ಚಿತ್ರ ವಿಮರ್ಶೆ : ಪ್ರೇಕ್ಷಕರ ದಾರಿಯನ್ನೇ ಬದಲಿಸುವ ಪಾತ್ರಧಾರಿ..!
ಚಿತ್ರ: ಕಪಟ ನಾಟಕ ಪಾತ್ರಧಾರಿ
ತಾರಾಗಣ: ಬಾಲು ನಾಗೇಂದ್ರ, ಸಂಗೀತಾ ಭಟ್
ನಿರ್ದೇಶನ: ಕ್ರಿಶ್
ನಿರ್ಮಾಣ: ಗರುಡಾ ಕ್ರಿಯೇಷನ್ಸ್
ಚಿತ್ರದ ಹೆಸರು ಮತ್ತು ರಿಕ್ಷಾ ಡ್ರೈವರ್ ಪೋಸ್ಟರ್ ನೋಡಿ ಕತೆ ಕಲ್ಪಿಸಿಕೊಂಡಿದ್ದರೆ ಒಂದೊಳ್ಳೆಯ ಟ್ವಿಸ್ಟ್ ಇರುವ ಕತೆ ನಿಮ್ಮದಾಗುತ್ತದೆ. ಯಾಕೆಂದರೆ ಇದು ನಿರೀಕ್ಷೆಗೆ ಮೀರಿರುವಂಥ ಕತೆಯುಳ್ಳ ಚಿತ್ರ.
ಸುಬ್ಬಣ್ಣ ದಂಪತಿಯ ಏಕೈಕ ಮತ್ತು ಮುದ್ದಿನ ವಾರಸುದಾರ ಕೃಷ್ಣ. ಹಾಗಾಗಿಯೇ ಆತನಿಗೆ ಯಾವ ಕೆಲಸವೂ ಆಗಿ ಬರುವುದಿಲ್ಲ. ಎಲ್ಲ ಕೆಲಸಗಳನ್ನೂ ಎರಡು ದಿನ ಮಾಡಿ ವಾಪಾಸು ಬರುತ್ತಾನೆ. ಅಂಥ ಸಂದರ್ಭದಲ್ಲಿ ಸ್ವಂತಕ್ಕೊಂದು ಆಟೋರಿಕ್ಷಾ ಕೊಂಡು ಓಡಿಸಬಹುದೆನ್ನುವ ಯೋಜನೆ ಸ್ನೇಹಿತರು ನೀಡುತ್ತಾರೆ. ಸೆಕೆಂಡ್ ಹ್ಯಾಂಡ್ ಆಟೋ ಕೊಳ್ಳುವುದಕ್ಕೂ ಸಹಾಯ ಮಾಡುತ್ತಾರೆ. ಆದರೆ ಅದನ್ನು ಕೊಂಡ ಬಳಿಕ ನಡೆಯುವ ಅನಿರೀಕ್ಷಿತವಾದ ಘಟನೆಗಳೇ ಚಿತ್ರವನ್ನು ಕುತೂಹಲಕಾರಿಯಾಗಿ ವೀಕ್ಷಿಸುವಂತೆ ಮಾಡುತ್ತದೆ.
ಆಟೋ ಕೃಷ್ಣನಾಗಿ ಬಾಲು ನಾಗೇಂದ್ರ ಅವರು ನೀಡಿರುವ ಅಭಿನಯ ನೈಜವಾಗಿದೆ. ಅವರ ಪಾತ್ರಕ್ಕೆ ತಕ್ಕ ಹಾಗೆ ಕಣ್ಣುಗಳಲ್ಲಿನ ತುಂಟತನ ಮಾತನಾಡಿದೆ.
ನಾಯಕಿಯಾಗಿ ಸಂಗೀತಾ ಭಟ್ ತಾವು ಉತ್ತಮ ಪಾತ್ರವನ್ನೇ ಆಯ್ದುಕೊಳ್ಳುವ ನಟಿ ಎನ್ನುವುದನ್ನು ಚಿತ್ರದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅವರ ಪಾತ್ರದ ಹೆಸರು ರಾಧಾ ಇರಬಹುದೇ ಅಥವಾ ರುಕ್ಮಿಣಿ ಎಂದಿರಬಹುದೇ ಎನ್ನುವ ಗೊಂದಲಗಳ ನಡುವೆ ಕೃಷ್ಣ ಮಾತ್ರವಲ್ಲ ಪ್ರೇಕ್ಷಕರು ಕೂಡ ತಲೆ ಕೆಡಿಸಿಕೊಳ್ಳುವಂತಾಗುತ್ತದೆ.
ಮಗನನ್ನು ಮುದ್ದಿನಿಂದ ಬೆಳ್ಳುಳ್ಳಿ ಎಂದು ಕರೆಯುವ ತಂದೆಯಾಗಿ ಕರಿಸುಬ್ಬು ಎಂದಿನಂತೆ ತಮ ಲವಲವಿಕೆಯ ನಟನೆ ನೀಡಿದ್ದಾರೆ.
ಮೊದಲ ನಿರ್ದೇಶನದ ಪ್ರಯತ್ನದಲ್ಲೇ ನಿರ್ದೇಶಕ ಕ್ರಿಶ್ ಗೆದ್ದಿದ್ದಾರೆ. ಆಯ್ದುಕೊಂಡಿರುವ ಕತೆಯ ಜಾನರ್ ಅವರನ್ನು ಕಾಪಾಡಿದೆ. ಮಾತ್ರವಲ್ಲ, ಸಂಭಾಷಣೆ ಮತ್ತು ದೃಶ್ಯಗಳ ಮೂಲಕ ಚಿತ್ರಕ ನೈಜತೆ ತುಂಬುವ ಅವರ ಪ್ರಯತ್ನ ಬಹುಪಾಲು ಯಶಸ್ವಿಯಾಗಿದೆ. ಕೆಟ್ಟ ಕೃತ್ಯಗಳಿಗೆ ಕೆಡುಕಿನ ಪ್ರತಿಫಲ ಇದ್ದೇ ಇರುವುದೆನ್ನುವ ಸಂದೇಶದೊಂದಿಗೆ ಸಮಾಪ್ತಿಯಾಗುವ ಚಿತ್ರವನ್ನು ನೋಡಿದರೆ ಮನರಂಜನೆ ಖಚಿತ.
@ಬಿಸಿನಿಮಾಸ್ ಚಿತ್ರ ವಿಮರ್ಶೆ.
Be the first to comment