ಡಿ ಬಾಸ್ ಹಾಡಲ್ಲೇ ಓಡುತ್ತಾ ವೈರಸ್..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ ಏನೇ ಮಾಡಿದರೂ ಅದೊಂದು ದಾಖಲೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ವರ್ಷದ ಮಹಾ ಕಂಟಕ ಕೊರೊನೋ ವೈರಸ್ ವಿರುದ್ಧದ ಜಾಗೃತಿಗೂ ದರ್ಶನ್ ಅವರ ಹಾಡನ್ನು ಬಳಸುವ ಮೂಲಕ ವ್ಯಾಪಕವಾಗಿ ಎಚ್ಚರಿಕೆ ಹರಡಲು ತಂಡವೊಂದು ಮುಂದಾಗಿದೆ. ಅವರು ಆಯ್ದುಕೊಂಡಿರುವ ಗೀತೆ ಯಜಮಾನ ಚಿತ್ರದ ‘ಬಸಣ್ಣಿ ಬಾ.. ಬಸಣ್ಣಿ ಬಾ’ ಎನ್ನುವುದು ಮತ್ತೊಂದು ವಿಶೇಷ.

ಕನ್ನಡ ಚಿತ್ರರಂಗದ ವಿಕಟಕವಿ ಎಂದು ಹೆಸರಾಗಿರುವ ಜನಪ್ರಿಯ ನಿರ್ದೇಶಕ ಯೋಗರಾಜ್ ‌ಭಟ್ ಅವರ ಸಾಹಿತ್ಯದಲ್ಲಿ ಮೂಡಿ ಬಂದ ಗೀತೆ ‘ಬಸಣ್ಣಿ ಬಾ..’ ಆಗಿತ್ತು. ಇದೇ ಗೀತೆಯ ಟ್ಯೂನ್ ಇರಿಸಿಕೊಂಡು ಕೊರೊನ ಗೀತೆಗೆ ಪದಗಳನ್ನು ಸೇರಿಸಿದವರು ಪತ್ರಕರ್ತ ಶಶಿಕರ ಪಾತೂರು. ಈಗಾಗಲೇ ವಿ.‌ಮನೋಹರ್ ಮತ್ತು ಆರವ್ ರಿಷಿಕ್ ಸಂಗೀತದಲ್ಲಿ ಒಂದಷ್ಟು ಸಿನಿಮಾ ಹಾಡುಗಳನ್ನು ರಚಿಸಿ ಗುರುತಿಸಿಕೊಂಡ ಶಶಿಕರ ಪಾತೂರು ಬರೆದ ಗೀತೆಗೆ ಕಂಠವಾಗಿರುವವರು ವಿಶ್ವ ದೇವಾಂಗ. ಅವರು ಕರ್ನಾಟಕದ ಜನಪ್ರಿಯ ವಾದ್ಯಗೋಷ್ಠಿ ಕಲಾವಿದ, ಹಿನ್ನೆಲೆ ಗಾಯಕ ಮೋಹನ್ ಕೃಷ್ಣ ಅವರ ತಂಡದಲ್ಲಿ ಹೆಸರಾದವರು. ಪ್ರಸ್ತುತ ಲಾಕ್ಡೌನ್ ಮೂಲಕ ಸಂಪರ್ಕ ಮತ್ತು ಹಾಡಿನ ರೆಕಾರ್ಡಿಂಗ್ ಗೆ ಕಷ್ಟವಾಗಿದ್ದರೂ, ಮೋಹನ್ ಕೃಷ್ಣ ಅವರ ನಿರ್ದೇಶನದ ಮೇರೆಗೆ ವಿಶ್ವ ದೇವಾಂಗ ಅವರು ತಮ್ಮ ಮನೆಯಲ್ಲಿಯೇ ಇದ್ದ ಮಿಕ್ಸರ್, ಲ್ಯಾಪ್ ಟಾಪ್ ಮತ್ತು ಮೈಕ್ ಬಳಸಿಕೊಂಡು ಈ ಹಾಡನ್ನು ಕೇಳುವ ರೀತಿಯಲ್ಲಿ ಮಾಡಿಕೊಟ್ಟಿದ್ದಾರೆ. ಲಾಕ್ಡೌನ್ ಪರಿಣಾಮದಿಂದ ಮೇಕಿಂಗ್ ಗುಣಮಟ್ಟ ನಿರೀಕ್ಷಿಸುವಷ್ಟು ಗಂಭೀರ ಅನಿಸದಿದ್ದರೂ, ಈಗಾಗಲೇ ಏಳುನೂರಕ್ಕೂ ಅಧಿಕ ವೇದಿಕೆಗಳಲ್ಲಿ ಕಾರ್ಯಕ್ರಮ ಈ ನೀಡಿರುವ ವಿಶ್ವ ದೇವಾಂಗ್ ಅವರ ಕಂಠ, ಹಾಡಿರುವ ರೀತಿ ಪ್ರಮುಖ ಆಕರ್ಷಣೆಯೆನಿಸುತ್ತದೆ.

ಹಾಡಿಗೆ ರಾಗಸಂಯೋಜನೆ ನಡೆಸುವುದರ ಜತೆಗೆ ‘ಬಸಣ್ಣಿ ಬಾ.. ಬಸಣ್ಣಿ ಬಾ’ ಗೀತೆಯನ್ನು ಸ್ವತಃ ಆಲಾಪಿಸಿದ್ದರು ಹರಿಕೃಷ್ಣ. ಅವರೊಂದಿಗೆ ಗಾಯಕಿ ಕಂಠ ನೀಡಿದ್ದರು. ಆದರೆ ಕೊರೊನಾ ಹಾಡು ಗಂಡುದನಿಯಲ್ಲಿ ಮಾತ್ರ ಮೂಡಿ ಬಂದಿದೆ. ಹಂಸಲೇಖ ಅವರ ಇನ್ಸ್ಟಿಟ್ಯೂಶನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಯಾಗಿರುವ ವಿಶ್ವ ದೇವಾಂಗ್ ಅಲ್ಲಿ ಕೀ ಬೋರ್ಡ್ ವಿದ್ಯಾರ್ಥಿಯೂ ಹೌದು. ಸುವರ್ಣ ‘ಸ್ಟಾರ್ ಸಿಂಗರ್’ ರಿಯಾಲಿಟಿ ಶೋನಲ್ಲಿ ಟಾಪ್ ಟೆನ್ ಸ್ಪರ್ಧಿಗಳಲ್ಲೊಬ್ಬರಾಗಿದ್ದ ವಿಶ್ವ ಎಂಬಿಎ ಮಾಡಿರುವುದು ವಿಶೇಷ. ವಿಶ್ವ ಅವರಿಗೆ ಹಂಸಲೇಖಾ ಅವರು ತಮ್ಮ ವಿದ್ಯಾಸಂಸ್ಥೆಯ ಮೂಲಕ ಸಂಗೀತದ ಗುರುವಾದರೆ, ಗೀತ ರಚನೆಕಾರ ಶಶಿಕರ ಪಾತೂರು ಅವರು ಬಾಲ್ಯದಿಂದಲೇ ಹಂಸಲೇಖ ಹಾಡುಗಳು, ಸಾಹಿತ್ಯ ಎನ್ನುವುದನ್ನೇ ಸ್ಫೂರ್ತಿಯಾಗಿಸಿಕೊಂಡವರು ಎನ್ನುವುದು ವಿಶೇಷ.ಹಾಡಿನ ಸಾಹಿತ್ಯ, ಗಾಯಕರ ಕಂಠ, ಎಲ್ಲಕ್ಕಿಂತ ಮುಖ್ಯವಾಗಿ ದರ್ಶನ್ ಅವರ ಹಾಡು ಎನ್ನುವ ಕಾರಣಕ್ಕೆ ಭರ್ಜರಿ ಜನಪ್ರಿಯತೆಯೊಂದಿಗೆ ‘ಕೊರೋನ ಗೋ..’ ಗೀತೆ ಚೆನ್ನಾಗಿ ವ್ಯೂವ್ಸ್ ಪಡೆಯುತ್ತಿದೆ. ಹಾಡನ್ನ ಮೆಚ್ಚಿಕೊಂಡಂಥ ಟಿಕ್ಟಾಟ್ ಪ್ರತಿಭೆಗಳು ಈಗಾಗಲೇ ಕೊರೊನ ವೈರಸ್ ಕುರಿತಾದ ಈ ಹಾಡಿಗೆ ಹೆಜ್ಜೆ ಹಾಕಿರುವುದನ್ನು ಕೂಡ ಕಾಣಬಹುದಾಗಿದೆ.

This Article Has 1 Comment
  1. Pingback: 19올넷

Leave a Reply

Your email address will not be published. Required fields are marked *

Translate »
error: Content is protected !!