ಅಬ್ಬರದ ಅಲೆಗಳ ನಡುವೆ ತೆರೆಗೆ ಬರುತ್ತಿರುವ ಪುಟ್ಟ ಚಿತ್ರ ಮಿತ್ರರಕ್ಷಕ. ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ಅವರ ಪುತ್ರ ಓಂಪ್ರಕಾಶ್ ನಾಯಕ್ ನಿರ್ದೇಶನದಲ್ಲಿ ಇದಿಗ ವರ್ಷಾಂತ್ಯದಲ್ಲಿ ಹಾರರ್, ಥ್ರಿಲ್ಲರ್ ಚಿತ್ರ ಮಿತ್ರರಕ್ಷಕ ಬಿಡುಗಡೆಯಾಗುತ್ತಿದೆ. ಪ್ರೇಮದ ಊರಲಿ ಗೆಲ್ಲಿಸುವ ಮೂಲಕ ಸಿನಿಮಾ, ಕಂಟೆಂಟ್ ಚೆನ್ನಾಗಿದ್ದರೆ ನಾವು ನೋಡುತ್ತೇವೆ, ಚಿಕ್ಕ ಬಜೆಟ್ ದೊಡ್ಡ ಬಜೆಟ್ ಅಂತ ನೋಡಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ.
ಸಾಹಸಸಿಂಹ ವಿಷ್ಣುವರ್ಧನ್, ರಮೇಶ್, ದ್ವಾರಕೀಶ್, ಪ್ರೇಮ ನಟಿಸಿದ್ದ ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳಿಂದ ಸ್ಪೂರ್ತಿ ಪಡೆದ ನಿರ್ದೇಶಕ ಪ್ರಕಾಶ್ ಆಪ್ತಮಿತ್ರ ಭಾಗ-3 ಮಾಡಲು ಹೊರಡುವುದರೊಂದಿಗೆ ಮಿತ್ರರಕ್ಷಕ ಚಿತ್ರದ ಕಥೆ ಆರಂಭವಾಗುತ್ತದೆ. ಚಿತ್ರೀಕರಣಕ್ಕೆ ಹೊರಟ ಚಿತ್ರತಂಡದ ಕಾರು ಕಾಡಿನ ಮಧ್ಯದ ಲೊಕೇಷನ್ ತಲುಪುವಷ್ಟರಲ್ಲಿ ಕೆಟ್ಟುನಿಲ್ಲುತ್ತದೆ. ಎಲ್ಲರೂ ನಡೆದು ಹೋಗುತ್ತ, ಕಾಡಿನಲ್ಲಿರೋ ಒಂಟಿಮನೆ ತಲುಪುತ್ತಾರೆ. ಅಲ್ಲಿ ಅವರಿಗೆ ಚಿತ್ರ ವಿಚಿತ್ರ ಅನುಭವಗಳಾಗುತ್ತವೆ. ಅಲ್ಲಿರೋ ನಾಗವಲ್ಲಿ ಅವರನ್ನು ಕೊಲ್ಲಲು ಪ್ರಯತ್ನಿಸುವುದೇಕೆ, ಯಾರು ಆ ನಾಗವಲ್ಲಿ, ಚಿತ್ರತಂಡ ಅಲ್ಲಿಂದ ಹೊರಬರಲು ನಡೆಸುವ ಪ್ರಯತ್ನದಲ್ಲಿ ಸಫಲರಾದರೆ ಎಂಬುದನ್ನು ಕುತೂಹಲಕರವಾಗಿ ನಿರೂಪಿಸಿದ್ದಾರೆ.

ಪಶ್ಚಿಮ ಘಟ್ಟದ ಶೃಂಗೇರಿ ಬಳಿಯಿರುವ ದಟ್ಟ ಕಾಡಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಪ್ರೇಕ್ಷಕರಿಗೆ ನೈಜ ಕಾಡಿನ ಅನುಭವ ನೀಡುತ್ತದೆ. ಇದರ ಜತೆಗೆ ಪ್ರೇಮಕತೆಯೂ ಸಾಗುತ್ತದೆ. ನವೆಂಬರ್ 27 ರಂದು ಮಿತ್ರರಕ್ಷಕ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಕ್ಯಾಮರಾಮನ್ ಆಗಿ ಕಿರಣ್, ಸಂಗೀತ ದೇವದಾಸ್, ಸಂಕಲನ ಶಿವಕುಮಾರ್ ಅವರದಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನದ ಜತೆ ನಿರ್ಮಾಣವನ್ನು ಓಂ ಪ್ರಕಾಶ್‌ನಾಯಕ್ ಮಾಡಿದ್ದಾರೆ. ತಾರಾಗಣದಲ್ಲಿ ಸಿಂಪಲ್ ಸ್ಟಾರ್ ಓಂಪ್ರಕಾಶ್ ನಾಯಕ್, ಸ್ಟೈಲ್‌ಕಿಂಗ್ ಶ್ರೀಧರ್, ಸ್ಮೈಲ್ ಶಿವು, ಸ್ವಪ್ನಶ್ರೀ, ಕಾವ್ಯ, ರುದ್ರೇಶ್, ಅವಿನಾಶ್ ಭರದ್ವಾಜ್, ಶಂಕರ್‌ಬಾಬು, ಪ್ರತಾಪ್ ಸಿರಿಗಣೆ, ಅನಿಲ್ ಹೆಗ್ಗಾರ್ ಕೊಡಿಗೆ, ವಿನಯ್ ಮಲೆನಾಡು, ನೆಲಮಂಗಲ ಬಾಬು, ಪ್ರಸನ್ನ ಧಾರವಾಡ ಮುಂತಾದವರಿದ್ದಾರೆ.






Be the first to comment