು ಸೂಪರ್ಸ್ಟಾರ್ ಆಗಿ ಬರುತ್ತಿದ್ದಾನೆ,
ಸ್ಯಾಂಡಲ್ವುಡ್ನಲ್ಲಿ ಇನ್ನೂ ಅನೇಕ ಸೂಪರ್ಸ್ಟಾರ್ಗಳು ಬಂದು ಚಿತ್ರರಂಗವನ್ನು ಬೆಳೆಸಲಿ, ನನಗೆ ನನ್ನ ಅಣ್ಣನ ಮಗನೇ ಕಾಂಪಿಟೇಷನ್ ಆಗಬಹುದು, ನನ್ನ ನಿರ್ದೇಶನ ಹಾಗೂ ನಟನೆಯಲ್ಲಿ ಶ್ರೀಮುರಳಿ ಆಸೆಯಂತೆ ಒಟ್ಟೊಟ್ಟಿಗೆ ಬರುತ್ತೇವೆ, ನಿರಂಜನ್ಗೂ ಕಾಂಪಿಟೇಷನ್ ಕೊಡುತ್ತೇವೆ, ಉತ್ತಮ ಚಿತ್ರಗಳು ಬರುವಂತಾಗಲಿ ಎಂದರು.
ನಟ ನಿರಂಜನ್ ಮಾತನಾಡಿ, ನಾನು ಚಿತ್ರರಂಗಕ್ಕೆ ಬರಲು ನನ್ನ ಚಿಕ್ಕಪ್ಪ ಉಪೇಂದ್ರ ಹಾಗೂ ಚಿಕ್ಕಮ್ಮ ಪ್ರಿಯಾಂಕ ಬಹಳಷ್ಟು ಸಹಕಾರಿಯಾಗಿದ್ದರು, ಸಿನಿಮಾ ಜಗತ್ತಿಗೆ ಸಾಕಷ್ಟು ತಯಾರಿ ಮಾಡಿಕೊಂಡು ಬರುತ್ತಿದ್ದೇನೆ, ನನ್ನ ಹುಟ್ಟುಹಬ್ಬದ ಉಡುಗೊರೆಯಾಗಿ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ಹೊರಬಂದಿರುವುದು ಸಂತಸ ತಂದಿದೆ,
ಸದಭಿರುಚಿಯ ಚಿತ್ರಗಳನ್ನು ನೀಡಲು ಪ್ರಯತ್ನ ಮಾಡುತ್ತೇನೆ, ನನಗೆ ಶುಭಕೋರಲು ಬಂದಿರುವ ನನ್ನ ಕುಟುಂಬಸ್ಥರು, ಸ್ನೇಹಿತರು , ಸಿನಿಮಾ ಅಭಿಮಾನಿಗಳು ಹಾಗೂ ಮಾಧ್ಯಮದವರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ, ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು.
ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಮಾತನಾಡಿ, ಈ ಟೈಟಲ್ ಬಳಸುವುದು ಅಷ್ಟು ಸುಲಭದ ಮಾತಲ್ಲ, ಇದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಬಂದಿದ್ದೇನೆ, ಈ ಚಿತ್ರ ಖಂಡಿತ ಬೇರೆಯದೇ ಟ್ರೆಂಡ್ ಅನ್ನು ಕ್ರಿಯೇಟ್ ಮಾಡುತ್ತದೆ,
ಉಪೇಂದ್ರ ಸಾರ್ರವರ ಸಲಹೆ ಮತ್ತು ಸೂಚನೆ ನಮಗೆ ಬೆನ್ನೆಲುಬು ಸದ್ಯ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಮುಂದೆ ಒಂದೊಂದೇ ವಿಚಾರಗಳನ್ನು ಹೇಳುತ್ತೇವೆ, ಈ ಚಿತ್ರದ ಟೈಲರ್ ಹಾಗೂ ಹಾಡುಗಳನ್ನು ಆನಂದ್ ಯೂಟ್ಯೂಬ್ನಲ್ಲಿ ವೀಕ್ಷಿಸಬಹುದು, ಮುಂದಿನ ವರ್ಷ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ ಎಂದು ಹೇಳಿದರು.
ಉಳಿದಂತೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಸೌಂದರ್ಯಜಗದೀಶ್, ನಟಿ ಪ್ರಿಯಾಂಕಾ ಉಪೇಂದ್ರ, ನಿರ್ದೇಶಕರಾದ ಚೇತನ್ಕುಮಾರ್, ಮಹೇಶ್ ಶುಭ , ನಾಯಕನಟ ನಿರಂಜನ್ರ ತಂದೆ, ತಾಯಿ, ಕುಟುಂಬದ ಪ್ರಮುಖರು ಆಗಮಿಸಿ ಶುಭ ಕೋರಿದರು.
2002ರಲ್ಲಿ ಬಿಡುಗಡೆಗೊಂಡಿದ್ದ ಸೂಪಸ್ಟಾರ್ ಚಿತ್ರದಲ್ಲಿ ಹುಚ್ಚು ಪ್ರೇಮಿ ಹಾಗೂ ಒಬ್ಬ ಸಂಗೀತ ಗಾರ ಜೀವನದ ಎಳೆಯನ್ನು ಒಳಗೊಂಡಿತ್ತು. ಈಗಿನ ಸೂಪರ್ಸ್ಟಾರ್ನಲ್ಲಿ ನಾಯಕ ಒಬ್ಬ ಡ್ಯಾನ್ಸರ್ ಆಗಿದ್ದು, ಅವನು ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕೆಂಬ ಗುರಿಯನ್ನು ಇಟ್ಟು ಕೊಂಡಿರುತ್ತಾನೆ, ಅವನು ಅದರಲ್ಲಿ ಹೇಗೆ ಯಶಸ್ವಿಯಾಗುತ್ತಾನೆ ಎಂಬುದರ ಕಥೆ ಹೊಂದಿ ರುವುದರಿಂದ ಚಿತ್ರಕ್ಕೆ ಸೂಪರ್ ಸ್ಟಾರ್ ಎಂಬ ಹೆಸರನ್ನಿಡಲಾಗಿದೆ.
ನಿರಂಜನ್ ಉಪೇಂದ್ರ ಈ ಚಿತ್ರದ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ್ದಾರಂತೆ. ಈಗಾಗಲೇ ಒಂದು ಶೆಡ್ಯೂಲ್ ಚಿತ್ರೀಕರಣ ಪೂರೈಸಿಕೊಂಡಿರುವ ಚಿತ್ರ ತಂಡವು ಅಕ್ಟೋಬರ್ನಿಂದ 2ನೇ ಹಂತದ ಚಿತ್ರೀಕರಣವನ್ನು ಆರಂಭಿಸಲಿದ್ದಾರಂತೆ. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರಶಂಸೆಯನ್ನು ಪಡೆದು ಕೊಳ್ಳುತ್ತಿದೆ.
ಆರ್.ವಿ.ಬಿ ಸಿನಿಮಾಸ್ ನಡಿ ರಮೇಶ್ ಬಾಬು ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ಕಥೆ, ಚಿತ್ರಕಥೆಯನ್ನು ಅವರೇ ಒದಗಿಸಿದ್ದಾರೆ. ರಾಘವೇಂದ್ರ .ವಿ ಸಂಗೀತ, ವಿಜಯ್ ಎಂ. ಕುಮಾರ್ ಸಂಕಲನ, ಯೋಗಿ ಛಾಯಾಗ್ರಹಣ ಚಿತ್ರಕ್ಕಿದೆ.
ಬಹುತೇಕ ಸ್ಟಾರ್ ಮಕ್ಕಳು ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವಂತೆ ಉಪ್ಪಿ ಕುಟುಂಬದ ಕುಡಿ ನಿರಂಜನ್ ಕೂಡ ಚಿತ್ರರಂಗದಲ್ಲಿ ಭದ್ರ ನೆಲೆ ಕಾಣಲು ಸಿದ್ಧರಾಗುತ್ತಿದ್ದಾರೆ.
Be the first to comment