ಚಿತ್ರ ವಿಮರ್ಶೆ : ‘ಕೃಷ್ಣಾ’ರ್ಪಣಂ

ಪೈಲ್ವಾನ್ ರಿಲೀಸ್ ಆಗಿದೆ. ಚಿತ್ರದ ಬಗ್ಗೆ ಹೇಳೋ ಮೊದ್ಲು ಆದ ಬೆಳವಣಿಗೆ ಬಗ್ಗೆ ಗಮನಿಸೋಣ. ಪೈಲ್ವಾನನ ಮೊದಲ ದಿನದ ಸದ್ದು ಜೋರಾಆಗಿತ್ತು. ಬಹುತೇಕರು ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರೆ, ಈ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಡಿ-ಬಾಸ್ ಹಾಗೂ ಕಿಚ್ಚ ಅಭಿಮಾನಿಗಳ ನಡುವೆ ಕಿತ್ತಾಟ ಆರಂಭವಾಗಿದೆ. ಹೌದು, ದರ್ಶನ್ ಅಭಿಮಾನಿಗಳು ಪ್ರೇಕ್ಷಕರ ‘ಪೈಲ್ವಾನ್’ ವಿಮರ್ಶೆ ಎಂದು ವಿಡಿಯೋ ಒಂದನ್ನು ಹಾಕಿಕೊಂಡಿದ್ದಾರೆ. ಅಚ್ಚರಿ ಎಂಬಂತೆ ಈ ವಿಮರ್ಶೆಯಲ್ಲಿ ಸಿನಿಮಾ ನೋಡಿ ಬಂದ ಪ್ರತಿಯೊಬ್ಬರೂ ಬೋರಿಂಗ್, ಕೊಟ್ಟ ಹಣ ಪೋಲು ಎಂದೆಲ್ಲ ಹೇಳಿಕೊಂಡಿದ್ದಾರೆ. ಈ ಮೂಲಕ ಸುದೀಪ್ ಸಿನಿಮಾ ಸರಿಯಿಲ್ಲ ಎಂದು ಬಿಂಬಿಸಿದ್ದಾರೆ. ಯಾವುದೋ ಚಿತ್ರದ ಬಗ್ಗೆ ಮಾಡಿದ ವಿಡಿಯೋವನ್ನು ಪೈಲ್ವಾನ್ ಚಿತ್ರಕ್ಕೆ ನಂಟು ಮಾಡಿ ಹರಿಯ ಬಿಟ್ಟಿದ್ದು ಖಂಡಿತಾ ದೊಡ್ಡ ಅಫರಾದ. ಇದರ ಬಗ್ಗೆ ದೊಡ್ಡ ತಲೆಗಳು ತಲೆಕೆಡಿಸಿಕೊಳ್ಳಬೇಕು. ಈ ಅನಾಚಾರದ ಹಿಂದಿರುವವರಿಗೆ ತಕ್ಕ ಶಾಸ್ತಿಯಾಗಬೇಕಿದೆ.

ಹಾಗಿದ್ದರೆ, ಚಿತ್ರದ ಮೊದಲ ದಿನವೇ ಹಲವು ಕಿತ್ತಾಟ-ರಂಪಾಟಕ್ಕೆ ಕಾರಣವಾದ ಪೈಲ್ವಾನ್‍ನ ಅಖಾಡದಲ್ಲಿ ಅಸಲಿಗೆ ಏನಿದೆ ನೋಡೋಣ.
ದೇಸಿ ಸೊಗಡಿನ ಚಿತ್ರ ಕನ್ನಡದಲ್ಲಿ ಇದೇ ಮೊದಲೇನಲ್ಲ. ಆದರೆ, ದೇಸಿ ಸೊಗಡಿನ ಜೊತೆ ಒಂದಷ್ಟು ಸೆಂಟಿಮೆಂಟ್, ಇನ್ನೊಂದಿಷ್ಟು ರೋಮಾನ್ಸ್ ಅನ್ನು ಪರಫೆಕ್ಟ್ ಆಗಿ ಬ್ಲೆಂಡ್ ಮಾಡಿದ್ದು ಇದೇ ಮೊದಲಿರಬೇಕು. ಅದಕ್ಕೇ ಪೈಲ್ವಾನಾ ಬೋರ್ ಹೊಡೆಸದೆ ನೋಡಿಸಿಕೊಂಡು ಹೋಗತ್ತಾನೆ.

ಪೈಲ್ವಾನನ ಕಥೆ ಆರಂಭವಾಗೋದು ಫ್ಲಾಶಬ್ಯಾಕ್ ಮೂಲಕ. ಅನಾಥ ಹುಡುಗನೊಬ್ಬ ಪೈಲ್ವಾನ್ ಕುಟುಂಬದ ಮನೆ ಸೇರಿಕೊಂಡು, ಆ ಕುಟುಂಬದ ಯಜಮಾನ ಸರಕಾರ್ (ಸುನೀಲ್ ಶೆಟ್ಟಿ)ನ ಕನಸಾದ ಬಾಕ್ಸಿಂಗ್‌ನಲ್ಲಿ ಚಾಂಪಿಯನ್ ಪಟ್ಟ ಪಡೆಯುವ ಕಥೆಯೇ ಪೈಲ್ವಾನ್ ಸಿನಿಮಾ ಎಂದು ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದು, ಆದರೆ ಚಿತ್ರದ ಟರ್ನ್ ಮತ್ತು ಟ್ವಿಸ್ಟ್‍ಗಳು ನಿಜಕ್ಕೂ ಮಜಾ ನೀಡುತ್ತವೆ.

ಡೈರೆಕ್ಟರ್ ಕೃಷ್ಣ ಈ ಚಿತ್ರದ ಮೂಲಕ, ಒಂದು ರೀತಿಯಲ್ಲಿ ಸ್ವದೇಶ ಪ್ರೇಮವನ್ನು ಮರೆದಿದ್ದಾರೆ. ಹೇಗೊತ್ತಾ, ಕುಸ್ತಿ ದೇಸಿ ಆಟ. ಬಾಕ್ಸಿಂಗ್ ವಿದೇಶಿ ಕ್ರೀಡೆ. ದೇಸಿ ವಿದೇಶಿ ನಡುವಿನ ಬದಲಾವಣೆಯ ಸೂಕ್ಷ್ಮತೆಯನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಸಿನಿಮಾದಲ್ಲಿದೆ. ಸರಕಾರ್ ಗರಡಿಯಲ್ಲಿ ಬೆಳೆದ ಕಿಚ್ಚ ಅಲಿಯಾಸ್ ಕೃಷ್ಣ (ಸುದೀಪ್) ಅನಾಥ. ಸರಕಾರನೇ ಈತನಿಗೆ ತಂದೆ, ತಾಯಿ ಮತ್ತು ಸರ್ವಸ್ವ. ಇಬ್ಬರಿಗೂ ಒಂದೇ ಗುರಿ, ಅದು ಬಾಕ್ಸಿಂಗ್ ನಲ್ಲಿ ಚಾಂಪಿಯನ್‌ ಆಗುವುದು. ಹಾಗಾಗಿ ಕಿಚ್ಚನ ಯೋಚನೆ, ಆಲೋಚನೆ ಕೇವಲ ಚಾಂಪಿಯನ್ ಆಗುವುದರತ್ತ ಇರಬೇಕು ಎನ್ನುವುದು ಸರಕಾರ್ ಆಸೆ. ಸರ್ಕಾರ್ ಆಸೆ ಕೊನೆಗೂ ಇಡೇರುತ್ತದಾ?

ಹಾಗಿದ್ದರೆ ಪೈಲ್ವಾನನ ಲವ್-ರೊಮಾನ್ಸ್ ಕಥೆ? ಹೇಳ್ತೀವಿ. ಪೈಲ್ವಾನನ ಬಾಳಲ್ಲಿ ದೊಡ್ಡ ಬಿಸ್ನೆಸ್ ಮ್ಯಾನ್ ದೇಶಪಾಂಡೆ (ಅವಿನಾಶ್) ಪುತ್ರಿ ರುಕ್ಮಿಣಿ (ಆಕಾಂಕ್ಷಾ ಸಿಂಗ್) ಆಗಮನ ಆಗುತ್ತದೆ. ನಿರೀಕ್ಷೆಯಂತೆ ಇಬ್ಬರ ಪ್ರೀತಿ ಮದುವೆಯವರೆಗೂ ಬಂದು ನಿಲ್ಲುತ್ತದೆ. ಪೈಲ್ವಾನ್ ಜತೆ ಮಗಳ ಮದುವೆ ಆಗುವುದನ್ನು ಸಹಿಸದ ದೇಶಪಾಂಡೆ, ಸರಕಾರ್ ನ ಮೊರೆ ಹೋಗುತ್ತಾನೆ. ನಿನ್ನ ಮಗಳ ಬಾಳಲ್ಲಿ ಪೈಲ್ವಾನ ಬರುವುದಿಲ್ಲವೆಂದು ದೇಶಪಾಂಡೆಗೆ ಮಾತುಕೊಡುವ ಸರಕಾರ್. ಆದರೆ, ಕಿಚ್ಚ ಮಾತು ತಪ್ಪುತ್ತಾನೆ. ಅದರಿಂದಾಗಿ ತನ್ನ ಜೀವವೇ ಆಗಿದ್ದ ಸರಕಾರ್ ನಿಂದ ಕಿಚ್ಚ ದೂರವಾಗಬೇಕಾಗುತ್ತದೆ. ಹೆಂಡತಿ ಕರೆದುಕೊಂಡು ಊರೇ ಬಿಡುವ ಕಿಚ್ಚನಿಗೆ ನೂರಾರು ತಾಪತ್ರಯಗಳು ಎದುರಾಗುತ್ತವೆ. ಅವುಗಳನ್ನು ಆತ ಎದುರಿಸುತ್ತಾನಾ? ಸರ್ಕಾರ್ ಇಲ್ಲದೆಯೂ ಕಿಚ್ಚ ಬಾಕ್ಸಿಂಗ್ ಚಾಂಪಿಯನ್ ಆಗ್ತಾನಾ? ಅನ್ನುವುದರ ಉತ್ತರವೇ ಪೈಲ್ವಾನ್.

ಕೃಷ್ಣ ಸಿನಿಮಾದ ಮೊದಲರ್ಧ ನಾಯಕನ ವೈಭವವನ್ನೇ ಸಾರಿ, ತಾನು ಚಿತ್ರದ ಕಂಟೆಂಟ್‍ಗಿಂತ ಸುದೀಪ್ ಅನ್ನು ಅವಲಂಬಿಸರೋದನ್ನ ಪ್ರೂವ್ ಮಾಡುತ್ತಾರೆ. ಅರ್ಜುನ್ ಎಷ್ಟೇ ಅದ್ಭುತ ಹಿನ್ನಲೆ ಸಂಗೀತ ನೀಡಿದರೂ ಕಿಚ್ಚನಿಗೆ ಇನ್ನಿಲ್ಲದ ಬಿಲ್ಡ್‍ಪ್ ಕೊಟ್ಟಿರೋದು ಚಿತ್ರದ ಓಟಕ್ಕೆ ತಡೆಯಾಗಿದೆ. ಅಸಲಿ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲೊಂದು ಪ್ರೇಮ, ಪುಟ್ಟ ಸಂಸಾರ, ಸರಕಾರ್ ಮತ್ತು ಕಿಚ್ಚನ ನೋವು, ಸರಸ, ವಿರಸ, ಚಾಂಪಿಯನ್ ಆಗುವ ಕನವರಿಕೆ, ಕಷ್ಟ- ಸಂಕಷ್ಟಗಳ ಸರಮಾಲೆಗಳೇ ತುಂಬಿವೆ. ಕಥೆ ವೇಗ ಪಡೆದುಕೊಳ್ಳುತ್ತದೆ. ಪೈಲ್ವಾನ್‌ಗೆ ಇರಬೇಕಾದ ಗತ್ತು, ಗಾಂಭೀರ್ಯವನ್ನು ಕಿಚ್ಚ ಸುದೀಪ್ ನೋಟದಲ್ಲೇ ಸೆರೆ ಹಿಡಿದಿದ್ದಾರೆ. ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ವಿಜಯದುರ್ಗ ದಸರಾದಲ್ಲಿ ರಾಜಾ ರಾಣಾ ಪ್ರತಾಪ್‌ (ಸುಶಾಂತ್ ಸಿಂಗ್) ಜತೆ ಕುಸ್ತಿ ಕಣದಲ್ಲಿ ಸೆಣಿಸುವ ರೀತಿ ಅಪ್ಪಟ ದೇಸಿ ಮೆರಗು ತಂದುಕೊಟ್ಟಿದೆ. ಅದರಲ್ಲೂ ಟೋನಿ (ಕಬೀರ್ ದೊಹಾನ್ ಸಿಂಗ್) ಜತೆ ಬಾಕ್ಸಿಂಗ್ ಮಾಡುವ ಕಿಚ್ಚನ ತಯಾರಿ ಅಸಲಿ ಕಹಾನಿಯನ್ನು ಬಿಚ್ಚಿಡುತ್ತದೆ.
ಹಾಡುಗಳ ಹಬ್ಬ ಸಿನಿಮಾದ ಮೆರಗನ್ನು ಮತ್ತಷ್ಟು ಹೆಚ್ಚಿಸಿವೆ. ಸೆಟ್, ಕಾಸ್ಟ್ಯೂಮ್, ಕಲರ್ ಕಾಂಬಿನೇಷನ್ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಸಿನಿಮಾದಲ್ಲಿ ಮಾತ್ರವಲ್ಲ, ಸಿನಿಮಾದಾಚೆಯೂ ಡೈಲಾಗ್ ಮೂಲಕ ಎದುರಾಳಿಗಳಿಗೆ ಸುದೀಪ್ ಟಾಂಗ್ ಕೊಡುತ್ತಾರೆ ಅಂತಂದುಕೊಂಡರೆ ಅವರವರ ಭಾವಕ್ಕೆ ಬಿಟ್ಟಿದ್ದು. ಸುದೀಪ್ ಪೈಲ್ವಾನಾಗಿದ್ದುಕೊಂಡೇ ಅಲ್ಲಲ್ಲಿ ಕಚಗುಳಿ ಇಡುವ ಕಾಮಿಡಿ ಮಾಡಿರೋದು ಇಷ್ಟವಾಗುತ್ತದೆ. ಇಮೋಷನಲ್ ಸೀನ್ಸ್‍ಗಳಲ್ಲಿ ಎಂದಿನಂತೆ ಕಿಚ್ಚ ಸೂಪರ್.

ಅರ್ಜುನ್ ಜನ್ಯ ಅವರ ಹಿನ್ನೆಲೆ ಮತ್ತು ಹಾಡುಗಳಿಗೆ ನೀಡಿರುವ ಸಂಗೀತ ಹದವಾಗಿ ಕಥೆಯಲ್ಲಿ ಬೆರೆತುಕೊಂಡಿದೆ. ಅಪರೂಪವೆಂಬಂತೆ ಸುದೀಪ್ ಚಿತ್ರದಲ್ಲೂ ಕೃಷ್ಣ ನಾಯಕಿಯ ಪಾತ್ರಕ್ಕೆ ಒತ್ತು ನೀಡಿದ್ದಾರೆ. ನಟಿ ಆಕಾಂಕ್ಷ ತಮ್ಮ ಬೆಸ್ಟ್ ಪರ್‍ಫಾಮೆನ್ಸ್ ನೀಡಿದ್ದಾರೆ. ಡಬ್ಬಿಂಗ್ ಅಷ್ಟೊಂದು ಹೊಂದಿಕೆ ಆಗದೇ ಇದ್ದರೂ, ಅಭಿನಯದ ವಿಷಯಕ್ಕೆ ಬಂದರೆ, ಸುನಿಲ್ ಶೆಟ್ಟಿ ತಮ್ಮನ್ನು ಪ್ರೂವ್ ಮಾಡಿಕೊಂಡಿದ್ದಾರೆ. ಪಪ್ಪು ಪಾತ್ರದಲ್ಲಿ ಪಪ್ಪಣ್ಣ ಸಹಿಸಬಲ್ಲ ಕಾಮಿಡಿ ನೀಡಿದ್ದಾರೆ. ‘ಸಾಧು’ ಓವರ್ ಕಾಮಿಡಿಗೆ ಪಪ್ಪು ರಿಪ್ಲೇಸೇಮೆಂಟ್ ಆಗಬಹುದೇನೋ.

ಪಾತ್ರಗಳ ಆಯ್ಕೆ, ಸಿನಿಮಾ ಮೇಕಿಂಗ್, ವೈಭವದಿಂದ ಕೂಡಿದ ದೃಶ್ಯಗಳ ಕಾರಣದಿಂದಾಗಿ ನಿರ್ದೇಶಕ ಎಸ್. ಕೃಷ್ಣ ಇಷ್ಟವಾಗುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾದ ಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಕೃಷ್ಣ ಇನ್ನಷ್ಟು ಇನ್ನಷ್ಟು ಪ್ಯಾನ್ ಇಂಡಿಯಾ ಮಾದರಿಯ ಚಿತ್ರಗಳ ಬಗ್ಗೆ ಸುಳಿವು ನೀಡಿದ್ದಾರೆ. ಇನ್ನು, ದೊಡ್ಡ ಚಿತ್ರವೊಂದು ರಿಲೀಸ್ ಆದಾಗ ಅಭಿಮಾನಿಗಳು ಅವರಷ್ಟಕ್ಕೆ ಕೆಸರು ಎರಚಿಕೊಂಡು ಅದರಲ್ಲೇ ಖುಷಿ ಪಡೋದು ಇದ್ದಿದ್ದೆ. ಅದೆಲ್ಲವನೂ ಬದಿಗಿಟ್ಟು ಪೈಲ್ವಾನಾನನ ಅಖಾಡಕ್ಕೊಮ್ಮೆ ಇಳಿದು ಬನ್ನಿ ನಿಮ್ಮಲೂ ಲೈಫ್‍ನಲ್ಲಿ ಏನಾನ್ನದರೂ ಸಾಧಿಸಬೇಕುಅನ್ನುವ ಹುಮ್ಮಸ್ಸು ಬಂದು ಬಿಡುತ್ತದೆ. ಅಲ್ಲಿಗೆ ಕೃಷ್ಣ ಅಂಡ್ ಟೀಮ್‍ನ ಸಾಹಸ ಸಾರ್ಥಕ.

@www.Bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!