ಕನ್ನಡದ ಹೊಸ ತಲೆಮಾರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ “ಮನರೂಪ” ಪ್ರತಿಷ್ಠಿತ ‘10ನೇ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಿರ್ದೇಶಕ ಕಿರಣ್ ಹೆಗಡೆ ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು, ಗೋವಿಂದರಾಜ್ ಅವರು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಹಾಗೂ ಅಮೋಘ್ ಸಿದ್ಧಾರ್ಥ್ ಅತ್ಯುತ್ತಮ ಸಹನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಹೆಸರು ಗಳಿಸಿ ಚಿತ್ರರಂಗಕ್ಕೆ ಕಾಲಿಟ್ಟ ಕಿರಣ್ ಹೆಗಡೆ ನಿರ್ದೇಶಿಸಿದ ಮೊದಲ ಚಿತ್ರ ಮನರೂಪ. ಹೊಸ ತಲೆಮಾರಿನವರ ಆತ್ಮರತಿ, ಪ್ರೀತಿಪಾತ್ರರ ನಿರ್ಲಕ್ಷ್ಯದ ಕಾರಣದಿಂದ ಅವರಲ್ಲಿ ಮೂಡಿದ ನಾರ್ಸಿಸಿಸಂ, ಒಂಟಿತನದ ಸಮಸ್ಯೆ, ಸ್ವಯಂ ಹಾನಿ, ವಿಚ್ಛೇದನ, ಮದುವೆಯಲ್ಲಿ ಪ್ರೀತಿಯ ವೈಫಲ್ಯ, ಮದುವೆಯಿಲ್ಲದ ಬದುಕು, ಲಿವಿಂಗ್ ಟುಗೆದರ್, ಎಲ್ಲದರಿಂದಲೂ ಓಡಿಹೋಗುವ ಬಯಕೆ ಮುಂತಾದ ಭಾವನೆಗಳನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಕೊಟ್ಟ ಚಿತ್ರವಿದು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿರಸಿ ಹಾಗೂ ಸಿದ್ದಾಪುರದ ದಟ್ಟ ಕಾಡಿನಲ್ಲಿ ಇಡೀ ಸಿನಮಾ ಚಿತ್ರೀಕರಣಗೊಂಡಿದೆ.
ಮನರೂಪ ಚಿತ್ರ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವ್ಯಾಪಕ ಮನ್ನಣೆ ಗಳಿಸುತ್ತಿದ್ದು, ಚಿತ್ರ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಟರ್ಕಿಯ ಇಸ್ತಾಂಬುಲ್ ಫಿಲ್ಮ್ ಅವಾರ್ಡ್ಸ್ ಚಲನಚಿತ್ರೋತ್ಸವದಲ್ಲ್ಲಿ, ಅಮೆರಿಕದ ಮಯಾಮಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಹಾಗೂ ಮುಂಬೈನ ಕೆಫೆ ಇರಾನಿ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿಗಳನ್ನು ಪಡೆದಿದೆ. ಈಗ ಅಮೆಜಾನ್ ಪ್ರೈಮ್ನಲ್ಲಿ ಮನರೂಪ ಪ್ರದರ್ಶನಗೊಳ್ಳುತ್ತಿದ್ದು, ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಪ್ರಕೃತಿ ಹಾಗೂ ಸಿನಿಮಾಗಳ ಬಗ್ಗೆ ತಮಗಿರುವ ಕಕ್ಕುಲಾತಿಯನ್ನು ಬೆರೆಸಿ ಮನರೂಪ ಸಿನಿಮಾ ನಿರ್ಮಿಸಿದ ಕಿರಣ್ ಹೆಗಡೆ ಅವರ ಪ್ರತಿಭೆಗೆ ಈ ಪ್ರಶಸ್ತಿಗಳ ಮಳೆಯೇ ಸಾಕ್ಷಿ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮೆಣಸಿ ಎಂಬ ಹಳ್ಳಿಯಿಂದ ಬಂದ ಕಿರಣ್ ಹೆಗಡೆ, ಕನ್ನಡದಲ್ಲಿ ಇವತ್ತಿನ ಕಾಲಕ್ಕೆ ಅತ್ಯಂತ ಪ್ರಸ್ತುತವಾದ ಹಾಗೂ ಹೊಸ ತಲೆಮಾರಿನವರ ನಾರ್ಸಿಸಿಸ್ಟಿಕ್ ಮನಸ್ಥಿತಿಯನ್ನೂ, ಅದರಿಂದ ಸಮಾಜ ಮತ್ತು ಅಸ್ತಿತ್ವವಾದದ ಮೇಲೆ ಆಗುವ ಪ್ರಭಾವವನ್ನೂ ಒಳಗೊಂಡ ಚಿತ್ರವೊಂದನ್ನು ನಿರ್ಮಿಸಬೇಕೆಂಬ ಹಟಕ್ಕೆ ಬಿದ್ದು ಈ ಚಿತ್ರ ನಿರ್ಮಿಸಿದ್ದಾರೆ.
“ನನಗೂ, ನಮ್ಮ ಚಿತ್ರ ತಂಡಕ್ಕೂ ಈ ಪ್ರಶಸ್ತಿಗಳು ಬಹಳ ಅಮೂಲ್ಯವಾದುವು. ಹೊಸ ತಲೆಮಾರಿನವರ ಯೋಚನಾ ಶೈಲಿಯನ್ನೂ, ಅವರ ಮೇಲಿರುವ ಒತ್ತಡವನ್ನೂ ಮತ್ತು ಆ ಒತ್ತಡದಿಂದಾಗಿ ಹೇಗೆ ಅವರು ಬದುಕನ್ನೇ ಅರ್ಥಹೀನವೆಂಬoತೆ ಹಾಗೂ ಅಸ್ತಿತ್ವವಾದವನ್ನೇ ನಿರಾಕರಿಸುವಂತೆ ಬದುಕುತ್ತಾರೆಂಬುದನ್ನೂ ಸಮಾಜಕ್ಕೆ ತೋರಿಸಬೇಕಿತ್ತು.
ಮನರೂಪ ಸಿನಿಮಾದಲ್ಲಿ ಬಹಳ ವಿಕ್ಷಿಪ್ತವಾಗಿ ಇದನ್ನು ತೋರಿಸಿದ್ದೇವೆ. ಈ ಸಿನಿಮಾದಲ್ಲಿರುವ ಕೆಲ ಪಾತ್ರಗಳು ಬಹಳ ವಿಚಿತ್ರವಾಗಿ ವರ್ತಿಸುತ್ತವೆ. ಅವು ಮನುಷ್ಯನ ಬದುಕೇ ಅರ್ಥಹೀನ ಎನ್ನುತ್ತವೆ. ಚಿತ್ರಕತೆ ಬರೆಯುವಾಗ ನನಗೆ ಈ ಪಾತ್ರಗಳು ತಮ್ಮ ಕುಟುಂಬದ ಸದಸ್ಯರಿಂದ ಪ್ರಭಾವಿತರಾಗಿ ಹೀಗೆ ವರ್ತಿಸುತ್ತವೆಯೆಂಬುದು ಇದ್ದಕ್ಕಿದ್ದಂತೆ ಹೊಳೆಯಿತು.
ಕುಟುಂಬದ ಆ ಸದಸ್ಯರ ಬದುಕೂ ವಿಕ್ಷಿಪ್ತವಾಗಿಯೇ ಇದ್ದಿರುತ್ತದೆ. ಹೀಗಾಗಿ ಮನರೂಪದ ಮುಖ್ಯ ಆಶಯವೇ ಹೊಸ ತಲೆಮಾರಿನವರ ಬದುಕು ಹಾಗೂ ಅವರ ಗೊಂದಲಗಳು. ಬದುಕಿನ ಒಂಟಿತನ ಹಾಗೂ ಜೀವನದ ಅರ್ಥಹೀನತೆಯನ್ನು ತೋರಿಸಲು ನಾನು ಕಾಡಿನ ಹಿನ್ನೆಲೆಯನ್ನು ಆಯ್ಕೆ ಮಾಡಿಕೊಂಡೆ.
ಬಹುಶಃ ಈ ಸಿನಿಮಾದ ಕಥಾವಸ್ತುವಿನ ಪ್ರಸ್ತುತತೆ ಹಾಗೂ ಇವತ್ತಿನ ತಲೆಮಾರಿಗೆ ಇದು ಹೇಗೆ ಮಿಡಿಯುತ್ತದೆ ಎಂಬುದು ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಜ್ಯೂರಿಗಳನ್ನು ಆಕರ್ಷಿಸುತ್ತಿರುವುದರಿಂದ ಮನರೂಪ ಸಿನಿಮಾಕ್ಕೆ ಹಾಗೂ ಚಿತ್ರತಂಡಕ್ಕೆ ಸಾಕಷ್ಟು ಪ್ರಶಸ್ತಿಗಳು ಬರುತ್ತಿವೆ ಎಂದು ನಾನು ನಂಬಿದ್ದೇನೆ” ಎನ್ನುತ್ತಾರೆ ಕಿರಣ್ ಹೆಗಡೆ.
ಮನರೂಪದಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಯಶ್ ರಾಮ್ ಹಾಗೂ ಶಿವಪ್ರಸಾದ್ ಹೊಸ ತಲೆಮಾರಿನ ಯುವಕರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅಮೋಘ ಸಿದ್ಧಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಅವರು ನಾರ್ಸಿಸಿಸ್ಟಿಕ್ ಮನಸ್ಥಿತಿಯಲ್ಲಿ ಮಿಂದೆದ್ದ ಮುಸುಕುಧಾರಿಗಳಾಗಿ ಮುಖ್ಯ ಪಾತ್ರಗಳಿಗೆ ಏನೂ ಕಡಿಮೆಯಿಲ್ಲದಂತೆ ನಟಿಸಿದ್ದಾರೆ.
ಯಾವುದೇ ಉದ್ದೇಶವಿಲ್ಲದೆ ಬದುಕುವ ಅವರ ಬದುಕಿನ ಉದ್ದೇಶವೇ ಸಿನಿಮಾಕ್ಕೆ ಥ್ರಿಲ್ ನೀಡುತ್ತದೆ. ಶರವಣ ಸಂಗೀತ ನೀಡಿದ್ದಾರೆ. ಪತ್ರಕರ್ತ ಮತ್ತು ಸಾಹಿತಿ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಈ ಮನರೂಪ ಚಿತ್ರ ಉತ್ತಮ ಪ್ರಶಂಸೆ ಪಡೆದು ಎಲ್ಲರ ಮನಸ್ಸನ್ನು ಗೆದ್ದು ಪ್ರಶಸ್ತಿಗಳನ್ನು ತನ್ನತ್ತ ಬಾಚಿಕೊಳ್ಳುತ್ತಿವೆ. ಈ ಸಂತೋಷವು ಇಡೀ ಚಿತ್ರ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದ್ದು , ಮತ್ತೊಂದು ಚಿತ್ರ ಮಾಡುವುದಕ್ಕೆ ದಾರಿಯನ್ನು ತೋರಿಸುತ್ತದೆ ಎನ್ನಬಹುದು.
Be the first to comment