‘ಕಿರಾತಕ’ ಸೀಕ್ವೆಲ್ ಮಾಡುವ ಆಸೆ ಬಿಚ್ಚಿಟ್ಟ ಯಶ್

‘ಕಿರಾತಕ’ ಸಿನಿಮಾ ಮೂಲಕ  ಅಭಿಮಾನಿಗಳ ಮನಗೆದ್ದಿದ್ದ ರಾಕಿಂಗ್ ಸ್ಟಾರ್ ಯಶ್ ‘ಕಿರಾತಕ’ ಸೀಕ್ವೆಲ್ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ.

ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ ಮಾತನಾಡಿರುವ ಯಶ್, ನಿರೂಪಕಿ ಯಾವ ಪಾತ್ರಕ್ಕೆ ಪ್ರಿಕ್ವೆಲ್ ಅಥವಾ ಸ್ಪಿನ್ ಆಫ್ ಬರಬೇಕು ಎಂದು ಕೇಳಿದಾಗ,   ‘ಕಿರಾತಕ’ ಹೆಸರು ಹೇಳಿದ್ದಾರೆ. “ನಾನು ಕಿರಾತಕ ಸಿನಿಮಾ ಮಾಡಿದ್ದೆ. ವಾಸ್ತವವಾಗಿ ಅದರ ಸೀಕ್ವೆಲ್ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಬರೆದಿದ್ದೆವು ಮತ್ತು ಚಿತ್ರೀಕರಣವನ್ನೂ ಆರಂಭಿಸಿದ್ದೆವು. ಅದನ್ನು ಮಾಡಲು ನನಗೆ ತುಂಬಾ ಇಷ್ಟ. ಅದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ” ಎಂದು ಉತ್ತರಿಸಿದ್ದಾರೆ.

2011ರಲ್ಲಿ ತೆರೆಕಂಡಿದ್ದ ಮಂಡ್ಯದ ಭಾಷೆಯ ಸೊಗಡು ಮತ್ತು ಹಾಸ್ಯದ ಕಚಗುಳಿಯ ‘ಕಿರಾತಕ ಸಿನಿಮಾ ಯಶ್ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತ್ತು.  ಕೆಜಿಎಫ್ ಚಾಪ್ಟರ್ 1’ ಚಿತ್ರೀಕರಣ ಮುಗಿದ ಬೆನ್ನಲ್ಲೇ 2018ರಲ್ಲಿ ನಿರ್ದೇಶಕ ಅನಿಲ್ ಕುಮಾರ್  ನಿರ್ದೇಶನದಲ್ಲಿ ‘ಮೈ ನೇಮ್ ಇಸ್ ಕಿರಾತಕ’ ಹೆಸರಿನಲ್ಲಿ ಸಿನಿಮಾ ಆರಂಭವಾಗಿತ್ತು. ಯಶ್ ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿ ಚಿತ್ರೀಕರಣದಲ್ಲೂ ಭಾಗವಹಿಸಿದ್ದರು. ಕೆಜಿಎಫ್ 1′ ದೇಶಾದ್ಯಂತ ಐತಿಹಾಸಿಕ ಯಶಸ್ಸು ಕಂಡು, ‘ಕೆಜಿಎಫ್ 2’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾದ ಕಾರಣ ಯಶ್ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು.

ಯಶ್ ಅವರು ಕಥೆಯನ್ನು ಯಾರಿಗೂ ಕೊಡದಂತೆ ನಿರ್ದೇಶಕರಿಗೆ ತಿಳಿಸಿದ್ದು, ಮುಂದೆ  ಈ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ. ಆದರೆ ಚಿತ್ರ ಯಾವಾಗ ಪುನರಾರಂಭವಾಗಲಿದೆ  ಎಂಬ ಬಗ್ಗೆ  ದಿನಾಂಕ ಪ್ರಕಟವಾಗಿಲ್ಲ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!