ಚಿತ್ರ ವಿಮರ್ಶೆ : ಇದು ‘ಚಲ’ನ(ವಿ)ಚಿತ್ರ!

ಚಿತ್ರ ವಿಮರ್ಶೆ : ಅಂದವಾದ

ಇದು ‘ಚಲ’ನ(ವಿ)ಚಿತ್ರ’

ಅಂದವಾದ’ ಚಿತ್ರ ಬಿಡುಗಡೆಗೂ ಮುನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಚಿತ್ರ ರಿಲೀಸ್ ಆದ ಮೇಲೆ ‘ಚಲ’ನ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ಹುಸಿಯಾಗಿದೆ. ಮೆಡಿಕಲ್ ಫೀಲ್ಡ್‍ನಲ್ಲಿ ಯಾರೋ ಮಾಡೋ ತಪ್ಪಿಗೆ ಇನ್ಯಾರೋ ಬಲಿಯಾಗುವ ವಿರಳ ಕಥೆಯನ್ನು ಎತ್ತಿಕೊಂಡಿದ್ದ ನಿರ್ದೇಶಕ ಚಲ ಕಥೆಯ ವಿಚಾರಕ್ಕೆ ಗೆದ್ದಿದ್ದಾರೆ. ಆದರೆ, ಆ ಕಥೆಯನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ತರುವಲ್ಲಿ ಎಡವಿದ್ದಾರೆ. ಚಿತ್ರದೊಳಗಿನ ಸಮಾಜಿಕ ಸಂದೇಶ, ನವಿರು ಪ್ರೇಮ, ಅದ್ಭುತ ಲೋಕೆಶನ್‍ಗಳು.. ಹೀಗೆ ಎಲ್ಲಾ ಪ್ಲಸ್ ಪಾಯಿಂಟ್‍ಗಳು ಜಾಳು ಜಾಳು ನಿರೂಪಣೆಯಿಂದಾಗಿ ನೋಡುಗನನ್ನು ಇಂಪ್ರೆಸ್ ಮಾಡೋದಿಲ್ಲ.

ಚಿತ್ರದ ಕೆಲವೊಂದು ಸೀನ್‍ಗಳು ನೋಡುಗನನ್ನು ತಾಕುತ್ತದೆ. ಆದರೆ ಆ ದೃಶ್ಯದ ನಂತರದಲ್ಲಿ ಬರುವ ಕಥೆಯಿಂದ ಹೊರಗಿರುವ ಕಾಮಿಡಿ ದೃಶ್ಯಗಳು, ಗಟ್ಟಿತನವಿಲ್ಲದ ಸಂಭಾಷಣೆಗಳು ಬೆಸ್ಟ್ ಸೀನ್‍ಗಳನ್ನೂ ಮರೆಸುತ್ತದೆ. ಚಿತ್ರದಲ್ಲಿ ಕಥೆಗೆ ಪೂರಕವಾದ ಗಟ್ಟಿ ಚಿತ್ರಕಥೆ, ಸಂಭಾಷಣೆ, ಅಭಿನಯ ಇದ್ದಿದ್ದರೆ ‘ಅಂದವಾದ’ ನಿಜಕ್ಕೂ ಅಂದವಾದ ಚಿತ್ರವಾಗುತ್ತಿತ್ತು. ಒಂದು ದೊಡ್ಡ ಟೀಮ್‍ನ ಎಫರ್ಟ್ ಮಲಾಜಿಲ್ಲದೆ ಸೋತು ಹೋಗಿದೆ.
ಚಿತ್ರದ ಕಥೆಯ ವಿಚಾರಕ್ಕೆ ಬರೋದಾದ್ರೆ ಕಥಾನಾಯಕಿ ಅಮ್ಮು ಅಲಿಯಾಸ್ ಅರ್ಥ (ಅನುಷಾ ರಂಗನಾಥ್) ಆಕ್ಸಿಡೆಂಟ್ ಒಂದರಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥಾಶ್ರಮದಲ್ಲಿ ಬೆಳೆದವಳು. ಈಕೆಗೆ ‘ಸತ್ಯದ ತಲೆಗೆ ಹೊಡ್ದ ಹಾಗೆ’ ಸುಳ್ಳು ಹೇಳುತ್ತಲೇ ಕಥಾನಾಯಕ ಮೋನಾನನ್ನು (ಜೈ) ಮೋಡಿ ಮಾಡೋದೇ ಪರ್ಮನೆಂಟ್ ಕಾಯಕ. ಆಕೆ ಯಾಕೆ ‘ಸುಳ್‍ರಾಣಿ’ ಯಾಗಿದ್ದಾಳೆ ಎಂಬುದನ್ನು ಚಿತ್ರದ ಕೊನೆಯವರೆಗೂ ರಿವೀಲ್ ಮಾಡದ ಚಲ, ಸ್ವಲ್ಪ ಮಟ್ಟಿಗೆ ಕುತೂಹಲ ಮುಡಿಸುವ ಪ್ರಯತ್ನ ಮಾಡಿದ್ದಾರೆ. ಬೋರಿಂಗ್ ಫಸ್ಟ್‍ಹಾಫ್‍ನಲ್ಲಿ ಇಷ್ಟವಾಗೋದು ಅರ್ಥಳ ಅರ್ಥಗರ್ಭೀತ ಬಾಲ್ಯದ ಎಪಿಸೋಡ್‍ಗಳು. ಬಾಲನಟಿ ಸಿಂಚನಾ ಇಷ್ಟು ದಿನ ಎಲ್ಲಿದ್ದಳೋ ಗೊತ್ತಿಲ್ಲ, ಆದರೆ ಈ ಚಿತ್ರದ ಮೂಲಕ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಭರವಸೆ ಮೂಡಿಸುತ್ತಾಳೆ. ಪಸ್ಟ್‍ಹಾಫ್‍ಗಿಂತ ಚಲ ಸೆಕೆಂಡ್‍ಹಾಫ್ ಹೆಚ್ಚು ಎಫೆಕ್ಟ್ಯೂ ಆಗಿ ತೋರಿಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ಎಡಿಟರ್ ಮಾತನ್ನು ಶಿರಸಾವಹಿಸಿ ಪಾಲಿಸಿದ್ದು ಚಿತ್ರದ ಪ್ರತೀ ಸೀನ್‍ನಲ್ಲೂ ಕಾಣಿಸುತ್ತದೆ. ಕ್ಲೈಮಾಕ್ಸ್ ಸೀನ್‍ನಲ್ಲಿ ಚಲ ಅವರ ಛಲದ ಪ್ರದರ್ಶನವಾಗುತ್ತದೆ. ನೋಡುಗನನ್ನು ತಾಕುತ್ತದೆ.. ಆದರೆ ಕ್ಲೈಮಾಕ್ಸ್‍ವರೆಗೂ ಚಿತ್ರ ನೋಡಿಸಿಕೊಂಡು ಹೋಗಬೇಕಲ್ಲ. ಕೇವಲ ಕ್ಲೈಮಾಕ್ಸ್‍ಗಾಗಿ ಎರಡೂ ಚಿಲ್ಲರೆ ಗಂಟೆ ಸಮಯ ವ್ಯರ್ಥ ಮಾಡೋದಾ..?
ಇನ್ನೂ, ಫರ್‍ಫಾಮೆನ್ಸ್ ವಿಚಾರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿರುವ ಜೈ ಅಭಿನಯಕ್ಕೆ ಜೈ! ಚಲ ಜೈಯನ್ನು ಇನ್ನಷ್ಟು ಪಳಗಿಸಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಆದರೆ, ಜೈ ತನ್ನ ಚೌಕಟ್ಟಿನೊಳಗೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನುಷಾ ರಂಗನಾಥ್ ‘ಸುಳ್‍ರಾಣಿ’ಯಾಗಿ ಗೆದ್ದಿದ್ದಾರೆ. ಆದರೆ, ಸಿರಿಯಸ್ ಸೀನ್‍ಗಳಲ್ಲಿ ಸಪ್ಪೆ, ಸಪ್ಪೆ. ವಿಕ್ರಮ್ ವರ್ಮನ್ ಸಂಗೀತ, ಗುರುಕಿರಣ್ ಹಿನ್ನಲೆ ಸಂಗೀತ ಚಿತ್ರ ಆರಂಭದಿಂದ ಕೊನೆಯವರಗೂ ಚಿತ್ರವನ್ನು ‘ಅಂದ’ವಾಗಿಸುವ ಪ್ರಯತ್ನ ಮಾಡುತ್ತಲೇ ಬರುತ್ತದೆ. ಹರೀಶ್ ಛಾಯಾಗ್ರಹಣ ಸೂಪರ್. ಹೀಗೆ, ಇನ್ನೊಂದು ‘ಮುಂಗಾರು ಮಳೆ’ಯನ್ನು ಕನ್ನಡಿಗರ ಮುಂದಿಡಲು ಹೊರಟ ಚಲ ಅವರು, ‘ಅಂದವಾದ’ ಚಿತ್ರವನ್ನು ಒಂದು ಟ್ರೈನಿಂಗ್ ಅಂತ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ಇವರಿಂದ ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು.

#bcinemas .in

Be the first to comment

Leave a Reply

Your email address will not be published. Required fields are marked *

Translate »
error: Content is protected !!