ನೈಜ ಘಟನೆಯೊಂದನ್ನು ಆಧಾರವಾಗಿಸಿ ತಯಾರಾಗಿರುವ ಚಿತ್ರ ‘ನಾನು ಮತ್ತು ಗುಂಡ’. ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಚಿತ್ರ ಇದೇ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರತಂಡ ನಾನು ಮತ್ತು ಗುಂಡ ಚಿತ್ರದ ಪ್ರಮುಖ ಅಂಶಗಳನ್ನು ತಿಳಿಸಿತು.
ರಿಕ್ಷಾ ಚಾಲಕನೋರ್ವ ನಿಜ ಬದುಕಿನಲ್ಲಿ ನಾಯಿಯೊಡನೆ ಹೊಂದಿದ್ದ ಆತ್ಮೀಯತೆಯನ್ನು ಆಧಾರಾವಾಗಿಸಿ ತಯಾರಾದ ಚಿತ್ರ ಇದು. ತಾನು ಹೋಗುವಲ್ಲೆಲ್ಲ ನಾಯಿಯನ್ನು ಕರೆದೊಯ್ಯುತ್ತಿದ್ದ ಆತನ ಕತೆ ಕೇಳಿ ಕುತೂಹಲಗೊಂಡು ಆ ಬಗ್ಗೆ ಕಿರುಚಿತ್ರ ಮಾಡಲು ಮುಂದಾದವರು ರಘು ಹಾಸನ್. ಆದರೆ ಅದು ಸಿನಿಮಾಗೆ ಬೇಕಾದಂಥ ಕತೆಯನ್ನು ಹೊಂದಿದೆ ಎಂದು ಅರಿವಾದಾಗ ಫೀಚರ್ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೆ ತಯಾರು ಮಾಡಿದ ಚಿತ್ರವೇ ನಾನು ಮತ್ತು ಗುಂಡ ಎನ್ನುವ ಈ ಸಿನಿಮಾ ಎಂಬ ಮಾಹಿತಿಯನ್ನು ಚಿತ್ರದ ನಿರ್ಮಾಪಕ ರಘು ಹಾಸನ್ ನೀಡಿದರು. ಅವರು ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಶ್ರೀನಿವಾಸ ತಿಮ್ಮಯ್ಯ ಅವರು ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿರ್ದೇಶಕರ ಪ್ರಕಾರ ಪ್ರಾಣಿಗಳು ಮನುಷ್ಯನನ್ನು ಪ್ರಾಮಾಣಿಕವಾಗಿ ಪ್ರೀತಿಸಬಲ್ಲವು. ರಿಕ್ಷಾಚಾಲಕನೋರ್ವ ಮನೆಯಲ್ಲಿರುವುದಕ್ಕಿಂತ ಹೆಚ್ಚು ಸಮಯ ಹೊರಗಿನ ಮಂದಿಯೊದಿಗೆ ಕಾಲ ಕಳೆಯುತ್ತಾನೆ. ಹಾಗಾಗಿ ಆತನಿಗೆ ಮಾತುಗಳಲ್ಲಿ ಗುಂಡ ಎಂಬ ನಾಯಿ ಜತೆಯಾಗುತ್ತದೆ. ಆದರೆ ಮುಂದೇನಾಗುತ್ತದೆ ಎನ್ನುವ ಕತೆಯನ್ನು ಚಿತ್ರ ಹೇಳುತ್ತದೆ ಎಂದರು.
ಚಿತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ ಜತೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತೋರ್ವ ನಟ ಗೋವಿಂದೇ ಗೌಡ (ಜಿ.ಜಿ) ಕೂಡ ನಟಿಸಿದ್ದಾರೆ. ” ಬೂರಿ ಎನ್ನುವ ಹೆಸರಿನ ಯುವಕನ ಪಾತ್ರದಲ್ಲಿದ್ದು, ಹೆಸರಿಗೆ ತಕ್ಕಂತೆ ಸುಳ್ಳು ಹೇಳುತ್ತಾ ಬದುಕು ಸಾಗಿಸುತ್ತಿರುತ್ತೇನೆ. ನಾಯಿ ಜತೆಗೆ ನನಗೂ ಕಾಂಬಿನೇಶನ್ ದೃಶ್ಯಗಳು ಇವೆ” ಎಂದು ಜಿ.ಜಿ ಹೇಳಿದರು. ಕಾರ್ತಿಕ್ ಶರ್ಮ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದು, ನಾಯಿಗೆ ಬೇಕಾದಂತೆ ಹಿನ್ನೆಲೆ ಸಂಗೀತ ನೀಡಲು ಸಾಕಷ್ಟು ಶ್ರಮ ಪಟ್ಟಿರುವುದಾಗಿ ಹೇಳಿದರು. ಸಂಭಾಷಣೆಕಾರ ಶರತ್ ಚಕ್ರವರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುಂಡ ಎನ್ನುವ ಪಾತ್ರದಲ್ಲಿರುವ ನಾಯಿ ಪತ್ರಿಕಾಗೋಷ್ಠಿಯ ಪ್ರಮುಖ ಆಕರ್ಷಣೆಯಾಗಿತ್ತು.
Pingback: CI-CD Pipeline