ಡಿ ಕಂಪನಿಯ ‘ದಿನಕರೋತ್ಸವ’ದಲ್ಲಿ ಟಕ್ಕರ್!

ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳೆಲ್ಲಾ ಸೇರಿ ನಡೆಸುತ್ತಿರುವ ನೋಂದಾಯಿತ ಸಂಘ ‘ಡಿ ಕಂಪೆನಿ’. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಸದ್ಯ ‘ಡಿ ಕಂಪೆನಿ’ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ, ಜನಪರ ಕಾರ್ಯಗಳಲ್ಲಿ ತೊಡಗಿಡಿಕೊಂಡಿರುವ `ಡಿ ಕಂಪೆನಿ’ ಹಲವಾರು ಸಮಾಜಿಕ ಜವಾಬ್ದಾರಿಯ ಕೆಲಸಗಳನ್ನು ನಡೆಸುತ್ತಲೇ ಬಂದಿದೆ. ದಿನಕರ್ ತೂಗುದೀಪ ಅವರು ತಮ್ಮ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸಿಕೊಳ್ಳುವುದಿಲ್ಲ. ‘ಕೇಕು ಕತ್ತರಿಸಿ, ಹೂವು, ಹಾರಗಳಿಗೆ ಖರ್ಚು ಮಾಡುವ ಹಣವನ್ನು ಸಮಾಜದ ಒಳಿತಿಗೆ ವ್ಯಯ ಮಾಡಬೇಕು’ ಎನ್ನುವ ದಿನಕರ್ ಅವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿರುವ `ಡಿ ಕಂಪೆನಿ’ ಕಳೆದ ಮೂರು ವರ್ಷಗಳಿಂದ ಶಾಲಾ ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನು ನೀಡುವುದು, ಅನಾಥಾಶ್ರಮಕ್ಕೆ ಮೂರ್ನಾಲ್ಕು ತಿಂಗಳಿಗಾಗುವಷ್ಟು ದಿನಸಿ ವಿತರಿಸುವ ಕಾರ್ಯ ಮಾಡಿತ್ತು. ಈ ವರ್ಷ ಹಾಸನ ಜಿಲ್ಲೆಯ, ಮಳಲಿ ಬಳಿಯ ರಾಮೇನಹಳ್ಳಿ ಎಂಬ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯನ್ನು 2 ವರ್ಷಗಳ ಕಾಲಕ್ಕೆ ದತ್ತು ಪಡೆದುಕೊಂಡಿದೆ. ಈ ಮೂಲಕ ಮಕ್ಕಳಿಗೆ ಬಟ್ಟೆ, ಪುಸ್ತಕ, ಶಾಲೆಗೆ ಬಣ್ಣ, ಪೀಠೋಪಕರಣಗಳು ಸೇರಿದಂತೆ ಶಾಲೆಗೆ ಬೇಕಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿದೆ. ಇದರ ಜೊತೆಗೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಿದರೂ ಕನಿಷ್ಠ ಹತ್ತು ಗಿಡಗಳನ್ನು ನೆಡುವುದು `ಡಿ ಕಂಪೆನಿ’ ವಾಡಿಕೆ. ರಾಮೇನಹಳ್ಳಿ ಶಾಲಾ ಆವರಣದಲ್ಲೂ ಗಿಡಗಳನ್ನು ನೆಡಲಾಯಿತು.

ವಿಶೇಷವೆಂದರೆ ಈ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ `ದಿನಕರೋತ್ಸವ’ವನ್ನು ಆಚರಿಸಿದ ಸಂದರ್ಭದಲ್ಲಿ ‘ಟಕ್ಕರ್’ ಚಿತ್ರತಂಡದ ನಾಯಕನಟ ಮನೋಜ್ ಕುಮಾರ್, ನಾಯಕಿ ರಂಜನಿ ರಾಘವನ್, ನಿರ್ಮಾಪಕ ನಾಗೇಶ್ ಕೋಗಿಲು ಉಪಸ್ಥಿತರಿದ್ದರು. ನಟ ಮನೋಜ್ ಮಾತನಾಡಿ `ನನ್ನ ಮಾವಂದಿರಾದ ದರ್ಶನ್ ಮತ್ತು ದಿನಕರ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಕಂಪೆನಿ, ಈ ರೀತಿ ಜನಸ್ನೇಹಿ ಕಾರ್ಯಗಳನ್ನು ಮಾಡುತ್ತಾ ಬಂದಿರುವುದು ಎಲ್ಲರಿಗೂ ಆದರ್ಶವಾಗಿದೆ. ಇವತ್ತು ಕನ್ನಡವೇ ನಮ್ಮ ಅನ್ನ, ಕನ್ನಡ ನಮ್ಮ ಉಸಿರಾಗಿದೆ. ಕನ್ನಡಿಗರು ನಮ್ಮ ದರ್ಶನ್ ಮತ್ತು ದಿನಕರ್ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಹೀಗಿರುವಾಗ ಕನ್ನಡ ಶಾಲೆಯನ್ನು ದತ್ತು ಸ್ವೀಕರಿಸಿರುವ `ಡಿ’ ಕಂಪೆನಿಯ ಕನ್ನಡ ಪ್ರೇಮವನ್ನು ಮೆಚ್ಚಬೇಕು ಎಂದರು. `ನನ್ನ ತಾಯಿ ಕೂಡಾ ಹಾಸನದಲ್ಲಿ ಜನಿಸಿದವರು. ಇದೇ ನೆಲದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನಗೆ ಹೆಮ್ಮೆ ತಂದಿದೆ’ ಎಂದರು ರಂಜನಿ ರಾಘವನ್. ನಿರ್ಮಾಪಕ ನಾಗೇಶ್ ಕೋಗಿಲು ಮಾತನಾಡುತ್ತಾ `ನಾನು ಕನ್ನಡ ಶಾಲೆಯಲ್ಲಿ ಓದಿದವನು. ಇವತ್ತು ಖಾಸಗಿ ಶಾಲೆಗಳ ಹಾವಳಿಯಿಂದ ಕನ್ನಡ ಶಾಲೆಗಳಿಗೆ ಸಂಚಕಾರ ಬಂದಿದೆ. ಇದರ ಮಧ್ಯೆಯೂ ಕನ್ನಡ ಶಾಲೆಯನ್ನು ಉಳಿಸಿಕೊಳ್ಳುವ ಅನಿವಾರ್ಯವಿದೆ. ಈ ಶಾಲೆಯನ್ನು ದತ್ತು ಸ್ವೀಕರಿಸಿರುವ ದರ್ಶನ್ ಮತ್ತು ದಿನಕರ್ ಅವರ ಅಭಿಮಾನಿಗಳ ಕಾರ್ಯ ಶ್ಲಾಘನೀಯ’ ಎಂದು ನುಡಿದರು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ದಿನಕರ್ ತೂಗುದೀಪ `ನನ್ನ ನಲವತ್ತೆರಡನೇ ಹುಟ್ಟುಹಬ್ಬ ಇಷ್ಟೊಂದು ಅರ್ಥಪೂರ್ಣವಾಗಿ ನೆರವೇರಿದೆ. ಇದಕ್ಕಿಂತಾ ಖುಷಿ ಬೇರೇನಿದೆ. ನಮ್ಮ ಅಭಿಮಾನಿ ಸಂಘ ಮುಂದೆಯೂ ಹೀಗೇ ಉತ್ತಮ ಕೆಲಸಗಳನ್ನು ಮಾಡಿ ಮಾದರಿಯಾಗಲಿ. ಟಕ್ಕರ್ ಚಿತ್ರತಂಡಕ್ಕೂ ಒಳಿತಾಗಲಿ’ ಎಂದಿದ್ದಾರೆ.

This Article Has 1 Comment
  1. Pingback: custom baggo boards

Leave a Reply

Your email address will not be published. Required fields are marked *

Translate »
error: Content is protected !!