ಅಂತರಧರ್ಮೀಯ ವಿವಾಹದಿಂದಾಗಿ ಮನೆಯಲ್ಲಿ ತೊಂದರೆ ಎದುರಿಸಿದ್ದಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ತಿಳಿಸಿದ್ದಾರೆ.
‘ಕರ್ಲಿ ಟೇಲ್ಸ್’ ಜೊತೆಗಿನ ಸಂಭಾಷಣೆಯಲ್ಲಿ, ಭಿನ್ನ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಕಾರಣದಿಂದಾಗಿ ತಾವು ಮನೆಯಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಕೀರ್ತಿ ಬಹಿರಂಗಪಡಿಸಿದ್ದಾರೆ. ತಮ್ಮ ಅಂತರ-ಧರ್ಮೀಯ ವಿವಾಹ ಮತ್ತು ಕುಟುಂಬವನ್ನು ಒಪ್ಪಿಸುವಾಗ ಎದುರಿಸಿದ ಸವಾಲುಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ.
’12ನೇ ತರಗತಿ ಮುಗಿದ ತಕ್ಷಣ ನಾನು ಡೇಟಿಂಗ್ ಆರಂಭಿಸಿದೆ. ನಾನು ಕಾಲೇಜಿನಲ್ಲಿದ್ದಾಗ ನನ್ನ ತಾಯಿ ನನ್ನ ಡೈರಿಯನ್ನು ಓದಿದರು. ಅದರಲ್ಲಿ ನಮ್ಮ ಸಂಬಂಧದ ಬಗ್ಗೆ ಎಲ್ಲವೂ ಇತ್ತು. ‘ನಾನು ನಿನ್ನ ತಾಯಿ, ನಿನ್ನ ಡೈರಿಯನ್ನು ಓದಬಹುದು’ ಎಂದು ಅವರು ಹೇಳಿದರು. ಆ ಘಟನೆಯ ನಂತರ ನಾನು ಡೈರಿ ಬರೆಯುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟೆ. ನನಗೆ ಬರೆಯುವುದೆಂದರೆ ತುಂಬಾ ಇಷ್ಟವಿತ್ತು. ಆದರೆ ಈಗ ಆ ಡೈರಿ ಎಲ್ಲಿದೆ ಎಂದು ಕೂಡ ನನಗೆ ಗೊತ್ತಿಲ್ಲ. ಅದು ನನಗೆ ಮತ್ತೆ ಸಿಕ್ಕರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತದೆ. ಆದರೆ ಬಹುಶಃ ಅದನ್ನು ನನ್ನ ತಾಯಿ ಸುಟ್ಟುಹಾಕಿರಬಹುದು ಎಂದು ನನಗೆ ಅನ್ನಿಸುತ್ತದೆ ಎಂದು ತಿಳಿಸಿದ್ದಾರೆ.
‘ನಾವು ಡಿಸೆಂಬರ್ 2009ರಲ್ಲಿ ಭೇಟಿಯಾದೆವು . ಜನವರಿ 2010ರಿಂದ ಡೇಟಿಂಗ್ ಆರಂಭಿಸಿದೆವು. 2024ರಲ್ಲಿ ನಾವು ವಿವಾಹವಾದೆವು. ಅವರು ಕ್ರೈಸ್ತರಾಗಿರುವುದರಿಂದ ಸಹಜವಾಗಿ ಮನೆಯಲ್ಲಿ ಕೆಲವು ಸಮಸ್ಯೆಗಳು ಎದುರಾದವು. ನನ್ನ ಕುಟುಂಬವನ್ನು ಒಪ್ಪಿಸಲು ನನಗೆ ಸಾಕಷ್ಟು ಸಮಯ ಬೇಕಾಯಿತು’ ಎಂದಿದ್ದಾರೆ.
ಕೀರ್ತಿ ಸುರೇಶ್ ಮತ್ತು ಉದ್ಯಮಿ ಆಂಟನಿ ತಟ್ಟಿಲ್ ಅವರು 15 ವರ್ಷಗಳ ಕಾಲ ಪ್ರೇಮ ಸಂಬಂಧದಲ್ಲಿದ್ದರು. ಡಿಸೆಂಬರ್ 2024ರಲ್ಲಿ ವಿವಾಹವಾದರು. ಏಳು ವರ್ಷ ಹಿರಿಯರಾದ ಆಂಟನಿ ಕತಾರ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ಜೋಡಿ ತಮ್ಮ ಸಂಬಂಧವನ್ನು ಹಲವು ವರ್ಷಗಳ ಕಾಲ ಸಾರ್ವಜನಿಕರ ಕಣ್ಣಿಗೆ ಬೀಳದಂತೆ ಗೌಪ್ಯವಾಗಿರಿಸಿದ್ದರು. ಚಲನಚಿತ್ರರಂಗದ ಕೆಲವೇ ಮಂದಿಗೆ ಇವರ ಪ್ರೇಮದ ಬಗ್ಗೆ ತಿಳಿದಿತ್ತು.
—-





Be the first to comment