ಯಕ್ಷಗಾನ ಕರ್ನಾಟಕದ ಹೆಮ್ಮೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮೂವರಲ್ಲಿ ಇಬ್ಬರು ಯಕ್ಷಗಾನದ ಅಭಿಮಾನಿಗಳಾಗಿರುತ್ತಾರೆ. ಹಾಗಿದ್ದೂ ಈ ಕಲೆಯನ್ನು ಕನ್ನಡ ಚಿತ್ರಗಳಲ್ಲಿ ಬಳಸಿಕೊಂಡಿರುವುದು ಬಹಳ ಕಡಿಮೆ. ಆದರೆ ಯಕ್ಷಪ್ರೇಮಿಗಳಿಗೆ ಖುಷಿ ಕೊಡುವ ಸಂಗತಿಯೆAದರೆ ಸಧ್ಯ ಬಿಡುಗಡೆಗೆ ಸಿದ್ಧವಾಗಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ಒಬ್ಬ ಪ್ರಮುಖ ಪಾತ್ರಧಾರಿ ಯಕ್ಷಗಾನ ಕಲಾವಿದನಾಗಿರುವುದು. ಚಿತ್ರದಲ್ಲಿ ೮ ರಿಂದ ೧೦ ನಿಮಿಷ ಯಕ್ಷಗಾನದ ದೃಶ್ಯಾವಳಿಗಳೇ ಇರಲಿದ್ದು, ಕುಂದಾಪುರದಲ್ಲಿ ಸೆಟ್ ಹಾಕಿ, ನೈಜ ಯಕ್ಷಗಾನ ಕಲಾವಿದರೊಂದಿಗೆ ೨ ಅಹೋರಾತ್ರಿಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ನೈಜತೆ ಕಾಪಾಡುವ ಸಲುವಾಗಿ ಈ ಭಾಗವನ್ನು ಪೂರ್ತಿಯಾಗಿ ಸಿಂಕ್‌ಸೌಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಇನ್ನು ಯಕ್ಷಗಾನ ಕಲಾವಿದನ ಪಾತ್ರದಲ್ಲಿ ಪ್ರಸಾದ್ ಚೆರ್ಕಾಡಿ ಅಭಿನಯಿಸಿದ್ದಾರೆ. ಸಿನಿಮಾ, ರಂಗಭೂಮಿ ಕಲಾವಿದರಾಗಿದ್ದರೂ ಅವರಿಗೆ ಯಕ್ಷರಂಗದಲ್ಲಿ ಹತ್ತು ವರ್ಷಕ್ಕೂ ಹೆಚ್ಚಿನ ಅನುಭವ ಇರುವುದು ವಿಶೇಷ. ‘ಪ್ರಸಾದ್ ಅವರು ಯಕ್ಷಗಾನದ ಹಲವು ವಿಭಾಗಗಳಲ್ಲಿ ಅನೇಕ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಷ್ಟು ಆಳವಾಗಿ ಯಕ್ಷಕಲೆಯ ಬಗ್ಗೆ ಬಲ್ಲವರು ಅಭಿನಯಿಸಿದ್ದರಿಂದ ಆ ಪಾತ್ರಕ್ಕೆ ನೂರಕ್ಕೆ ನೂರರಷ್ಟು ನ್ಯಾಯ ದೊರಕಿಸಲು ಸಾಧ್ಯವಾಯಿತು’ ಎನ್ನುವುದು ನಿರ್ದೇಶಕರ ಮಾತು. ಸಧ್ಯದಲ್ಲೇ ಬಿಡುಗಡೆಯಾಗಲಿರುವ ಪ್ರಮೋದ್ ಶೆಟ್ಟಿ ಮುಖ್ಯಭೂಮಿಕೆಯ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳ ಜೊತೆಗೆ ಯಕ್ಷಗಾನದ ಕಂಪನ್ನೂ ಹೊತ್ತು ತರುತ್ತಿದೆ.
Be the first to comment