ಹೊಸ ತಲೆಮಾರಿನವರ ಮನೋಲೋಕವನ್ನು ತೆರೆದಿಡುವ ವಿಶಿಷ್ಟ ಪ್ರಕಾರದ ಸೈಕಾಲಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಮನರೂಪ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮನುಷ್ಯನ, ಅದರಲ್ಲೂ ಮಿಲೇನಿಯಲ್ಗಳ (1980 ಮತ್ತು 2000 ನೇ ವರ್ಷಗಳ ಅವಧಿಯಲ್ಲಿ ಜನಿಸಿದವರು) ಬೇರೆ ಬೇರೆ ಮುಖಗಳನ್ನು ಅರ್ಥಮಾಡಿಕೊಳ್ಳಲು ನಿರ್ಭಿಡೆಯಿಂದ ಪ್ರಯತ್ನಿಸಿರುವ ಅಸಂಗತ ಸಿನಿಮಾ ಇದು. ಇಡೀ ಸಿನಿಮಾದ ಕತೆ ಎರಡು ದಿನಗಳಲ್ಲ್ಲಿ ನಡೆಯುತ್ತದೆ. ಪ್ರೇಕ್ಷಕರು ವಿಚಿತ್ರ ಅನುಭವದೊಂದಿಗೆ ಎಂಜಾಯ್ ಮಾಡಲು ಹಾಗೂ ತಮ್ಮೊಳಗಿರುವ ಸೆಲ್ಫ್ ಅಬ್ಸೆಷನ್ ಅಥವಾ ಸ್ವಯಂ ಗೀಳನ್ನು ಸಿನಿಮಾದಲ್ಲಿರುವ ಪಾತ್ರಗಳೊಂದಿಗೆ ಸಮೀಕರಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
ಹೊಸ ಪ್ರತಿಭೆ ದಿಲೀಪ್ ಕುಮಾರ್ ನಾಯಕನ ಪಾತ್ರದಲ್ಲಿ ನಟಿಸಿದ್ದು, ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿರುವ ಅನುಷಾ ರಾವ್ ಹಾಗೂ ಈಗಾಗಲೇ ಸಿನಿಮಾಗಳಲ್ಲಿ ನಟಿಸಿರುವ ನಿಶಾ ಬಿ.ಆರ್. ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ಯನ್ ಹಾಗೂ ಶಿವಪ್ರಸಾದ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮನರೂಪದ ಐವರು ಸ್ನೇಹಿತರು ಇವರೇ ಆಗಿದ್ದು, ಇವರ ಸುತ್ತಲಿನಲ್ಲೇ ಥ್ರಿಲ್ಲಿಂಗ್ ಕತೆ ಗಿರಕಿಹೊಡೆಯುತ್ತದೆ. ಅಮೋಘ ಸಿದ್ದಾರ್ಥ್, ಗಜ ನೀನಾಸಂ ಹಾಗೂ ಪ್ರಜ್ವಲ್ ಗೌಡ ಅವರು ಕನ್ನಡದ ಪ್ರೇಕ್ಷಕರಿಗೆ ಅಪರೂಪವಾದ ವಿಚಿತ್ರ ಪಾತ್ರಗಳ ಮೂಲಕ ನಿಮ್ಮನ್ನು ಕಾಡಲಿದ್ದಾರೆ.
ಬಿ. ಸುರೇಶ್, ರಮಾನಂದ ಐನಕೈ, ಸತೀಶ್ ಹೆಗಡೆ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋದಾ ಹೊಸಕಟ್ಟ ಹಾಗೂ ಮಂಜುನಾಥ್ ಬೆಂಗಳೂರು, ಭಾಗೀರತಿ ಕನ್ನಡತಿ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ. ಗೋವಿಂದರಾಜ್ ಕ್ಯಾಮೆರಾ ನಿರ್ವಹಿಸಿದ್ದಾರೆ. ಸೂರಿ ಮತ್ತು ಲೋಕಿ ಎಡಿಟ್ ಮಾಡಿದ್ದಾರೆ. ಸರವಣ ಮ್ಯೂಸಿಕ್ ನೀಡಿದ್ದು, ನಾಗರಾಜ್ ಹುಲಿವಾನ್ ಶಬ್ಧ ಮತ್ತು ಧ್ವನಿ ವಿನ್ಯಾಸ ಮಾಡಿದ್ದಾರೆ. ಸಿ.ಎಂ.ಸಿ.ಆರ್ ಮೂವೀಸ್ ಮನರೂಪ ಚಿತ್ರವನ್ನು ನಿರ್ಮಿಸಿದೆ.
Pingback: Jesup solar Installation