ಬುಡಕಟ್ಟು ಜನರಿಗೆ ಆಹಾರ ಸಾಮಗ್ರಿ ತಲುಪಿಸಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು

ಕಾಡಂಚಿನ ಜನರ ನೋವಿಗೆ ಮತ್ತೆ ಮಿಡಿದಿದ್ದಾರೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು. ಕಾಡನ್ನೇ ನಂಬಿಕೊಂಡು ಬದುಕುತ್ತಿರುವ ಅನೇಕ ಬುಡಕಟ್ಟು ಕುಟುಂಬಗಳಿಗೆ ಈ ಹಿಂದೆ ಶ್ರುತಿ ಅವರು ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿದ್ದರು. ಈಗ ನೂರೈವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿದ್ದಾರೆ.

ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿದೆ. 21 ದಿನಗಳ ಕಾಲ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅನೇಕರು ಆಹಾರ ಸಿಗದೇ ಪರದಾಡುತ್ತಿದ್ದಾರೆ. ನಗರಗಳಲ್ಲಿ ಇರುವ ಬಡವರು, ವಲಸೆ ಕಾರ್ಮಿಕರಿಗೆ ಕೆಲ ಸಂಘ ಸಂಸ್ಥೆಗಳು ಮತ್ತು ಸರಕಾರ ಸ್ಪಂದಿಸುತ್ತಿದೆ. ಆದರೆ, ಬುಡಕಟ್ಟು ಜನರನ್ನು ಮರೆತಿದೆ. ಅಂಥವರನ್ನು ಗುರುತಿಸಿ, ಸೋಮವಾರ ಶ್ರುತಿ ನಾಯ್ಡು ಆಹಾರ ಸಾಮಾಗ್ರಿಗಳನ್ನು ನೀಡಿದ್ದಾರೆ.

ರಾಜ್ಯದಲ್ಲೇ ಅತೀ ಆತಂಕ ಸೃಷ್ಟಿ ಮಾಡಿರುವ ನಂಜನಗೂಡಿನ ಸಮೀಪದ ಹಾಡಿಗಳಾದ ಡೋರನಕಟ್ಟೆ, ಕೊಟ್ಟನಹಳ್ಳಿ ಮತ್ತು ಚಿಲಕಹಳ್ಳಿಯ ಐನೂರು ಕುಟುಂಬಗಳಿವೆ. ಅದರಲ್ಲಿ ನೂರೈವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳು ಆಗುವಷ್ಟು ಆಹಾರ ಸಾಮಗ್ರಿಗಳನ್ನು ಹಂಚಿಕೆ ಮಾಡಿದ್ದಾರೆ.

ಈ ಕುರಿತು ಶ್ರುತಿ ನಾಯ್ಡು ಹೇಳುವುದು ಹೀಗೆ, “ಈಗಾಗಲೇ ನಮ್ಮ ಮೈಸೂರು ಮಿರ್ಚಿ ರೆಸ್ಟೋರೆಂಟ್‍ನಿಂದ ಮೈಸೂರು ಜನರಿಗೆ ಉಚಿತವಾಗಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ಅದು ನಿರಂತರ ನಡೆದಿದೆ. ಈ ನಡುವೆ ಬುಡಕಟ್ಟು ಜನರಿಗೆ ಆಹಾರ ಸಿಗುತ್ತಿಲ್ಲ ಎಂಬ ಸುದ್ದಿಯನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಆಹಾರ ಸಾಮಾಗ್ರಿಗಳೇ ಸಿದ್ಧವಾಯಿತು. ಆದರೆ, ಅವರನ್ನು ತಲುಪಿಸುವುದೇ ಕಷ್ಟದ ಕೆಲಸ ಆಯಿತು.

ನಂಜನಗೂಡಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದರಿಂದ, ನಂಜನಗೂಡಿನ ಬಹುತೇಕ ರಸ್ತೆಗಳನ್ನು ಮುಚ್ಚಲಾಗಿದೆ. ಹೀಗಾಗಿ ನಾವು ಆಹಾರ ತಲುಪಿಸಬೇಕಾದ ಹಾಡಿಗಳ ರಸ್ತೆಗಳು ಬಂದಾಗಿವೆ. ಹೆಚ್‍ಡಿ ಕೋಟೆಗೆ ಹೋಗಿ ಅಲ್ಲಿಂದ ಮತ್ತೊಂದು ಮಾರ್ಗದತ್ತ ಸಾಗಿ ತಲುಪಿಸಿದ್ದೇವೆ. ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳ ಪ್ಯಾಕ್ ಅದಾಗಿದೆ’ ಎಂದರು.

ಇನ್ನೂ ಮುನ್ನೂರೈವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರದ ಅವಶ್ಯಕತೆ ಇದ್ದು, ಆ ಕುಟುಂಬಗಳು ಕೂಡ ಆಹಾರದ ನಿರೀಕ್ಷೆಯಲ್ಲಿವೆ ಎಂದಿದ್ದಾರೆ ಶ್ರುತಿ ನಾಯ್ಡು.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!