ಚಿತ್ರ ವಿಮರ್ಶೆ : ಮೌನ ಹೇಳುವ ಅದ್ಭುತ ಮಾತು

ಬಿಸಿನಿಮಾಸ್ ಚಿತ್ರ ವಿಮೆರ್ಶ :ಮೌನ ಹೇಳುವ ಅದ್ಭುತ ಮಾತು

ರೆಟಿಂಗ್ 3.5/5

ಚಿತ್ರ – ಮೌನಂ
ನಿರ್ದೇಶಕ – ರಾಜ್ ಪಂಡಿತ್
ನಿರ್ಮಾಪಕ – ಶ್ರೀಹರಿ ರೆಡ್ಡಿ
ಸಂಗೀತ – ಆರವ್ ರುಷಿಕ್
ಛಾಯಾಗ್ರಹಣ – ಶೇಖರ್
ತಾರಾಗಣ – ಅವಿನಾಶ್, ಮಯೂರಿ, ಬಾಲಾಜಿ ಶರ್ಮ, ರಿತೇಶ್ , ಹನುಮಂತೇಗೌಡ, ನಯನ, ಗುಣವಂತ ಮಂಜು, ಕೆಂಪೇಗೌಡ ಹಾಗೂ ಮುಂತಾದವರು…

ಮೌನಕ್ಕೆ ಭಾವನೆಗಳೇ ಇಲ್ಲವೆಂಬುದು ಹಲವರ ಭಾವನೆ. ಆದರೆ ಮೌನವೇ ಒಂದು ಅದ್ಭುತ ಭಾವನೆಯೆಂಬ ಸತ್ಯವನ್ನು ಎಲ್ಲರೂ ಮರೆತಿದ್ದಾರೆ. ಅಲ್ಲಿ ಪ್ರೀತಿಯಿದೆ, ಕಾಳಜಿ, ನೋವು, ಕೋಪ, ಅಹಂಕಾರ, ಸ್ವಾಭಿಮಾನ ಎಲ್ಲವೂ ಇದೆ. ಆದರೆ ತೋರಿಸುವ ರೀತಿ ಬೇರೆಯೆಂಬುದು ಮಾತ್ರ ಸತ್ಯ ಭಾವನೆಗಳನ್ನು ತೋರಿಸಲು ಮಾತೇ ಪ್ರಧಾನವಾದ ಮಾರ್ಗ. ಅದು ಯಾವುದೇ ಆಗಿರಬಹುದು. ಪ್ರೀತಿ ಕೋಪ ಹೀಗೆ ಎಲ್ಲ. ಮಾತಿನಲ್ಲಿ ಹೇಳಿದಾಗ ಅದು ಅರ್ಥವಾಗಬೇಕಾದ ವ್ಯಕ್ತಿಗೆ ನೇರವಾಗಿ ಅರ್ಥವಾಗುತ್ತದೆ. ಆದರೆ ಮೌನ ಹಾಗಲ್ಲ. ಅದು ಅರ್ಥವಾಗಬೇಕಾದರೆ ಎರಡು ವ್ಯಕ್ತಿಗಳ ನಡುವೆ ಸಂಭಾಷಣೆಯೇ ನಡೆಯಬೇಕೆಂದಿಲ್ಲ. ಎಲ್ಲ ಭಾವನೆಗಳೂ ಹೃದಯವನ್ನು ತಟ್ಟುತ್ತವೆ. ಅಷ್ಟು ಶಕ್ತಿಯಿದೆ.

ಮೌನದ ಈ ತಾಕತ್ತನ್ನೇ ಬೇಸ್ ಆಗಿಟ್ಟುಕೊಂಡು ‘ಮೌನಂ’ ಚಿತ್ರ ಮಾಡಿ ನಿರ್ದೇಶಕ ರಾಜ್‌ಪಂಡಿತ್ ಗೆದ್ದಿದ್ದಾರೆ. ಹಾಗಿದ್ದರೆ ರಾಜ್ ಚಿತ್ರದಲ್ಲಿ ಹೇಳಿರೋದಾದರೂ ಏನು? ಚಿತ್ರದ ಆರಂಭದಲ್ಲಿ ಸಮಾಜ ಒಪ್ಪದ ಸಂಬಂಧದ ಬಗ್ಗೆ ನಿರ್ದೇಶಕರು ಹೇಳುತ್ತಿದ್ದಾರೆ ಅನ್ನಿಸಿದರೂ, ಕ್ಲೈಮ್ಯಾಕ್ಸ್ ಬೇರೆಯದೆ ಆದ ಕತೆ ಹೇಳುತ್ತದೆ. ಎರಡೂವರೆ ತಾಸಿನ ಚಿತ್ರದ ಪಯಣ ನೋಡುಗನ ಒಂದಷ್ಟು ಭಾವನೆಗಳನ್ನು ಕೆದಕಿ ಹೃದಯ ಭಾರವಾಗುವಂತೆ ಮಾಡುತ್ತದೆ. ಅದು ಈ ಚಿತ್ರಕ್ಕಿರುವ ದೊಡ್ಡ ಪ್ಲಸ್‌ಪಾಯಿಂಟ್. ಇದೊಂದು ತುಸು ವಿಭಿನ್ನ ಮತ್ತು ವಿಕ್ಷಿಪ್ತ ಕಥಾ ಹಂದರದ ಚಿತ್ರ.

ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು, ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎನ್ನುವುದು ಚಿತ್ರದ ಅಂತರ್ಯದ ತಿರುಳು. ಅದನ್ನು ಹೇಳುವುದಕ್ಕೆ ನಿರ್ದೇಶಕರು ಬಳಸಿಕೊಂಡಿದ್ದು ಅಪ್ಪ-ಮಗನ ನಡುವಿನ ಒಂದು ಸೆಂಟಿಮೆಂಟ್ ಕತೆ, ಅದರ ಜತೆಗೆ ಇಬ್ಬರು ಕಾಲೇಜ್ ಹುಡುಗ – ಹುಡುಗಿನ ನಡುವಿನ ಪ್ರೀತಿ-ಪ್ರೇಮದ ಎಪಿಸೋಡ್. ಒಂದು ಹಂತದಲ್ಲಿ ಇವೆರಡು ವಿಚಿತ್ರ ತಿರುವಿಗೆ ಬಂದು ನಿಂತಾಗ ತಂದೆಗಿದ್ದ ಮಗನ ಮೇಲಿನ ಪ್ರೀತಿ ಹೇಗೆ ದ್ವೇಷಕ್ಕೆ ಬಂದು ನಿಲ್ಲುತ್ತದೆ. ಅಲ್ಲಿಂದ ಮುಂದೇನು ಅನ್ನೋದು ಸಸ್ಪೆನ್ಸ್. ಮುಂದೆನಾಗುತ್ತೆ ಅನ್ನೋದನ್ನು ಸಲೀಸಾಗಿ ಊಹಿಸಿಬಿಡುವಷ್ಟು ಸಾದಾಸೀದಾ ಕತೆ ಇದಲ್ಲ. ಕಥೆ ಅರ್ಥವಾಗಬೇಕಾದರೆ ಪೂರ್ತಿ ಚಿತ್ರವನ್ನು ನೋಡಲೇ ಬೇಕು. ಪಾತ್ರವರ್ಗದಲ್ಲಿ ಅವಿನಾಶ್ ಪ್ರಮುಖ ಪ್ರಮುಖ ಆಕರ್ಷಣೆ. ಕಥಾ ನಾಯಕ ರಾಜುನ ತಂದೆ. ಮಗ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ಬಯಸುವ ಅವರ ಕೆಟ್ಟ ಮನಸ್ಥಿತಿಯುಳ್ಳ ಪಾತ್ರದಲ್ಲಿ ಬೆಸ್ಟ್ ಸ್ಕೋರ್ ಮಾಡಿದ್ದಾರೆ. ಕಿರುತೆರೆ ನಟ ನಾಯಕ ಬಾಲಾಜಿ ಶರ್ಮಾಗೆ ಇದು ಮೊದಲ ಸಿನಿಮಾ. ಕಟ್ಟು ಮಸ್ತು ದೇಹದ ಮೂಲಕ ಆ್ಯಕ್ಷನ್ ಮತ್ತು ಡಾನ್ಸ್ ನಲ್ಲಿ ಇಷ್ಟವಾಗುತ್ತಾರೆ.

ಲುಕ್ ಆ್ಯಂಡ್ ಗೆಟಪ್ ಗಳಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ಮಯೂರಿ ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ ಅವರ ಹಾಸ್ಯ ಪ್ರಸಂಗಳು ಕಚಗುಳಿ ಇಡುತ್ತವೆ. ಶಂಕರ್ ಛಾಯಾಗ್ರಹಣ, ಅರವ್ ಸಂಗೀತ ಚಿತ್ರಕ್ಕೆ ಸಾಥ್ ನೀಡಿವೆ. ಒಟ್ಟಿನಲ್ಲಿ ಮೌನ ಎಂದರೆ ಸೋಲಲ್ಲ. ಸೋತು ಗೆಲ್ಲುವ ತವಕ ಎಂಬುದನ್ನು ಚಿತ್ರದ ಮೂಲಕ ನಿರೂಪಿಸುವ ರಾಜ್‌ಪಂಡಿತ್ ಅವರ ಪ್ರಯತ್ನ ಮೆಚ್ಚಲೇಬೇಕು.

@bcinemas.in

This Article Has 1 Comment
  1. Pingback: Order sig sauer guns online

Leave a Reply

Your email address will not be published. Required fields are marked *

Translate »
error: Content is protected !!