ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 75 ನೇ ವರ್ಷಾಚರಣೆಯ ಸಲುವಾಗಿ ವಿಶೇಷ ಲೋಗೋವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅವರು ವಾಣಿಜ್ಯ ಮಂಡಳಿಯ ಸಮಸ್ಯೆಗಳಿಗೆ ಇದೇ ತಿಂಗಳೊಳಗೆ ಪರಿಹಾರ ನೀಡುವ ಭರವಸೆಗಳನ್ನು ವ್ಯಕ್ತಪಡಿಸಿದರು.
ಕಲಾವಿದರ ಪ್ರತಿನಿಧಿಯಾಗಿ ಆಗಮಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ನವರಸ ನಾಯಕ ಜಗ್ಗೇಶ್, ಕುಮಾರ್ ಬಂಗಾರಪ್ಪ ಮೊದಲಾದವರು ಫಿಲಂ ಸಿಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳೋ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಪೈರಸಿ ಸಮಸ್ಯೆ , ಕನ್ನಡ ಚಿತ್ರಗಳಿಗೆ ಪ್ರಾಧಾನ್ಯತೆ ನೀಡದಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಸಮಸ್ಯೆ , ಫಿಲ್ಮ್ ಸಿಟಿ ವಿಚಾರ, ಕನ್ನಡ ಚಿತ್ರ ನಿರ್ಮಾಪಕರಿಗೆ ಜಿ.ಎಸ್.ಟಿಗಳ ವಾಪಾಸಾತಿ ಮತ್ತು ಟಿ.ಡಿ.ಎಸ್ ವಿಚಾರ ಮೊದಲಾದವುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಜಯಮಾಲ ಅದನ್ನು ಮಹಿಳಾ ದಿನಾಚರಣೆಯ ಸಂಕೇತವಾಗಿ ಸ್ವೀಕರಿಸಿದರು.
ವಾಣಿಜ್ಯ ಮಂಡಳಿಯಅಧ್ಯಕ್ಷ ಡಿ.ಆರ್.ಜಯರಾಜ್ ಅವರು ಎಲ್ಲರ ಸಹಕಾರವನ್ನು ಕೊಂಡಾಡಿ ಸದ್ಯದಲ್ಲೇ ಅದ್ಧೂರಿ ಸಮಾರಂಭದ ವಿವರ ನೀಡಲಿರುವುದಾಗಿ ತಿಳಿಸಿದರು. ಮಾಜಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಕೆ.ಸಿ.ಎನ್. ಚಂದ್ರಶೇಖರ್. ಹೆಚ್. ಡಿ. ಗಂಗರಾಜ್, ಕೆ.ವಿ.ಗುಪ್ತ, ಥೋಮಸ್ ಡಿ’ಸೋಜಾ, ಸಾ.ರಾ.ಗೋವಿಂದು, ಚಿನ್ನೇಗೌಡ, ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Pingback: binance video