ಪರಿಸರ ಕಾಳಜಿ, ಆದಿವಾಸಿ ಜನರ ಹಕ್ಕುಗಳಿಗಾಗಿ ಹೋರಾಡುವ ಚೇತನ್ ರೀಲ್ ಲೈಫ್ ನಲ್ಲಿ ರೈತರ ಪರವಾಗಿ ಹೋರಾಟ ಮಾಡಲು ಹೊರಟಿರುವ ರಣಂ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಅನ್ನು ಮೊನ್ನೆ ಶಾಸಕಿ ಸೌಮ್ಯರೆಡ್ಡಿ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಟಾಲಿವುಡ್ ನಿರ್ದೇಶಕ ವಿ.ಸಮುದ್ರ ನಿರ್ದೇಶಿಸಿರುವ ರಣಂ ಚಿತ್ರಕ್ಕೆ ಯುವರಾಜ, ಭರ್ಜರಿಯಂಥಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಕನಕಪುರ ಶ್ರೀನಿವಾಸ್ ಅವರು ಬಂಡವಾಳ ಹೂಡಿದ್ದಾರೆ. ಚಿರಂಜೀವಿ ಸರ್ಜಾ ಖಡಕ್ ಪೊಲೀಸ್ ಪಾತ್ರಧಾರಿಯಾಗಿದ್ದಾರೆ. ನೀತುಗೌಡ ಕಾಣಿಸಿಕೊಂಡಿದ್ದಾರೆ. ರಣಂ ಚಿತ್ರವು ತೆಲುಗಿನಲ್ಲೂ ತಯಾರಾಗುತ್ತಿದೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾತನಾಡಿ, ದೇಶದ ಅನ್ನದಾತ ಎನ್ನಿಸಿಕೊಂಡಿರುವ ರೈತನಿಗೆ ಸರ್ಕಾರಗಳಿಂದ ಮೋಸವಾಗುತ್ತಿದೆ ಎಂದು ನಿರ್ದೇಶಕ ಸಮುದ್ರ ಅವರು ತೋರಿಸಿದ್ದು, ರೈತರಿಗೆ ಗೌರವ ಸೂಚಿಸುವ ಸಲುವಾಗಿ ಈ ಚಿತ್ರವನ್ನು ನಿರ್ಮಿಸಿದ್ದೇನೆ, ಚಿತ್ರೀಕರಣ ನಡೆಯುವಾಗ ಸಿಲಿಂಡರ್ ಸ್ಫೋಟ ಅನಾಹುತವಾಗಿದ್ದರಿಂದ ಚಿತ್ರದ ಬಿಡುಗಡೆ ತಡವಾಗಿದೆ, ನನ್ನ ಭರ್ಜರಿ ಹಾಗೂ ಬಹದ್ದೂರ್ ಚಿತ್ರಗಳಲ್ಲಿ ಧ್ರುವಸರ್ಜಾ ನಟಿಸಿದ್ದರೆ, ಈ ಚಿತ್ರದಲ್ಲಿ ಅವರ ಸಹೋದರ ಚಿರಂಜೀವಿಸರ್ಜಾ ನಟಿಸಿದ್ದಾರೆ, ಜೊತೆಗೆ ಚೇತನ್ ಕೂಡ ಇದ್ದಾರೆ ಎಂದು ಹೇಳಿದರು.
ನಿರ್ದೇಶಕ ಸಮುದ್ರ ಮಾತನಾಡಿ, ನಾನು ಟಾಲಿವುಡ್ನಲ್ಲಿ ಈಗಾಗಲೇ 10 ಚಿತ್ರಗಳನ್ನು ನಿರ್ದೇಶಿಸಿದ್ದು, ರಣಂ ನಾನು ಕನ್ನಡದಲ್ಲಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ. ನಮ್ಮ ಚಿತ್ರದಲ್ಲಿ ರೈತರ ಸಮಸ್ಯೆ ಇರುವುದರಿಂದ ಇಡೀ ದೇಶಕ್ಕೆ ಸಂಬಂಧಿಸಿದೆ. ನಿರ್ಮಾಪಕರು ನಾವು ಕೇಳಿದೆಲ್ಲ ಕೊಟ್ಟಿದ್ದರಿಂದ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.
ನಟ ಚೇತನ್ ಮಾತನಾಡಿ, ನಾನು ಈ ಚಿತ್ರದಲ್ಲಿ ರೈತರ ಪರ ಹೋರಾಡುವ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಚಿತ್ರಕಥೆ ತುಂಬಾ ಚೆನ್ನಾಗಿದ್ದು, ಪ್ರೇಕ್ಷಕರಿಗೆ ಬರಪೂರಾ ಮನರಂಜನೆ ಸಿಗಲಿದೆ, ಈ ಚಿತ್ರದಿಂದ ನಿರ್ಮಾಪಕರಿಗೆ ಲಾಭ ಬರಲಿ, ಈ ಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಿಗಲಿದೆ ಎಂದು ಹೇಳಿದರು.
ರಣಂನಲ್ಲಿ ತಮಿಳು ನಟಿ ವರಲಕ್ಷ್ಮಿ ಶರತ್ಕುಮಾರ್ , ದೇವ್ಗಿಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಾಧು ಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಮುಂತಾದವರು ಉಳಿದ ಪಾತ್ರವರ್ಗದಲ್ಲಿದ್ದಾರೆ. ರೈತರ ಸಮಸ್ಯೆಯನ್ನು ಬಿಂಬಿಸುವ ರಣಂ ಚಿತ್ರವನ್ನು ನೋಡಿಯಾದರೂ ಸರ್ಕಾರಗಳು ಅವರ ನೆರವಿಗೆ ಧಾವಿಸಿದರೆ ಚಿತ್ರತಂಡದ ಶ್ರಮ ಸಾರ್ಥಕವಾಗುತ್ತದೆ.
Be the first to comment