ಚಿತ್ರ : ಚಂದ್ರಹಾಸ
ನಿರ್ದೇಶನ : ಆನಂದ್ ಎಸ್.ಕಲಕಬಂಡಿ
ನಿರ್ಮಾಣ : ಬಸವಂತಗೌಡ ಪಾಟೀಲ್
ಕಲಾವಿದರು : ಹರೀಶ್ ಹಿರಿಯೂರು, ಛಾಯಾ ಶ್ರೀ ಯು, ಸಂತೋಷ್ ಕೇರಿ ಮೊದಲಾದವರು…
ಬಿಸಿನಿಮಾಸ್ ರೇಟಿಂಗ್ : 3/5
ಒಬ್ಬ ಸಾಮಾನ್ಯ ವರ್ಗದ ವ್ಯಕ್ತಿಯ ಬದುಕಿನಲ್ಲಿ ನಡೆಯುವ ಏರುಪೇರುಗಳಿಗೆ ನೀಡಲಾದ ಸಿನೆಮಾ ರೂಪವೇ ಚಂದ್ರಹಾಸ. ಇದೇ ಕಾರಣದಿಂದ ಸಾಮಾನ್ಯವರ್ಗದ ಪ್ರತಿ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗುವಂತಿದೆ.
ಸೋಮಶೇಖರ ಬೇಜವಾಬ್ದಾರಿಯ ಯುವಕ. ಆತನ ಮನೆಯಲ್ಲಿ ವಿಧವೆ ತಾಯಿ ಮತ್ತು ವಿಧವೆ ಅಕ್ಕ ಮಾತ್ರ ಇರುತ್ತಾರೆ. ಮಗ ಕಲಿತು ಪಾಸಾಗಿ ತನ್ನ ಗಂಡನಿಗಿದ್ದಂಥ ಅಂಚೆ ಇಲಾಖೆಯ ಕೆಲಸ ಪಡೆಯುವಂತಾಗಲಿ ಎನ್ನುವುದು ತಾಯಿಯ ಆಶಯ. ಆದರೆ ಸೋಮ ಪದೇ ಪದೆ ಫೇಲಾಗುತ್ತಾನೆ. ಮನೆಯ ದುಡಿಮೆಗೆ ಆಧಾರ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಮಗನಿಗೆ ಮದುವೆ ಮಾಡಿದರೆ ಜವಾಬ್ದಾರಿ ಬಂದೀತು ಎನ್ನುವ ನಂಬಿಕೆಯಿಂದ ಆ ತಾಯಿ ಹುಡುಗಿ ಹುಡುಕುತ್ತಾಳೆ. ನೌಕರಿ ಇರದ ಸೋಮನ ಕೈ ಹಿಡಿಯಲು ಆತನ ಅತ್ತೆ ಮಗಳು ಒಪ್ಪಿಕೊಳ್ಳುತ್ತಾಳೆ. ಈ ಮದುವೆಯ ಬಳಿಕ ಸೋಮ ಸುಧಾರಿಸುತ್ತಾನ? ಈತನನ್ನು ಸುಧಾರಿಸಲೇಬೇಕು ಎನ್ನುವ ಹಠಕ್ಕೆ ಸ್ನೇಹಿತ ಚಂದ್ರಹಾಸನ ಪ್ರಯತ್ನ ಫಲಿಸುವುದೇ? ಇದಕ್ಕೆ ಉತ್ತರ ತಿಳಿಯಬೇಕಾದರೆ ಈ ಚಿತ್ರವನ್ನು ನೋಡಬೇಕು.
ಇದು ಉತ್ತರ ಕರ್ನಾಟಕದ ಮಂದಿ ಮಾಡಿರುವ ಚಿತ್ರ. ಅಲ್ಲಿನದೇ ಕಥೆಯನ್ನು ಅಲ್ಲಿನದೇ ಭಾಷೆಯೊಂದಿಗೆ ಯಾವುದೇ ತಾರೆಯರ ಸಹವಾಸವಿಲ್ಲದೇ ಮಾಡಿರುವುದೇ ಸಾಹಸ. ಅದರಲ್ಲೂ ಚಿತ್ರವನ್ನು ಥಿಯೇಟರ್ ತನಕ ತಂದಿದ್ದಾರೆ. ಮಾತ್ರವಲ್ಲ, ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಶೆಯಂತೂ ಆಗುವುದಿಲ್ಲ.
ಸೋಮಶೇಖರನ ಪಾತ್ರದ ಸುತ್ತವೇ ಕಥೆ ಸುತ್ತುತ್ತದೆ. ಆದರೂ ಎಲ್ಲಿಯೂ ತನ್ನ ಪಾತ್ರದ ಮೂಲಕ ಬೋರ್ ಹೊಡೆಸದಂಥ ನಟನೆ ನೀಡಿರುವ ಪಾತ್ರಧಾರಿ ಪ್ರಶಂಸಾರ್ಹ. ಬೇಜವಾಬ್ದಾರಿ ಎನ್ನುವುದನ್ನು ಸೋಮನ ಬಾಡಿ ಲ್ಯಾಂಗ್ವೇಜ್ ನಲ್ಲೇ ಕಾಣಬಹುದಾಗಿದೆ. ಸೋಮನ ಅತ್ತೆ ಮಗಳು ಶ್ರೀದೇವಿ. ಈ ಪಾತ್ರಧಾರಿ ಕೂಡ ಅಷ್ಟೇ, ತಮ್ಮ ಸಹಜ ಸೌಂದರ್ಯದ ಜತೆಗೆ ನೈಜ ನಟನೆಯಿಂದಲೂ ಮನಸೆಳೆಯುತ್ತಾರೆ.
ಪ್ರಧಾನ ಪಾತ್ರಗಳು ಮಾತ್ರವಲ್ಲದೆ, ಪ್ರತಿಯೊಬ್ಬ ಕಲಾವಿದರಿಂದಲೂ ಸಹಜವಾದ ಅಭಿನಯವನ್ನು ಹೊರತೆಗೆದ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ಸೋಮನ ತಾಯಿ, ಅಕ್ಕ ಪಾತ್ರಗಳನ್ನು ನಿರ್ವಹಿಸಿದವರಂತೂ ಪರದೆ ಮೇಲೆ ಬದುಕಿ ತೋರಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿನ ಹಾಡುಗಳು ಮನಮುಟ್ಟುವಂತಿವೆ. ಛಾಯಾಗ್ರಹಣದಲ್ಲಿ ಹೊಸ ಪ್ರಯತ್ನ ಮಾಡಲಾಗಿದೆ. ಮುಖ್ಯವಾಗಿ ಚಿತ್ರಕಥೆ ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಸಂಭಾಷಣೆಗಳು ನೈಜವಾಗಿವೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳು ಕೂಡ ಪರಿಸ್ಥಿತಿಯ ಕೈಗೊಂಬೆಗಳು. ಆದರೆ ಸೋಮನ ಪಾತ್ರಮಾತ್ರ ಸ್ವಯಂಕೃತ ಅಪರಾಧದಿಂದ ಕೆಡುತ್ತಾ ಹೋಗುತ್ತದೆ. ಸ್ವಲ್ಪ ಇಚ್ಛಾಶಕ್ತಿ ಇದ್ದರೆ ಹೇಗೆ ಬದುಕನ್ನು ಭವ್ಯವಾಗಿಸಬಹುದು ಎನ್ನುವುದನ್ನು ಸ್ನೇಹಿತ ಚಂದ್ರನ ಮೂಲಕ ಚಿತ್ರದ ಉದ್ದಕ್ಕೂ ಸಾರಲಾಗಿದೆ. ಆದರೆ ಇದು ಸೋಮನನ್ನು ಬದಲಾಯಿಸುತ್ತಾ ಎನ್ನುವುದನ್ನು ಚಿತ್ರ ನೋಡಿ ತಿಳಿಯಬಹುದು. ಸೋಮ ಬದಲಾಗುತ್ತಾನೋ ಇಲ್ಲವೋ ಆದರೆ ಪ್ರೇಕ್ಷಕರಲ್ಲಿ ಬದುಕಿನತ್ತ ಒಂದು ಪಾಸಿಟಿವ್ ಪ್ರೇರಣೆಯನ್ನು ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.





Be the first to comment