ಸ್ಯಾಂಡಲ್ ವುಡ್ ನಲ್ಲಿ ಭಯ ಹುಟ್ಟಿಸಲು ಬರುತ್ತಿದೆ ಟ್ರಂಕ್ !
ಸಿನಿಮಾ ಮಾಡೋಕೆ ಭಯ ಆಗುತ್ತೆ ಅನ್ನೋ ನಿರ್ಮಾಪಕರೇ ಈಗಿನ ಕಾಲದಲ್ಲಿ ಹೆಚ್ಚು. ಅದಕ್ಕೋ ಏನೋ ಭಯಾನಕ ಸಿನಿಮಾ ಮಾಡಿ ತಮ್ಮ ಭಯವನ್ನು ತೋಡಿಕೊಳ್ಳುತ್ತಲೇ, ಅದನ್ನು ಪ್ರೇಕ್ಷಕನಿಗೆ ತಲುಪಿಸುವ ನಿರ್ಮಾಪಕ, ನಿರ್ದೇಶಕರು ಈಗೀಗ ಹೆಚ್ಚಾಗುತ್ತಿದ್ದಾರೆ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗಿರುವ ನಿರ್ಮಾಪಕ ರಾಜೇಶ್ ಭಟ್. ದೆವ್ವ ಆಡ್ಸೋನು ಮ್ಯಾಲೆ ಕುಂತವ್ನು ಅನ್ನೋ ಮಾತನ್ನ ನಂಬಿಕೊಂಡು ಈ ಚಿತ್ರದ ಸೂತ್ರದ ದಾರ ಹಿಡಿದಿರುವ ನಿರ್ದೇಶಕಿ ರಿಷಿಕಾ ಶರ್ಮಾ. ಒಂದು ಇಂಟರೆಸ್ಟಿಂಗ್ ವಿಷಯ ಅಂದರೆ ಈಕೆ, ಲೆಜೆಂಡ್, ಜಿವಿ ಅಯ್ಯರ್ ಅವರ ಮೊಮ್ಮಗಳು. ಅಂದಹಾಗೆ ಇವರೆಲ್ಲಾ ಸೇರಿ ಈಗ ನಿರ್ಮಾಣ ಮಾಡಿ ಮುಗಿಸಿರೋ ಸಿನಿಮಾದ ಹೆಸರು ಟ್ರಂಕ್.
ಟ್ರಂಕ್…ಇದು ಸ್ಯಾಂಡಲ್ ವುಡ್ ನಲ್ಲಿ ಭಯ ಹುಟ್ಟಿಸಲು ಹೊರಟಿರುವ ಇನ್ನೊಂದು ಚಿತ್ರ. ಆದರೆ ಈ ಚಿತ್ರ ಈಗಾಗಲೇ ಮಾಡುತ್ತಿರುವ ಸದ್ದು ನೋಡಿದರೆ ಇದು ಹತ್ತರಲ್ಲಿ ಇನ್ನೊಂದು ಅನ್ನೋ ಥರ ಸಿನಿಮಾ ಅಲ್ಲ ಅನ್ಸೋದು ನಿಜ. ಹೌದು, ಹಾರರ್ ಈಸ್ ದ ಫ್ಯೂಚರ್ ಅನ್ನುತ್ತೆ ಈ ಫೀಚರ್ ಫಿಲ್ಮ್. ಭಯ ಆವರಿಸಿಕೊಳ್ಳೋದು ಕತ್ತಲೆಯಿಂದಾನೇ ಅನ್ನೋ ಈ ಸಿನಿಮಾ, ಚಿತ್ರಮಂದಿರದ ಕತ್ತಲ ಹಾಲ್ ನಲ್ಲಿ ಹಾರರ್ ಸಿನಿಮಾಗಳ ಮೇಲೆ ಬೆಳಕು ಚೆಲ್ಲಲು ಹೊರಟಿದೆ. ಆದರೆ ಈಗಾಗಲೇ ಜನರಿಗೆ ಟಾರ್ಚರ್ ಕೊಡುವ ಎಷ್ಟೋ ದೆವ್ವಗಳ ಸಿನಿಮಾಗಳನ್ನು ನೋಡಿರುವ ಕನ್ನಡ ಪ್ರೇಕ್ಷಕರು ಈ ಚಿತ್ರ ತಂಡ ಅದ್ಯಾವ ಹೊಸ ಟಾರ್ಚ್ ನಿಂದ ಹೊಸ ಬೆಳಕು ಚೆಲ್ಲಿದೆ ಅಂತ ನೋಡೋಕೆ ಕಾತುರರಾಗಿದ್ದಾರೆ.
ಹಾರರ್ ಸಿನಿಮಾಗಳಿಗೆ ಮೊದಲು ಮುಖ್ಯ ಆಗೋದು ಚಿತ್ರದ ಪೋಸ್ಟರ್ ಗಳು. ಅದನ್ನು ಅರಿತುಕೊಂಡಿರೋ ಟ್ರಂಕ್ ತಂಡ ಕತ್ತಲ ಬ್ಯಾಕ್ ಗ್ರೌಂಡ್ ನಲ್ಲಿ ಚಿತ್ರದ ಪಾತ್ರಗಳನ್ನು ಅಷ್ಟಾಗಿ ತೋರಿಸದೆ, ತನ್ನ ಟ್ರಂಕ್ ಅನ್ನುವ ಟೈಟಲ್ ಅನ್ನೇ ಟ್ರಂಪ್ ಕಾರ್ಡ್ ಆಗಿ ಮಾಡಿಕೊಂಡಿತ್ತು.
ಇನ್ನು, ಬರೀ ಪೋಸ್ಟರ್ ತೋರಿಸಿ ಸಮಾಧಾನ ಪಟ್ಟುಕೊಳ್ಳದೆ, ಎಲ್ಲರೂ ಮೊಬೈಲ್ ನಲ್ಲೇ ತಮ್ಮ ಚಿತ್ರದ ಟೀಸರ್ ನೋಡಲಿ ಎಂದು, ಪ್ರಮೋಷನ್ ಗಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಾ ಅಂಗೈಯಲ್ಲೇ ಆಕಾಶ ತೋರಿಸುವ ತೋರಿಸುವ ಕೆಲಸವನ್ನೂ ಟ್ರಂಕ್ ಮಾಡಿದೆ.
ಪೋಸ್ಟರ್, ಟೀಸರ್ ನಂತರ ಮುಂದೆ ಕುತೂಹಲ ಕೆರಳಿಸುವ ಸರದಿ ಚಿತ್ರದ ಟ್ರೈಲರ್ ನದ್ದು, ಅದರ ಸದ್ದು ಚೆನ್ನಾಗಿದ್ದರೆ ಮುಂದೆ ಸಿನಿಮಾ ಗೆದ್ದು, ಅದರಿಂದ ನಮಗೆ ಅದೃಷ್ಠ ಒದ್ದುಕೊಂಡು ಬರುತ್ತದೆ ಅನ್ನೋ ನಂಬಿಕೆ ಈಗಿನ ಅನೇಕ ಸಿನಿಮಾ ಮೇಕರ್ ಗಳದ್ದು. ಹಾಗಾಗಿ ಟ್ರೈಲರ್ ಮಾಡುವಲ್ಲಿಯೂ ಕುತೂಹಲ ಆಸಕ್ತಿ, ತೋರಿಸಿ, ಪರೋಕ್ಷವಾಗಿ ಪ್ರೇಕ್ಷಕರಿಗೆ ತಮ್ಮ ಚಿತ್ರದ ಮೇಲೆ ಕುತೂಹಲ ಕೆರಳುವಂತೆ ಮಾಡಿದೆ ಟ್ರಂಕ್ ಚಿತ್ರತಂಡ.
ಇನ್ನು ಚಿತ್ರದ ಕಥೆ ಏನಿರಬಹುದು ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ. ಯಾಕಂದ್ರೆ ದೆವ್ವದ ಸಿನಿಮಾ ಅಂದ್ರೆ, ಅಲ್ಲಿ ದೆವ್ವವೇ ನಾಯಕ, ಅದಕ್ಕೆ ಹೆದರಿಸೋದೇ ಕಾಯಕ ಅನ್ನೋದು ಎಲ್ರಿಗೂ ಗೊತ್ತು. ಆದರೆ ಅದರ ಹೊರತಾಗಿಯೂ ಚಿತ್ರದಲ್ಲಿ ವಿಭಿನ್ನ ಕಥೆ ಇರಬೇಕಲ್ಲವೇ. ಆ ದಿಕ್ಕಿನಲ್ಲಿ ವಿಚಾರಿಸಿದರೆ ಈ ಟ್ರಂಕ್ ಚಿತ್ರ ಒಂದು ಸತ್ಯ ಘಟನೆಯನ್ನು ಆಧರಿಸಿದ ಕಥೆ ಹೊಂದಿದೆಯಂತೆ. ಹಾಗಾಗಿ ಭೂತದ ಸಿನಿಮಾ ಮಾಡುತ್ತಿರೋ ಟ್ರಂಕ್ ಚಿತ್ರ ತಂಡ, ಭೂತಕಾಲದ ಘಟನೆಯೊಂದನ್ನು ಇಟ್ಟುಕೊಂಡು, ವರ್ತಮಾನ ಕಾಲದಲ್ಲಿ ಅದರ ಬಗ್ಗೆ ಸಿನಿಮಾ ಮಾಡಿ, ಮುಂದೆ ನಮಗೆ ಒಳ್ಳೆ ಭವಿಷ್ಯ ಇದೆ ಎಂದು ಕಾತುರದಿಂದ ಕಾಯುತ್ತಿದೆ.
ಚಿತ್ರದ ಕಥೆಯ ಬಗ್ಗೆ ಸ್ವಲ್ಪ ವಿವರವಾಗಿ ಹೇಳ್ತೀರಾ ಅಂತ ಪ್ರಶ್ನೆ ಕೇಳಿದ್ರೆ, ಉತ್ತರ ಕರ್ನಾಟಕದ ಒಂದು ಸಾಮಾನ್ಯ ಕುಟುಂಬದ ಕಥೆ ಇದು ಅನ್ನೋದೇ ಉತ್ತರ. ಮನೆಯೊಂದರಲ್ಲಿರೋ ಟ್ರಂಕ್ ಒಂದರಲ್ಲಿ ಭದ್ರವಾಗಿ ಅಡಗಿ ಕೂತಿರುವ ಭೂತ, ಚಿತ್ರಮಂದಿರದಲ್ಲಿ ಆರಾಮಾವಾಗಿ ಕೂತಿರೋ ಪ್ರೇಕ್ಷಕರನ್ನು ಸೀಟಿನ ತುದಿಗೆ ಹೇಗೆ ತಂದು ಕೂರಿಸುತ್ತದೆ ಅನ್ನೋದೇ ಇಲ್ಲಿ ಚಿತ್ರಕಥೆ.
ಈಗ ಟ್ರಂಕ್ ಚಿತ್ರದ ಸ್ಟಾರ್ ಕಾಸ್ಟ್ ವಿಷಯಕ್ಕೆ ಬರೋಣ. ದೆವ್ವದ ಸಿನಿಮಾ ಎಂದ ಮೇಲೆ, ಈ ಚಿತ್ರದಲ್ಲಿ ಯಾರು ತಮ್ಮ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಮತ್ತು ಚಿತ್ರದಲ್ಲಿರುವ ದೆವ್ವ ಯಾವ ಪರಕಾಯವನ್ನು ಪ್ರವೇಶ ಮಾಡುತ್ತದೆ ಅನ್ನೋದು ಸಹಜವಾದ ಪ್ರಶ್ನೆ. ಆದರೆ, ಚಿತ್ರದಲ್ಲಿನ ನಟರ ಅಭಿನಯ ನೋಡಲು ನಾವು ಚಿತ್ರಮಂದಿರಕ್ಕೇ ಹೋಗಬೇಕು. ಸದ್ಯಕ್ಕೆ, ನಿಹಾಲ್ ಮತ್ತು ವೈಶಾಲಿ ದೀಪಕ್ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅರುಣಾ ಬಾಲರಾಜ್. ಸುಂದರಶ್ರೀ ಮುಂತಾದ ಪೋಷಕ ಕಲಾವಿದರೂ ಇದ್ದಾರೆ ಎಂದಷ್ಟೇ ಹೇಳಬಹುದು.
ಇನ್ನು ತಮ್ಮ ಚಿತ್ರದ ಪ್ರಮೋಷನ್ ಅನ್ನೂ ಕೂಡ ವಿವಿಧ ರೀತಿಯಲ್ಲಿ ಮಾಡುತ್ತಿದೆ ಈ ಚಿತ್ರತಂಡ. ಟ್ರಂಕ್ ಎಂಬ ಹೆಸರಿರುವ ಟೀ ಶರ್ಟ್ ಗಳನ್ನು ಎದೆಯ ಮೇಲೆ ಹಾಕಿಕೊಂಡು, ತಮ್ಮ ಈ ಎದೆ ನಡುಗಿಸುವ ಹಾರರ್ ಚಿತ್ರ ನೋಡಿದರೆ ನೀವು ಖಂಡಿತಾ ನಿರಾಶರಾಗೋದಿಲ್ಲ ಎಂದು ಎದೆತಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಚಿತ್ರತಂಡದ ಸದಸ್ಯರು. ಇನ್ನು ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೂಡ ಟ್ರಂಕ್ ಚಿತ್ರವನ್ನು ತಪ್ಪದೇ ನೋಡಿ ಎಂದಿದ್ದಾರೆ. ವಿಶೇಷ ಅಂದ್ರೆ, ಕನ್ನಡ ಚಿತ್ರರಂಗದ ಅಪ್ಪಟ ಕಲಾವಿದರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ನಟ ಕಿಶೋರ್ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ಒದಗಿಸಿದ್ದಾರೆ.
ಇದೆಲ್ಲದರ ನಂತರ, ಹಾರರ್ ಸಿನಿಮಾ ಅಂದ್ರೆ ಅದರ ಶೂಟಿಂಗ್ ಮಾಡೋದು ಹೇಗೆ ಮುಖ್ಯಾನೋ, ಹಾಗೇ ಕತ್ತಲ ಕೋಣೆಯಲ್ಲಿ ಕೂತು ಅದರ ಪೋಸ್ಟ್ ಪ್ರೊಡಕ್ಷನ್ ನಲ್ಲಿ, ಘೋಸ್ಟ್ ಪ್ರೊಡಕ್ಷನ್ ಮಾಡೋದು ಅಷ್ಟೇ ಮುಖ್ಯ, ಮತ್ತು ಅದಕ್ಕೆ ಬ್ಯಾಕ್ ಬೋನ್ ಆಗಿರಬೇಕಾದ್ದು ಬ್ಯಾಕ್ ಗ್ರೌಂಡ್ ಮ್ಯೂಸಿಕ್. ಟ್ರಂಕ್ ಸಿನಿಮಾ ಇದೆಲ್ಲವನ್ನೂ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ ನಲ್ಲಿ ಮಾಡಿ ಮುಗಿಸಿದೆ.
ಒಟ್ಟಿನಲ್ಲಿ ಹೊಸಬರ ಚಿತ್ರತಂಡವೊಂದು ಟ್ರಂಕ್ ಎಂಬ ವಿಭಿನ್ನ ಹೆಸರಿನ ಚಿತ್ರ ಮಾಡಿ ಜುಲೈ 13ರ ಬಿಡುಗಡೆಯ ದಿನವನ್ನು ಕಾಯುತ್ತಿದೆ. ರಿಶಿಕಾ ಎಂಬ ಜಿವಿ ಅಯ್ಯರ್ ಮೊಮ್ಮಗಳ ನಿರ್ದೇಶನದ ಸಿನಿಮಾ ಅನ್ನೋ ಕಾರಣಕ್ಕೆ, ಈಗಾಗಲೇ ಇದು ಅಯ್ಯರ್ ಲೆವೆಲ್ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿಸಿದೆ. ಹಾಗಾಗಿ, ಬಾ ಬಾರೇ ರಿಶಿಕಾ ಎನ್ನುತ್ತಾ, ಟ್ರಂಕ್ ಒಳಗೆ ಏನೈತಿ, ಅಂಥದ್ದೇನೈತಿ ಅಂತ ಕಾಯುತ್ತಿದ್ದಾನೆ ಚಿತ್ರರಸಿಕ. ಮೇಲ್ನೋಟಕ್ಕಂತೂ ಇದು ಔಟ್ ಆಫ್ ದಿ ಟ್ರಂಕ್ ಸಿನಿಮಾ ಎನ್ನಿಸುತ್ತಿದೆ. ಒಟ್ಟಾರೆ ಹೇಳೋದಾದ್ರೆ, ನಮ್ಮ ನಡುವೆ, ದೆವ್ವ, ಭೂತ ಇರೋದು ಸತ್ಯವೋ ಸುಳ್ಳೋ ಯಾರಿಗೂ ಗೊತ್ತಿಲ್ಲ. ಆದರೆ ಸಿನಿಮಾ ಹೇಗಿದೆ ಅನ್ನೋ ಸತ್ಯಾ ಸತ್ಯತೆ, ಜುಲೈ 13ರಂದು ಟ್ರಂಕ್ ಓಪನ್ ಮಾಡಿದ ಮೇಲೆ ಗೊತ್ತಾಗಲಿದೆ.
Pingback: CI CD Solutions