ಬಿಡುಗಡೆಗೆ ಸಮೀಪದಲ್ಲಿರುವ ಹೊಸಬರ ಸೈಕಲಾಜಿಕಲ್ ಥ್ರಿಲ್ಲರ್ ಮನರೂಪ ಚಿತ್ರತಂಡ ಮತ್ತೆರಡು ಕುತೂಹಲಕಾರಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದೆ. ಕರಡಿ ಗುಹೆ ಮತ್ತು ಗುಮ್ಮ ಎಂಬ ಪರಿಕಲ್ಪನೆಯಿಟ್ಟುಕೊಂಡು ಈ ಪೀಳಿಗೆಯ ಕತೆಯನ್ನು ಹೇಳಹೊರಟಿದೆ ಚಿತ್ರತಂಡ. ಹಲವು ದಿನಗಳಿಂದ ಗುಮ್ಮನ ಸುತ್ತಲೇ ಕುತೂಹಲ ಮೂಡಿಸಿದ್ದ ಚಿತ್ರತಂಡ ವಿಚಿತ್ರ ಮತ್ತು ವಿಕ್ಷೀಪ್ತ ಎನಿಸುವ ಗುಮ್ಮನ ಪೋಸ್ಟರ್ನ್ನು ಅನಾವರಣಗೊಳಿಸಿದೆ. ಜೊತೆಗೆ ಕರಡಿ ಗುಹೆಯ ಹಿನ್ನೆಲೆಯಿರುವ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ತೆವಳಿ ಮುನ್ನುಗ್ಗುತ್ತಿರುವಂತೆ ಭಾಸವಾಗುವ ಪೋಸ್ಟರ್ ಬಿಡುಗಡೆ ಮಾಡಿದೆ.
ಗುಮ್ಮನ ಪೋಸ್ಟರ್ನಲ್ಲಿರುವ ವ್ಯಕ್ತಿಯ ಮುಖದ ಮೇಲೆ ನ್ಯೂಡಿಟಿ, ಸೆಲ್ಫಿ, ಬ್ಲಡ್, ನಾರ್ಸಿಸೀಸಂ, ಗುಮ್ಮ ಮುಂತಾದ ಶಬ್ಧಗಳ ಜೊತೆ ಜ್ವಾಲೆ ಹೊರಸೂಸುವ ಕಣ್ಣುಗಳು ಪ್ಲಸ್ ಪಾಯಿಂಟ್. ಆತನ ಹಿಂದೆ ಜೇಡರ ಬಲೆಯಿದ್ದು, ರಕ್ತದ ಕುರುಹುಗಳು ಕಾಣಿಸುತ್ತವೆ. ನಾರ್ಸಿಸೀಸ್ಟ್ಸ್ ಆರ್ ಬಾರ್ನ್ ಎಂಬ ಸಾಲನ್ನು ಹೊಂದಿರುವ “ಈ ಪೋಸ್ಟರ್ನಲ್ಲಿ ಕಾಣಿಸಿಕೊಂಡಿರುವ ನಟ ಅಮೋಘ್ ಸಿದ್ದಾರ್ಥ್. ಹೊಸ ಪ್ರತಿಭೆ. ಖಂಡಿತವಾಗಿ ಅಮೋಘ್ ಈ ಪೀಳಿಗೆಯ ಯುವ ಮನಸ್ಸುಗಳನ್ನು ತಲ್ಲಣಗೊಳಿಸುತ್ತಾರೆ. ಹೊಸ ಬಗೆಯ ಮ್ಯಾನರೀಸಂ ಮೂಲಕ ಗಮನ ಸೆಳೆಯುತ್ತಾರೆ”, ಎಂದು ನಿರ್ದೇಶಕ ಕಿರಣ್ ಹೆಗಡೆ ಅಭಿಪ್ರಾಯ.
ಮತ್ತೊಂದು ಪೋಸ್ಟರ್ನಲ್ಲಿ ಮನರೂಪ ಚಿತ್ರದ ನಾಯಕ ದಿಲೀಪ್ ಕುಮಾರ್ ಕರಡಿ ಗುಹೆಯಲ್ಲಿ ಕಷ್ಟಪಟ್ಟು ಮುನ್ನುಗ್ಗುತ್ತಿರುವ ಮತ್ತು ಯಾವುದೋ ವ್ಯೂಹದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿರುವ ಕುರುಹನ್ನು ತೋರಿಸುತ್ತದೆ ಎಂಬುದು ಕಿರಣ್ ಹೆಗಡೆ ವಿವರಣೆ.
ಜೊತೆಗೆ ಮನರೂಪದ ಎಲ್ಲಾ ಪೋಸ್ಟರ್ಗಳಲ್ಲಿರುವಂತೆ ಕ್ಯಾಮೆರಾ ರೆಕಾರ್ಡಿಂಗ್ ಬಾರ್ಡರ್ ಈ ಎರಡೂ ಪೋಸ್ಟರ್ಗಳಲ್ಲಿ ಮುಂದುವರಿದಿದೆ. ಮನರೂಪ ಚಿತ್ರ, ಹೊಸ ತಲೆಮಾರಿನ ಐದು ಜನ ಸ್ನೇಹಿತರು ದಟ್ಟ ಕಾಡಿನಲ್ಲಿರುವ ಕರಡಿ ಗುಹೆ ಹುಡುಕಿಕೊಂಡು ಹೋಗುವ ಕತೆಯನ್ನು ಒಳಗೊಂಡಿದೆ. ಹೊಸ ಬಗೆಯ ನಿರೂಪಣೆ, ಕತೆ ಮತ್ತು ಈ ಕಾಲದ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಕಾಡಿನ ಬ್ಯಾಕ್ಡ್ರಾಪ್ನಲ್ಲಿ ಹೇಳಲಾಗಿದೆ. ಮನಸಿನ ವಿವಿಧ ಛಾಯೆಗಳ ಅನಾವರಣವೇ ಮನರೂಪ ಎಂಬುದು ಕಿರಣ್ ಅವರ ಹೇಳಿಕೆ.
ಇದೇ ನವೆಂಬರ್ 22ರಂದು ಮನರೂಪ ತೆರೆಗೆ ಬರಲಿದೆ. ಮೈಸೂರ್ ಟಾಕೀಸ್ ಚಿತ್ರವನ್ನು ಹಂಚಿಕೆ ಮಾಡಲಿದೆ.

Pingback: Digital Transformation Company