ಥ್ರಿಲ್ ಮೂಡಿಸುವ ಮನರೂಪ ಟ್ರೈಲರ್

ಕೊನೆಗೂ ಮನರೂಪ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನವೆಂಬರ್ 22ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರ ವಿಭಿನ್ನ ಬಗೆಯ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಮೂಲಕವೇ ಅಚ್ಚರಿಯ ಮೇಲೆ ಅಚ್ಚರಿ ಮೂಡಿಸುತ್ತ ಬಂದಿದೆ. ಚಿತ್ರತಂಡ ಇದೀಗ ಥ್ರಿಲ್ ಮತ್ತು ಕುತೂಹಲಕಾರಿ ಟ್ರೈಲರ್‍ನ್ನು ಬಿಟ್ಟಿದೆ. ಲಹರಿ ಮ್ಯೂಸಿಕ್ ಬಿಡುಗಡೆ ಮಾಡಿರುವ ಟ್ರೈಲರ್ ಈಗಾಗಲೇ ವೈರಲ್ ಆಗಿದ್ದು, ಸಿನಿಪ್ರಿಯರು ಹೊಸ ತಂಡದ ಪ್ರಯತ್ನವನ್ನು ಬೆಂಬಲಿಸಿದ್ದಾರೆ.

ದಟ್ಟ ಕಾಡಿನಲ್ಲಿ ನಿಗೂಢವಾಗಿರುವ ಕರಡಿ ಗುಹೆಯನ್ನು ಹುಡುಕಿಕೊಂಡು ಹೊರಟಿರುವ ಐವರು ಸ್ನೇಹಿತರ ನಡುವಿನ ಕಥನವೇ ಮನರೂಪ ಸಿನಿಮಾದ ತಿರುಳು ಎನ್ನುವಂತಿದೆ ಟ್ರೈಲರ್‍ನ ಸಾರಾಂಶ. ಆದರೆ ಹಲವು ಅಚ್ಚರಿಗಳು, ತಿರುವುಗಳು, ಹಿಂಸೆ, ಕಾಡಿನ ಭಯ, ಕರಡಿ ಗುಹೆಯ ಗೂಢತೆ ಮುಂತಾದ ಸಂಗತಿಗಳ ಜೊತೆಗೆ ಈ ಐವರ ನಡುವೆ ಏನು ವಿಷಮ ಸಂಗತಿ ನಡೆಯುತ್ತದೆ ಎಂಬ ಕುತೂಹಲವನ್ನು ಟ್ರೈಲರ್ ಮೂಡಿಸುತ್ತದೆ.

ಟ್ರೈಲರ್‍ನಲ್ಲಿ ಬಲೂನ್, ಬಿದಿರು, ಚಿಟಬಿಲ್ಲು ಮುಂತಾದ ವಸ್ತುಗಳು ಗಮನ ಸೆಳೆಯುತ್ತವೆ. ಜೊತೆಗೆ ಚಿತ್ರ ಶೂಟ್ ಮಾಡಿರುವ ಕಾಡು ಗಮನಸೆಳೆಯುತ್ತದೆ. ಕನ್ನಡಿ ಮುಂದೆ ನಿಂತಿರುವ ವ್ಯಕ್ತಿಯಿಂದ ಪ್ರಾರಂಭವಾಗುವ ಮನರೂಪ ಟ್ರೈಲರ್ ಅದೇ ಕನ್ನಡಿಯ ಮುಂದಿರುವ ವ್ಯಕ್ತಿಯ ಜೊತೆ ಕೊನೆಯಾಗುತ್ತದೆ. ಒಂದೇ ಒಂದು ಶಾಟ್‍ನಲ್ಲಿ ಬಿ.ಸುರೇಶ್ ಗಮನ ಸೆಳೆಯುತ್ತಾರೆ. ಕಾಡಿನಲ್ಲಿ ಓಟ, ಬೀಳುವುದು, ಭಯದ ಛಾಯೆ, ಹುಡುಕಾಟ, ಅಪನಂಬಿಕೆ, ಪ್ರೇಮ ವೈಫಲ್ಯ, ಪಯಣ; ಈ ಅಂಶಗಳೇ ಟ್ರೈಲರ್‍ನ ಜೀವಾಳವಾಗಿದೆ.

“ಮನರೂಪ ಚಿತ್ರ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತದೆ. ಅಚ್ಚರಿ ಮೂಡಿಸುವ ಸಂಗತಿಗಳಿವೆ. ಕೆಲ ದೃಶ್ಯಗಳು ತನ್ನ ಕಂಟೆಂಟ್ ಮತ್ತು ಯೋಚನೆಗಳಿಂದ ಬೆಚ್ಚಿಬೀಳಿಸುತ್ತವೆ. ಕುಟುಂಬ ವ್ಯವಸ್ಥೆ, ವ್ಯಕ್ತಿತ್ವ, ಅಸ್ತಿತ್ವ ಮತ್ತು ಇರುವಿಕೆಯ ವಿವಿಧ ಮಜಲನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಡು ಮತ್ತು ಕಾಡುವ ಪಾತ್ರಗಳು ಪ್ರೇಕ್ಷಕನನ್ನು ಹಿಡಿದಿಡುತ್ತವೆ. ಮನರೂಪ

ಚಿತ್ರವನ್ನು ಪ್ರೇಕ್ಷಕ ಕಡೆಗಣಿಸಲಾರ. ಹೊಸ ಬಗೆಯ ಕಥೆ, ನಿರೂಪಣೆ ಮತ್ತು ಮನಸನ್ನು ನಾಟುವಂತಹ ವಿಷಯವೇ ಮನರೂಪದ ಶಕ್ತಿ. ನವೆಂಬರ್ 22 ರಂದು ಪ್ರೇಕ್ಷಕರು ಮನರೂಪವನ್ನು ಬೇರೆಯದೇ ಆಯಾಮದಲ್ಲಿ ನೋಡುತ್ತಾರೆ ಎಂಬ ನಂಬಿಕೆ ನನ್ನದು”, ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ, ನಿರ್ದೇಶಕ ಕಿರಣ್ ಹೆಗಡೆ.

ದಿಲೀಪ್ ಕುಮಾರ್, ಅನೂಷಾ ರಾವ್, ನಿಶಾ ಬಿ.ಆರ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ, ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ ಹಾಗೂ ವಿಶೇಷ ಪಾತ್ರದಲ್ಲಿ ಬಿ. ಸುರೇಶ್ ಅಭಿನಯಿಸಿದ್ದಾರೆ.

ಗೋವಿಂದರಾಜ್ ಅವರ ಕ್ಯಾಮೆರಾ, ಸರ್‍ವಣ ಅವರ ಸಂಗೀತ, ಸೂರಿ ಮತ್ತು ಲೋಕಿ ಅವರ ಸಂಕಲನ, ನಾಗರಾಜ್ ಹುಲಿವಾನ್ ಅವರ ಸೌಂಡ್ ಡಿಸೈನ್, ವಿಕ್ಷೀಪ್ತ ಸಂಭಾಷಣೆ, ಅಸಂಗತ ಪರಿಕಲ್ಪನೆಯೇ ಮನರೂಪ ಚಿತ್ರದ ಅಂದವನ್ನು ಹೆಚ್ಚಿಸಿದೆ ಎಂದು ಕಿರಣ್ ಹೆಗಡೆ ಅಭಿಪ್ರಾಯ. ನವೆಂಬರ್ 22 ರಂದು ಅವರು ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಸಿ.ಎಂ.ಸಿ.ಆರ್ ಮೂವೀಸ್ ಚಿತ್ರ ನಿರ್ಮಾಣ ಮಾಡಿದೆ.

 

 

 

 

 

 

This Article Has 1 Comment
  1. Pingback: gladiator

Leave a Reply

Your email address will not be published. Required fields are marked *

Translate »
error: Content is protected !!