ಎಲ್ಲ ಬಣ್ಣಗಳನ್ನು ಮಸಿ ಮಾಡಿದ ಪೈಂಟರ್..!
ಚಿತ್ರ: ದಿ ಪೈಂಟರ್
ತಾರಾಗಣ: ವೆಂಕಟ್ ಭಾರದ್ವಾಜ್ ಮತ್ತು ಇತರರು
ನಿರ್ದೇಶನ: ವೆಂಕಟ್ ಭಾರದ್ವಾಜ್
ಲಾಕ್ಡೌನ್ ಶುರುವಾದಾಗ ಬಳಿಕ ಸ್ಥಗಿತವಾದ ಚಿತ್ರರಂಗ ಲಾಕ್ಡೌನ್ ಮುಗಿದ ಬಳಿಕವೂ ಸಂಪೂರ್ಣವಾಗಿ ಸಕ್ರಿಯವಾಗಿಲ್ಲ. ಆದರೆ `ದಿ ಪೈಂಟರ್’ ಎನ್ನುವ ಸಿನಿಮಾ ಸಂಪೂರ್ಣವಾಗಿ ಲಾಕ್ಡೌನಲ್ಲೇ ಚಿತ್ರೀಕರಿಸಿ ಪ್ರಸ್ತುತ ಎಟಿಟಿ ಮಾಧ್ಯಮದ ಮೂಲಕ ತೆರೆಗೆ ಬಂದಿದೆ. ಆದರೆ ಅಂಥದೊಂದು ಸಿನಿಮಾ ಹೇಗಿದೆ ಎನ್ನುವ ಪ್ರಶ್ನೆಗೆ ಚಿತ್ರ ಸಂಪೂರ್ಣ ಮಾಡಿದ್ದೇ ಸಾಧನೆ ಎನ್ನುವಂತೆ ಗೋಚರಿಸುತ್ತಿದೆ.
ಕೊರೊನಾ ಕಾರಣದಿಂದ ಶುರುವಾದ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಊರುಗಳಿಗೆ ಹಿಂದಿರುಗಲು ಬೀದಿಗಿಳಿದು ನಡೆದು ಸಾವಿನಂಥ ಕಷ್ಟ ಕಂಡ ದಿನಗೂಲಿ ಕಾರ್ಮಿಕರನ್ನು ನಾವು ಕಣ್ಣಾರೆ ಕಂಡಿದ್ದೇವೆ. ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ತೋರಿಸಿವೆ ಕೂಡ. ದಿ ಪೈಂಟರ್ ಎನ್ನುವ ಈ ಚಿತ್ರ ಅಂಥ ಒಬ್ಬ ಕೂಲಿ ಕಾರ್ಮಿಕನ ಬವಣೆಯನ್ನು ತೋರಿಸುತ್ತಿದೆಯೇನೋ ಎಂದು ನೋಡಿದರೆ ಇಲ್ಲ! ಹಸಿವಿನಿಂದ ಒಂದು ಹೊತ್ತಿನ ಆಹಾರ ಮತ್ತು ಹಣಕ್ಕಾಗಿ ಪೈಂಟರ್ ಒಂದು ಮನೆಯೊಳಗೆ ಕದ್ದು ಮುಚ್ಚಿ ಸೇರಿಕೊಳ್ಳುತ್ತಾನೆ. ಹಾಗೆ ಸೇರಿಕೊಂಡವನು ಮನೆಯ ಕೋಣೆಯೊಳಗೆ ಲಾಕ್ ಆದಾಗ ಮನೆ ಮಂದಿಗೆ ಅದು ಯಾರು ಎನ್ನುವ ಆತಂಕ ಕಾಡುತ್ತದೆ. ಆದರೆ ಅವರ ನೆರವಿಗೆ ನಮ್ಮ ಪೊಲೀಸ್ ವ್ಯವಸ್ಥೆ ಸೇರಿದಂತೆ ಯಾರೂ ಮುಂದೆ ಬರುವುದಿಲ್ಲ. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಆತ ಒಬ್ಬ ಪೈಂಟರ್ ಎನ್ನುವುದನ್ನು ಕಾರ್ಪೋರೇಟರ್ ಹೇಳುತ್ತಾರೆ. ಜತೆಯಲ್ಲೇ, “ತನ್ನಿಂದ ಹಣ ಪಡೆದುಕೊಂಡು ಹೋಗಿ ಕೆಲಸಕ್ಕೆ ಬಂದಿಲ್ಲ” ಎನ್ನುವ ಆಪಾದನೆಯನ್ನು ಕೂಡ ಮಾಡುತ್ತಾನೆ. ಒಟ್ಟಿನಲ್ಲಿ ದಿನಗೂಲಿ ನೌಕರನ ಕಷ್ಟವನ್ನು ಹೇಳುತ್ತದೆ ಎನ್ನುವ ಚಿತ್ರ ಆತ ಅಪಾಯಕಾರಿ ಎನ್ನುವಂತೆ ತೋರಿಸಿರುವುದು ಮಾತ್ರ ವಿಪರ್ಯಾಸ.
ಮುಖ್ಯ ಪಾತ್ರದ ಸ್ಥಿತಿ ಹೀಗಾದರೆ ಇದರ ನಡುವೆ ದಿನಗೂಲಿ ಕಾರ್ಮಿಕರ ಹೆಸರಲ್ಲಿ ಫೇಕ್ ಐಡಿ ಮಾಡಿಕೊಂಡು ಹಣ ಕೊಳ್ಳೆ ಹೊಡೆಯಲಾಗತ್ತಿದೆ ಎನ್ನುವುದನ್ನು ಕೂಡ ಚಿತ್ರದ ಇನ್ನೊಂದೆರಡು ಪಾತ್ರಗಳ ಮೂಲಕ ತೋರಿಸಿದ್ದಾರೆ ನಿರ್ದೇಶಕರು. ಮೋಸ ಮಾಡುವವರು ಎಲ್ಲ ಕಾಲದಲ್ಲಿಯೂ ಇದ್ದಾರೆ ನಿಜ. ಮಾತ್ರವಲ್ಲ ಇಂದಿನ ಪರಿಸ್ಥಿತಿಯಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವಗ ಪ್ರತಿಯೊಬ್ಬರು ಯೋಚಿಸಿ, ವಾಸ್ತವ ಅರಿತುಕೊಂಡೇ ಸಹಾಯಹಸ್ತ ಚಾಚುವಷ್ಟು ನಾಗರಿಕರಿದ್ದಾರೆ. ಅಂಥ ಸಂದರ್ಭದಲ್ಲಿ ಕಾರ್ಮಿಕರ ಸೋಗಿನಲ್ಲಿ ಯಾರೋ ದುಡ್ಡುಮಾಡುತ್ತಾರೆ ಎನ್ನುವ ವಿರಳ ಉದಾಹರಣೆಯನ್ನೇ ಹೈಲೈಟ್ ಮಾಡಿ ತೋರಿಸಿರುವುದು ವಿಪರ್ಯಾಸ. “ಮನೆಗೆ ಕೆಲಸಕ್ಕೆ ಬರಲ್ಲ ಆದರೆ ಸಂಬಳ ಕೊಡಿ” ಎನ್ನುವ ಕೆಲಸದಾಕೆ ಅದಕ್ಕೆ ಮತ್ತೊಂದು ಉದಾಹರಣೆ. ಆದರೆ ಮನೆ ಮಾಲಕಿಯರೇ ಕೆಲಸದವರನ್ನು ಒಳಗೆ ಸೇರಿಸಲು ಭಯಪಟ್ಟು ಕೆಲಸ ಬಿಡಿಸಿ ಕಳಿಸುತ್ತಿದ್ದರು ಎನ್ನುವುದು ನಿಜ.
ಸಂಪೂರ್ಣ ಸಿನಿಮಾ ಲಾಕ್ಡೌನ್ ಸಂದರ್ಭದಲ್ಲಿ ಚಿತ್ರೀಕರಿಸಿರುವ ಕಾರಣ, ಮೇಕಿಂಗ್ ನಲ್ಲಿ ಸಾಕಷ್ಟು ಕೊರತೆಗಳು ಎದ್ದು ಕಾಣುತ್ತವೆ. ಮಾತ್ರವಲ್ಲ, ನಿರ್ದೇಶಕರಿಗೆ ಕಲಾವಿದರು ಸಿಗದೆ, ಕೈಗೆ ಸಿಕ್ಕವರಿಗೆ ಅಭಿನಯ ಪಾಠ ಹೇಳಿಕೊಟ್ಟಂತೆ ಕಾಣಿಸುತ್ತದೆ. ಚಿತ್ರದಲ್ಲಿ ಊರಲ್ಲಿದ್ದುಕೊಂಡೇ ಊರಲ್ಲಿಲ್ಲ ಎನ್ನುವ ಕಾರ್ಪೊರೇಟರ್ ಅಂಡರ್ ವೇರ್ ಬಾಬು, ರೌಡಿ ರಾಥೋರ್, ಕ್ಷಮಾ, ಶಮೀಕ್ ಮೊದಲಾದ ಪಾತ್ರಗಳಿವೆ. ಒಟ್ಟು ಸುಮಾರು ಹದಿನೈದು ಮಂದಿ ಪಾತ್ರಧಾರಿಗಳಿದ್ದರೂ, ಅದರಲ್ಲಿ ಕಲಾವಿದನಂತೆ ಕಾಣುವುದು ಪೈಂಟರ್ ಪಾತ್ರ ಮಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತ್ರ! ಅದರಲ್ಲಿಯೂ ನಿರ್ದೇಶಕರ ಹಿಂದಿನ ಚಿತ್ರಗಳನ್ನು ನೋಡಿದ ನಿರೀಕ್ಷೆಯಲ್ಲಿ ಈ ಸಿನಿಮಾ ನೋಡಲು ಹೊರಟರೆ ನಿರಾಶೆ ಖಚಿತ.
-ಬಿಸಿಮಾಸ್ ಡಾಟ್ ಇನ್
Be the first to comment