ಪತ್ರಕರ್ತ, ಬರಹಗಾರ ಡಾ. ಶರಣು ಹುಲ್ಲೂರ ಕೊರೋನಾ ಕುರಿತಾದ ಪುಸ್ತಕ ಹೊರತರುತ್ತಿದ್ದಾರೆ. “ಕೊರೋನಾ ಕರುಣಾಜನಕ ಕಥೆಗಳು” ಎಂಬ ಶೀರ್ಷಿಕೆ ಹೊತ್ತು ಬರುತ್ತಿರುವ ಈ ಕೃತಿ, ಲಾಕ್ ಡೌನ್ ನಂತರ ದೇಶದಲ್ಲಾದ ತಲ್ಲಣಗಳ ಸುತ್ತ ಹೆಣದಿರುವ ಸಂಗತಿಗಳನ್ನು ಹೊಂದಿದೆ. ಈ ಪುಸ್ತಕಕ್ಕಾಗಿ ಭಾರತದ ನಾನಾ ಭಾಗಗಳಲ್ಲಿ ನಡೆದ ನೈಜ ಘಟನೆಗಳನ್ನು ಅವರು ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಕೊರೋನಾ ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿದೆ. ಈ ವೈರಸ್ ನಿಂದ ರೋಗಿ ಮೇಲಾದ ಪರಿಣಾಮಕ್ಕಿಂತ, ಸಾಮಾನ್ಯರ ಜನಜೀವನದ ಮೇಲಾದ ಆಘಾತವೇ ದೊಡ್ಡದು. ಈ ವೈರಸ್ ಸಾಮೂಹಿಕವಾಗಿ ಹರಡದಿರುವ ನಿಟ್ಟಿನಲ್ಲಿ ತಗೆದುಕೊಂಡ ಲಾಕ್ ಡೌನ್ ಇಂದಿಗೂ ಚರ್ಚೆ ಆಗುತ್ತಿದೆ. ಈ ಚರ್ಚೆಯ ಸದ್ದಿನಲ್ಲಿ ಬದುಕು ಕಳೆದುಕೊಂಡವರ ನೋವು ಬೀದಿಪಾಲಾಗಿದೆ.
ಈ ವೈರಸ್ ಬಂದಿದ್ದು ಹೇಗೆ? ಅದನ್ನು ಭಾರತಕ್ಕೆ ತಂದವರು ಯಾರು? ಕೊನೆಗೆ ಬಲಿಯಾಗಿದ್ದು ಯಾರು? ಹೀಗೆ ಅನೇಕ ಸಂಗತಿಗಳನ್ನು ಈ ಪುಸ್ತಕ ತೆರದಿಡಲಿದೆ.
ಹಾಗಂತ ಇಲ್ಲಿ ಕಾಲ್ಪನಿಕ ಕಥೆಗಳಿಲ್ಲ. ನೈಜ ಘಟನೆಗಳೇ ಕಥೆಗಳಾಗಿವೆ.
“ಇಪ್ಪತ್ತು ನೈಜ ಘಟನೆಗಳನ್ನು ಈ ಪುಸ್ತಕ ಹೊತ್ತು ತರುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದ ನಾನಾ ಭಾಗಗಳಲ್ಲಿ ನಡೆದ ಹೃದಯ ಹಿಂಡುವಂತಹ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸ್ವತಃ ಸಾವಿರಾರು ಕಿಲೋ ಮೀಟರ್ ಸುತ್ತಿದ್ದೇನೆ.‘ಕೊರೋನಾ- ಕರುಣಾ ಜನಕ ಕಥೆಗಳು’ ಇದು ನನ್ನ ಹನ್ನೊಂದನೇ ಕೃತಿ. ಇದು ಈ ಹೊತ್ತಿನ ತುರ್ತಿಗೆ ಹೆಣೆದಿರುವ ಕಥನ. ಕಾಲಕ್ಕೆ ಸ್ಪಂದಿಸಬೇಕಾದ ಅಗತ್ಯ ಕೂಡ. ಹಾಗಾಗಿ ಆ ಕಾಲವನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟಿದ್ದೇನೆ” ಎನ್ನುತ್ತಾರೆ ಶರಣು. ನಡೆದುಕೊಂಡೇ ಹೋಗಿ ಪ್ರಾಣ ಬಿಟ್ಟ ಗಂಗಮ್ಮ, ಕೊರೋನಾ ವಾರಿಯರ್ಸ್ ನೈಜ ಚಿತ್ರಣ, ಆನ್ಲೈನ್ ನಲ್ಲೆ ಮದುವೆಯಾದರ ಮನಸ್ಥಿತಿ, ಮಕ್ಕಳ ಹಸಿವಿಗೆ ಕಲ್ಲು ಬೇಯಿಸಿದ ತಾಯಿ ಹೃದಯ ಹೀಗೆ ಅನೇಕ ಘಟಕಗಳಿಗೆ ಕಥಾ ಸ್ಪರ್ಶ ನೀಡಿದ್ದಾರೆ.
ಕನ್ನಡದ ಹೆಸರಾಂತ ನಟ ಸತೀಶ್ ನೀನಾಸಂ ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಹುಬ್ಬಳ್ಳಿಯ ಚೇತನಾ ಬುಕ್ ಹೌಸ್ ನ ಚಂದ್ರು ಮಾಡಲಗೇರಿ ಅವರು ಪ್ರಕಾಶಕರು. ಖ್ಯಾತ ಕಲಾವಿದ ಕಿರಣ್ ಮಾಡಾಳ ಅವರ ಚಿತ್ರವನ್ನು ಪುಸ್ತಕದ ಮುಖಪುಟಕ್ಕೆ ಬಳಸಿಕೊಳ್ಳಲಾಗಿದೆ.
ಇದೇ ತಿಂಗಳು ಪುಸ್ತಕ ಲೋಕಾರ್ಪಣೆ ಆಗಲಿದೆ.
Be the first to comment