ಕೊರೊನಾ ಎಫೆಕ್ಟ್ನಿಂದ ಸದ್ಯಕ್ಕೆ ಸಿನಿಮಾ ಚಿತ್ರೀಕರಣವೆಲ್ಲಾ ಬಂದ್ ಆಗಿದೆ. ಸಿನಿಮಾ ಥಿಯೇಟರ್ಗಳು ಕೂಡಾ ಬಂದ್ ಆಗಿದ್ದು ಸಿನಿಪ್ರಿಯರು ಲಾಕ್ ಡೌನ್ ಯಾವಾಗ ಮುಗಿಯುವುದೋ ಎಂದು ಕಾಯುತ್ತಿದ್ದಾರೆ. ಇನ್ನು ಲಾಕ್ ಡೌನ್ ಮುಗಿಯುತ್ತಿದ್ದಂತೆ ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಸಿನಿಮಾ ಮೊದಲು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
‘ಸಲಗ’ ಸಿನಿಮಾ ಮಾತ್ರವಲ್ಲ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗಳ ಸಾಲಿಗೆ ‘ಅಮೃತ್ ಅಪಾರ್ಟ್ಮೆಂಟ್ಸ್’ ಕೂಡಾ ರೆಡಿಯಾಗಿದೆ. ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ಮಿಸಿ, ನಿರ್ದೇಶಿಸಿರುವ ಈ ಸಿನಿಮಾವನ್ನು 60 ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರಿಕರಣವಾಗಿದೆ. ಅಪಾರ್ಟ್ಮೆಂಟ ಮತ್ತು ಬೆಂಗಳೂರು ಸುತ್ತ-ಮುತ್ತ ಚಿತ್ರೀಕರಿಸಲಾಗಿದೆ ಎಂದು ಹೇಳಿದೆ ಚಿತ್ರ ತಂಡ.
ಈ ಚಿತ್ರಕ್ಕೆ ಕಥೆ ಬರೆದಿರುವುದು ಕೂಡಾ ಗುರುರಾಜ್ ಅವರೇ . ಜಿ 9 ಕಮ್ಯುನಿಕೇಶನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಸಿನಿಮಾ ತಯಾರಾಗಿದೆ. ‘ಕೆಜಿಎಫ್’ ಚಿತ್ರದಲ್ಲಿ ಅಭಿನಯಿಸಿರುವ ತಾರಕ್ ಪೊನ್ನಪ್ಪ, ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಅಭಿನಯಿಸಿರುವ ಬಾಲಾಜಿ ಮನೋಹರ್, ‘ಕವಲುದಾರಿ’ ಚಿತ್ರದಲ್ಲಿ ಮಂತ್ರಿಯಾಗಿ ಮಿಂಚಿದ್ದ ಸಂಪತ್ ಕುಮಾರ್ ‘ಅಮೃತ್ ಅಪಾರ್ಟ್ಮೆಂಟ್ಸ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಊರ್ವಶಿ ಗೋವರ್ಧನ್ ಚಿತ್ರದಲ್ಲಿ ನಾಯಕಿ ಆಗಿ ಪರಿಚಯ ಆಗುತ್ತಿದ್ದಾರೆ.
ಚಿತ್ರದ ಹಾಡುಗಳಿಗೆ ಎಸ್.ಡಿ. ಅರವಿಂದ್ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅಜಯ್ ವಾರಿಯರ್ ಧ್ವನಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅರ್ಜುನ್ ಅಜಿತ್ ಛಾಯಾಗ್ರಾಹಣ, ಕೆಂಪರಾಜ್ ಅರಸ್ ಸಂಕಲನ ಇದ್ದು, ಡಾ. ಬಿ.ಆರ್. ಪೊಲೀಸ್ ಪಾಟೀಲ್, ಕೆ. ಕಲ್ಯಾಣ್ ಮತ್ತು ವಿ. ಮನೋಹರ್ ತಲಾ ಒಂದು ಗೀತೆಗಳನ್ನು ರಚಿಸಿದ್ದಾರೆ. ಚಿತ್ರದಲ್ಲಿ ಡಾ. ಸೀತಾ ಕೋಟೆ ವಕೀಲೆಯಾಗಿ, ಮಾನಸಿ ಜೋಷಿ ಖಡಕ್ ಪೊಲೀಸ್ ಅಧಿಕಾರಿ ಆಗಿ ಈ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಮಾಲತೇಶ್, ಜಗದೀಶ್ ಜಾಲ, ಶ್ರವಣ್ ಐತಾಳ್, ಅರುಣ ಮೂರ್ತಿ, ರಾಜು ನೀನಾಸಂ ಹಾಗೂ ಶಂಕರ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಹೇಶ್ ಎಸ್.ಪಿ ಸಹ ನಿರ್ದೇಶನ, ಸುನಿಲ್ ಸಹಾಯಕ ನಿರ್ದೇಶಕ, ಹರೀಶ್ ಮೂರ್ತಿ ಕಾರ್ಯಕಾರಿ ನಿರ್ಮಾಪಕ, ಸುನಿಲ್ ಆರ್.ಡಿ ಮತ್ತು ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದಾರೆ.
Be the first to comment