ಸಿ++ ಸಿನಿಮಾ ನವೆಂಬರ್ 1ರಂದು ತೆರೆಗೆ ಬರಲಿದ್ದು, ಪ್ರೇಕ್ಷಕರ ತೃಪ್ತಿಯೇ ನಮ್ಮ ತೃಪ್ತಿ ಎಂದಿರುವ ಚಿತ್ರದ ನಿರ್ದೇಶಕ ಸುರೇಶ್ ಲಿಯೋನ್ ರೇ, ಚಿತ್ರವು ಒಂದು ವಿಭಿನ್ನ ಕಥೆಯನ್ನು ಹೇಳಲು ಹೊರಟಿದೆ. ಹಾಗಾಗಿ ಒಂದು ವೇಳೆ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿಲ್ಲ ಎಂದಾದರೆ, ಅವರ ಹಣವನ್ನು ವಾಪಸ್ ಕೊಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ನಾವು ಕಷ್ಟಪಟ್ಟು ಒದ್ದಾಡಿಕೊಂಡೇ ಈ ಸಿನಿಮಾ ಮಾಡಿರಬಹುದು, ಹಾಗಂತ ನೀವು ಕಷ್ಟಪಟ್ಟು ದುಡಿದ ಹಣವನ್ನು ನೀವು ಬಯ್ಕೊಂಡು ಕೊಡೋದು ನನಗೆ ಇಷ್ಟ ಇಲ್ಲ. ನಿಮ್ಮನ್ನು ತೃಪ್ತಿ ಪಡಿಸದ ಸಿ++ ಯಿಂದ ಬರುವ ನಿಮ್ಮ ಹಣ ನನಗೆ ಬೇಡವೇ ಬೇಡ. ಆದರೆ ನೀವು ಸಂತೋಷದಿಂದ ಕೊಡುವ ಹಣ ನನಗೆ ತುಂಬಾ ತೃಪ್ತಿ ಕೊಡುತ್ತೆ…
ಹಾಗಂತ, ನನ್ನ ಸಿನಿಮಾ ಮೇಲೆ ನನಗೆ ನಂಬಿಕೆಯಿಲ್ಲ ಅಂತ ಅನ್ಕೋಬೇಡಿ. ತುಂಬಾ ನಂಬಿಕೆ ಇದೆ, ಜೊತೆಗೆ ಸ್ವಲ್ಪ ಸಂದೇಹವಿದೆ. ಯಾಕೆಂದರೆ ಇದು ರೆಗ್ಯುಲರ್ ಕನ್ನಡ ಸಿನಿಮಾ ಸ್ಟೈಲ್ ನಲ್ಲಿ ಇಲ್ಲ, ಫ್ರೆಂಚ್ ಅಥವಾ ಸ್ಪ್ಯಾನಿಷ್ ಸಿನಿಮಾ ಸ್ಟೈಲ್ನಲ್ಲಿ ಇದೆ.. ಹಾಡುಗಳಿಲ್ಲ, ಹೀರೋಯಿಸಂ ಇಲ್ಲ, ಪಂಚಿಂಗ್ ಡೈಲಾಗ್ಸ್ ಇಲ್ಲ, ಐಟಂ ಸಾಂಗ್ಸ್ ಇಲ್ಲ, ಮಹಿಳಾ ಪಾತ್ರದಾರಿಗಳೇ ಇಲ್ಲ, ಡಬಲ್ ಮೀನಿಂಗ್ ಡೈಲಾಗ್ ಇಲ್ಲ, ಕಾಮಿಡಿ ಇಲ್ಲ… ಆದರೆ, ಸೀಟ್ ತುದಿಯಲ್ಲಿ ಕೂತು ನೋಡುವಂತ ಚಿತ್ರಕತೆ ಇದೆ ಎಂದು ಅವರು ಹೇಳಿದ್ದಾರೆ.
ಸಿ++ ಸಿನಿಮಾ ಇಷ್ಟ ಆಗ್ಲಿಲ್ಲ ಅಂದ್ರೆ, ನಮಗೆ ಸಿಗೋ ನಿಮ್ಮ ಟಿಕೆಟ್ ಹಣ ವಾಪಸ್ ಕೊಡ್ತೀವಿ.” ಸಿ++ ಕೊನೆಯವರೆಗೂ ನೋಡಿ ಹೊರಗೆ ಬರುವಾಗ, ನಿಮಗೆ ಸಿನಿಮಾ ಪ್ರಾಮಾಣಿಕವಾಗಿ ಇಷ್ಟವಾಗಿಲ್ಲ ಅನ್ನಿಸಿದರೆ, ಆ ಟಿಕೆಟನ್ನ ಸ್ನ್ಯಾಪ್ ಶಾಟ್ ತೆಗೆದು ನನ್ನ ವಾಟ್ಸಪ್ ನಂಬರ್ 9035212140ಗೆ ಕಳುಹಿಸಿ. ಜೊತೆಗೆ ನಿಮ್ಮ “ಪೇಟಿಎಂ” ಅಥವಾ “ಗೂಗಲ್ ಪೇ” ನಂಬರ್ ಅನ್ನೂ ಕಳುಹಿಸಿ. ನಮ್ಮ ಪ್ರೊಡಕ್ಷನ್ ಬ್ಯಾಂಕ್ ಅಕೌಂಟ್ ಗೆ ನಿಮ್ಮ ಹಣ ಬರುತ್ತಿದ್ದ ಹಾಗೆ, ನಾನು ನಿಮ್ಮ ನಂಬರ್ ಗೆ ಕಳುಹಿಸುತ್ತೇನೆ. ಇದು ನನ್ನ “ಸಿ++” ಚಿತ್ರದ ಮೇಲಾಣೆ ಎಂದು ನಿರ್ದೇಶಕರು ಹೇಳಿದ್ದಾರೆ.
ಹೊಸದೊಂದು ಕ್ರೈಂ ಬಗ್ಗೆ ಹೇಳ ಹೊರಟಿದ್ದೇವೆ. ಇದು ಎಷ್ಟು ಜನರಿಗೆ ಇಷ್ಟ ಆಗುತ್ತೋ ಗೊತ್ತಿಲ್ಲ. ನಮ್ಮ ಪ್ರೇಕ್ಷಕರು ಹೇಗೆ ಅಂತ ಎಷ್ಟೋ ವರ್ಷ ಅನುಭವ ಇರೋ ನಿರ್ಮಾಪಕರಿಗೇ ಅರ್ಥವಾಗಿಲ್ಲ. ಇನ್ನು, ನಾ ಇನ್ನೂ ಬಚ್ಚ. ಈ ತರಹದ ಸಸ್ಪೆನ್ಸ್ ಥ್ರಿಲ್ಲರ್ ನ್ನ ಎಷ್ಟ್ ಜನ ಇಷ್ಟಪಡ್ತಾರೆ ಅಂತ ತಿಳ್ಕಲ್ಲೋ ಪ್ರಯತ್ನವೇ ಈ “ಸಿ++”. ಇದೇ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಸಿ++ ತೆರೆ ಕಾಣುತ್ತಿದೆ. ಸಮಯ ಮಾಡ್ಕೊಂಡು ನಮ್ಮ ಸಿನಿಮಾ ನೋಡಿ ಅಂತ ಈ ಮೂಲಕ ವಿನಂತಿ ಮಾಡ್ಕೋತೀನಿ ಎಂದು ಸುರೇಶ್ ಲಿಯೋನ್ ರೇ ಹೇಳಿದ್ದಾರೆ.
ಇದರ ಜೊತೆಗೆ ವಿಶೇಷ ಸೂಚನೆ ನೀಡಿರುವ ಅವರು, ನಾವು ನಿಮಗೆ ವಾಪಸ್ ಕೊಡುದು ನಮಗೆ ಸಿಗೋ ನಿಮ್ಮ ಪೂರ್ತಿ ಹಣ ಮಾತ್ರ, ಅಂದರೆ ತೆರಿಗೆ ಮತ್ತು ಚಿತ್ರಮಂದಿರದ ನಿರ್ವಹಣೆ ಹೊರತು ಪಡಿಸಿ. ಯಾಕೆಂದರೆ ಸಿನಿಮಾ ನೋಡೋ ಪ್ರತಿಯೊಬ್ಬರೂ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಲೇಬೇಕು. ಚಿತ್ರಮಂದಿರದ ಸೀಟ್, ಫ್ಯಾನ್, ಏಸಿ,ಶೌಚಾಲಯ ಬಳಸಿರುತ್ತೇವೆ, ಹಾಗಾಗಿ ಈ ಸೇವೆಗಳಿಗೆ ಪ್ರೇಕ್ಷಕನೇ ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
Be the first to comment