ಹಿರಿಯ ಸಾಹಿತಿ, ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ತಾವು ನಿರ್ದೇಶಿಸಿರುವ ‘ಹಸಿರು ರಿಬ್ಬನ್’ ಚಿತ್ರಕ್ಕಾಗಿ ಇತ್ತೀಚೆಗೆ ಫಿಲ್ಮ್ಫೇರ್ ಪ್ರಶಸ್ತಿ ಪಡೆದವರು. ಇದೀಗ ‘ಅಮೃತವಾಹಿನಿ’ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ನರೇಂದ್ರ ಬಾಬು ನಿರ್ದೇಶನದ ‘ಅಮೃತವಾಹಿನಿ’ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಸಿನಿಮಾ ಪಾತ್ರಕ್ಕಾಗಿ ಹೆಚ್.ಎಸ್.ವಿ ಸುಮಾರು 12 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಚಿತ್ರೀಕರಣದ ವೇಳೆ ಉಂಟಾದ ಅನುಭವವನ್ನು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಸ್ತಮಾ ಕಾಯಿಲೆ ಇರುವ ವೃದ್ಧನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಪಾತ್ರಕ್ಕಾಗಿ ಹೆಚ್ಎಸ್ವಿ ಅವರಿಗೆ ಕೆಮ್ಮುವುದು ಬಹಳ ಕಷ್ಟವಾಗಿತ್ತಂತೆ. ನಿರ್ದೇಶಕ ನರೇಂದ್ರ ಬಾಬು ಕ್ಯಾಮೆರಾ ಹಿಂದೆ ನಿಂತು ಕೆಮ್ಮಿದಾಗ ಹೆಚ್ಎಸ್ವಿ ಅವರಿಗೆ ಜ್ಞಾಪಕ ಬಂದು ಕೆಮ್ಮಲು ಶುರು ಮಾಡುತ್ತಿದ್ದರಂತೆ. ಅದರಲ್ಲೂ ಆ ಕೆಮ್ಮು ವಿಭಿನ್ನವಾಗಿ ಬರಬೇಕಿತ್ತಂತೆ. ಆದರೆ ಸಣ್ಣದಾಗಿ, ಮಧ್ಯಮ, ತಾರಕದಲ್ಲಿ ಕೆಮ್ಮುವುದು ಅವರಿಗೆ ಅಷ್ಟು ಸಲೀಸಾಗಿ ಬರಲಿಲ್ಲ ಎಂದು ಹೆಚ್ಎಸ್ವಿ ಹೇಳಿಕೊಂಡಿದ್ದಾರೆ.ಇದುವರೆಗೂ ಬರವಣಿಗೆಯಲ್ಲಿ ಬ್ಯುಸಿಯಾಗಿದ್ದ ನಾನು ಈಗ 76ನೇ ವಯಸ್ಸಿನಲ್ಲಿ ಅಭಿನಯಿಸಿದ್ದೇನೆ. ಕ್ಯಾಮೆರಾ ಮುಂದೆ ಅಭಿನಯಿಸುವುದು ಕಷ್ಟವೇನಲ್ಲ. ಆದರೆ ಇಂತಹ ಕೆಲವೊಂದು ಸನ್ನಿವೇಶಗಳು ಸುಸ್ತು ಮಾಡಿಬಿಡುತ್ತದೆ. ನನ್ನೊಂದಿಗೆ ಅಭಿನಯಿಸಿರುವ ಬಾಲನಟಿ ಋತ್ವಿಕ, ಮನಮುಟ್ಟುವಂತೆ ಅಭಿನಯಿಸಿದ್ದಾಳೆ ಎಂದು ತಮ್ಮ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದಾರೆ ಹೆಚ್ಎಸ್ವಿ. ‘ಅಮೃತ ವಾಹಿನಿ’ ಚಿತ್ರವನ್ನು ಕೆ. ಸಂಪತ್ ಕುಮಾರ್, ಅಕ್ಷಯ್ ರಾವ್ ಸೇರಿಸಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಉಪಾಸನಾ ಮೋಹನ್ ಸಂಗೀತ ನಿರ್ದೇಶನವಿದ್ದು, ಗಿರಿಧರ್ ದಿವಾನ್ ಛಾಯಾಗ್ರಹಣವಿದೆ.
Be the first to comment