ಇವರು ನಿಗರ್ವಿ, ಬಹು ಜನ ಉಪಯೋಗಿ ಆಸಾಮಿ. ಕುಳ್ಳಗೆ ಗಂಧ ಹಣೆಯ ಮೇಲೆ ಇಟ್ಟುಕೊಂಡು ಧಮ್ ಎಳೆಯುತ್ತಾ ಇರುವ ವ್ಯಕ್ತಿಯನ್ನು ರವೀಂದ್ರ ಕಲಾಕ್ಷೇತ್ರ ಆಸುಪಾಸಿನಲ್ಲಿ ನೀವು ನೋಡಿಯೇ ಇರುತ್ತಿರ.
ಅವರೇ ಅಜ್ಜಿಮನೆ ನಾಗೇಂದ್ರ. ಕರ್ನಾಟಕ ಸರ್ಕಾರದ ಸಂಸ್ಕೃತಿ ಇಲಾಖೆಯಲ್ಲಿ ಇವರದು ಹಲವಾರು ವರ್ಷಗಳ ವೃತ್ತಿ. ಕರ್ನಾಟಕ ಸರ್ಕಾರ ‘ಸಿರಿಗಂಧ’ ಪುಸ್ತಕ ಮಳಿಗೆಯನ್ನು ಟೌನ್ ಹಾಲ್ ಹಾಗೂ ರವೀಂದ್ರ ಕಲಾಕ್ಷೇತ್ರ ಮಧ್ಯದಲ್ಲಿ ಪ್ರಾರಂಭಿಸಿದಾಗಿನಿಂದ ಅಲ್ಲಿ ಅಜ್ಜಿಮನೆ ನಾಗೇಂದ್ರ ಅವರದೇ ಕಾರುಬಾರು. ಅಜ್ಜಿಮನೆ ನಾಗೇಂದ್ರ ಕನ್ನಡ ಚಿತ್ರ ರಂಗಕ್ಕೂ ಬಹಳ ಪರಿಚಯವಾದ ವ್ಯಕ್ತಿತ್ವ. ಹಲವಾರು ವ್ಯಕ್ತಿಗಳಿಗೆ ಸಹಾಯ ಹಾಗೂ ಸಲಹೆಗಳನ್ನು ಮೂರು ದಶಕಗಳಿಂದ ನೀಡುತ್ತಾ ಬಂದವರು.
ಖ್ಯಾತ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ನಿಕಟವರ್ತಿ ಇವರು. ದೇಸಾಯಿ ಅವರ ಬೆಳದಿಂಗಳ ಬಾಲೆ, ನಮ್ಮೂರ ಮಂದಾರ ಹೂವೆ, ಪ್ರೇಮ ರಾಗ ಹಾಡು ಗೆಳತಿ, ಪರ್ವ, ಮರ್ಮ, ರಮ್ಯ ಚೈತ್ರ ಕಾಲ ಹಾಗೂ ಇನ್ನಿತರ ಸಿನಿಮಾಗಳಿಗೆ ಕಥೆ, ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ದೊಡ್ಡ ಹುಲ್ಲುರು ರೂಕ್ಕೋಜಿ ಅವರ ‘ಡಾ ರಾಜಕುಮಾರ್ ಸಮಗ್ರ ಚರಿತ್ರೆ’ ರಾಷ್ಟ್ರ ಪ್ರಶಸ್ತಿ ಪುಸ್ತಕಕ್ಕು ಸಹ ಅಜ್ಜಿಮನೆ ನಾಗೇಂದ್ರ ಅಪಾರವಾದ ನೆರವನ್ನು ನೀಡಿದ್ದರು.
ಯಾರಿಗೆ ಯಾವಾಗಲೇ ಆದರೂ ಇವರ ಸಹಾಯ ಒದಗಿಬಂದಿದೆ. ಆದರೆ ಯಾವುದನ್ನೂ ಅಪೇಕ್ಷಿಸದೆ ಸಹಾಯ ಮಾಡುವ ಗುಣ ಇವರಲ್ಲಿ ಇದ್ದದ್ದು ವಿಶೇಷ.
ಆದರೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ ಕಾರಣ ಅವರು ಸರ್ಕಾರಿ ಉಧ್ಯಮದಲ್ಲಿ ಇದ್ದವರು. ಆಗಿನ ಕಾಲದ ಮುಖ್ಯ ಮಂತ್ರಿ ಶ್ರೀ ರಾಮಕೃಷ್ಣ ಹೆಗ್ಡೆ ಅವರ ಕಚೇರಿಯಲ್ಲಿ ಅಜ್ಜಿಮನೆ ನಾಗೇಂದ್ರ ಸರ್ಕಾರಿ ಕೆಲಸ ಪ್ರಾರಂಭ ಮಾಡಿ ಪ್ರಸಿದ್ದಿ ಆಗಿದ್ದು ಸರ್ಕಾರಿ ಸೇವೆಯಲ್ಲಿ ನಾಲ್ಕು ದಶಗಳ ಸೇವೆ ಆಗಿದೆ.
ಸದಾ ಹಸನ್ಮುಖಿ, ಯಾರ ಮೇಲೂ ಬೇಜಾರು ಮಾಡಿಕೊಳ್ಳದ ಸ್ವಭಾವ ಜೀವನದಲ್ಲಿ ಒಬ್ಬಂಟಿಗನಾಗಿ ಸಹೋದರಿಯ ಮದುವೆ ಮಾಡಿ ತಾವೊಬ್ಬರೆ ನೆಟಕಲ್ಲಪ್ಪ ಸರ್ಕಲ್ ಬಳಿ ಇರುವ ನಿವಾಸದಲ್ಲಿ ಮೊನ್ನೆ ರಾತ್ರಿ ಅಸುನೀಗಿದ್ದಾರೆ. ಅಜ್ಜಿಮನೆ ನಾಗೇಂದ್ರ ಅವರಿಗೆ ಸಹೋದರಿ ಎಂದರೆ ಪಂಚಪ್ರಾಣ. ಶಿವಮೊಗ್ಗದಲ್ಲಿರುವ ಸಹೋದರಿ ಜೊತೆ ಪ್ರತಿ ರಾತ್ರಿ ಹಾಗೂ ಬೆಳಗ್ಗೆ ದೂರವಾಣಿಯಲ್ಲಿ ಮಾತು ಖಾಯಂ ಆಗಿತ್ತು. ಆದರೆ ನಿನ್ನೆ ಬೆಳಗ್ಗೆ 10 ಘಂಟೆಗೆ ಅಜ್ಜಿಮನೆ ನಾಗೇಂದ್ರ ಫೋನ್ ಉತ್ತರಿಸುತ್ತಾ ಇಲ್ಲ. ತಕ್ಷಣ ಬೆಂಗಳೂರಿನ ಕೆಲವು ವ್ಯಕ್ತಿಗಳಿಗೆ ಫೋನಾಯಿಸಿ ಅವರ ಸಹೋದರಿ ಆಘಾತಕಾರಿ ವಿಷಯವನ್ನು ತಿಳಿದಿದ್ದಾರೆ. ವಿಷಯ ಅರಿತು ಸಹೋದರಿ ಬೆಂಗಳೂರಿಗೆ ಆಗಮಿಸಿ ಅಂತ್ಯಕ್ರಿಯೆ ವ್ಯವಸ್ಥೆ ಮಾಡುತಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಅಜ್ಜಿಮನೆ ನಾಗೇಂದ್ರ ಅವರನ್ನು ಪರೀಕ್ಷೆಗೆ ಸಹ ಒಳಪಡಿಸಲಾಗಿದೆ. ಕಾರಣ ಅವರು 60 ವರ್ಷ ಮೇಲ್ಪಟ್ಟವರು.
ಅಜ್ಜಿಮನೆ ನಾಗೇಂದ್ರ ಒಳ್ಳೆಯ ಹೆಸರಿನ ಜೊತೆಗೆ ಅಪಾರ ಸ್ನೇಹ ಬಳಗವನ್ನು ಬಿಟ್ಟು ಅಗಲಿದ್ದಾರೆ.
Pingback: Devops