ಕಾದಂಬರಿ ಆಧರಿಸಿ ತಮಸ್ ಚಿತ್ರ

ಸ್ಯಾಂಡಲ್‍ವುಡ್‍ನಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಜಮಾನ ಮತ್ತೆ ಶುರುವಾದಂತಿದೆ. ಲೇಖಕಿ ವಿಜಯಲಕ್ಷ್ಮಿಮಂಜುನಾಥರೆಡ್ಡಿ ಅವರು ಬರೆದಿರುವ ಕತ್ತಲು ಕಾದಂಬರಿ ಆಧರಿಸಿ ತಮಸ್ ಎಂಬ ಚಿತ್ರವನ್ನು ರೆಬೆಲ್‍ಸ್ಟಾರ್ ಅಂಬರೀಷ್ ಅವರ ಅಪ್ಪಟ ಅಭಿಮಾನಿ ಸ್ವಾತಿ ಅಂಬರೀಷ್ ನಿರ್ದೇಶಿಸಲು ಹೊರಟಿದ್ದಾರೆ.

ಇದಕ್ಕೂ ಮುನ್ನ ಇವರು ತಾಂಡವ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಮೊನ್ನೆ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ನಡೆದ ತಮಸ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಆಗಮಿಸಿ ಚಿತ್ರಕ್ಕೆ ಸ್ವಿಚ್‍ಆನ್ ಮಾಡಿದರೆ, ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಟ ಮಹೇಶ್ ಅವರ ಸಹೋದರ ಯೋಗಿ, ನಿರ್ಮಾಪಕರಾದ ಸಿದ್ದರಾಜು, ಬಾಮಾ ಗಿರೀಶ್ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಮುಹೂರ್ತ ಸಮಾರಂಭದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಸ್ವಾತಿ ಅಂಬರೀಷ್, ಇದೊಂದು ಟ್ರೈಆ್ಯಂಗಲ್ ಲವ್‍ಸ್ಟೋರಿಯಾಗಿದ್ದು, ವಿಜಯಲಕ್ಷ್ಮಿ ಮಂಜುನಾಥರೆಡ್ಡಿ ಅವರ ತಮಸ್ ಎಂಬ ಕಾದಂಬರಿಯನ್ನು ಆಧಾರಿಸಿ ಚಿತ್ರಕಥೆ ಬರೆದಿದ್ದೇವೆ.

ಇದೇ 28ರಂದು ಆರಂಭಿಸಿ ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತ 35 ದಿನಗಳ ಕಾಲ ಶೂಟಿಂಗ್ ನಡೆಸುವ ಯೋಜನೆ ಹಾಕಿದ್ದೇವೆ. ಚಿಕ್ಕಮಗಳೂರು ಬಳಿಯ ದೇವರಮನೆ ಎಂಬಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರೀಕರಿಸುತ್ತಿದ್ದೇನೆ ಎಂದು ಹೇಳಿದರು.

ಲೂಸ್‍ಮಾದ್ ಯೋಗಿ ಅವರ ತಮ್ಮ ಕಂ ತಮಸ್ ನಾಯಕನಟ ಮಹೇಶ್ ಮಾತನಾಡಿ, ಈ ಹಿಂದೆ ನಾನು ಭಾಗ್ಯರಾಜ್ ಎಂಬ ಚಿತ್ರದಲ್ಲಿ ನಟಿಸಿದ್ದೆ, ಅದಾದ ನಂತರ ಬಹಳ ಗ್ಯಾಪ್ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ, ಇಡೀ ಚಿತ್ರವು ನಾಲ್ಕೇ ಪಾತ್ರಗಳ ಸುತ್ತ ಗಿರಕಿ ಹಾಕುತ್ತದೆ. ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂಬ ಮಹಾದಾಸೆಯನ್ನು ಹೊಂದಿರುವ ನಾಯಕ ಕುರುಡನಾಗಿದ್ದರೂ ತನ್ನ ಗುರಿಯನ್ನು ಮುಟ್ಟುತ್ತಾನೆ ಎಂಬುದನ್ನು ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ ಎಂದು ಹೇಳಿದರು.

ನಾಯಕಿ ಅಮೃತಾಗೌಡ ಮಾತನಾಡಿ, ನಾಯಕ ಬರೆಯುವ ಕವನಕ್ಕೆ ಮನಸೋಲುವ ಹಳ್ಳಿಯ ಮುಗ್ಧೆಯಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಅಮಾಯಕಿ ಹೇಗೆ ಮೋಸ ಹೋಗುತ್ತಾಳೆ ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಸೋನಂ ರೈ ಮಾತನಾಡಿ, ಚಿತ್ರದಲ್ಲಿ ನಾನೊಬ್ಬ ಕುರುಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಅನಂತ ಆರ್ಯನ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮೋಂಬತ್ತಿ ಚಿತ್ರದ ನಟ ರಾಜ್ ಕೂಡ ಈ ಚಿತ್ರದಲ್ಲಿ ಒಬ್ಬ ಸ್ಪೋಟ್ರ್ಸ್‍ಮ್ಯಾನ್ ಆಗಿ ನಟಿಸಿದ್ದಾರೆ. ತಮಸ್ ಚಿತ್ರದ ಗೆಲುವು ಮಹೇಶ್‍ರನ್ನು ಚಿತ್ರರಂಗದ ಸೋಲಿನ ಕತ್ತಲೆಯಿಂದ ಗೆಲುವಿನ ಬೆಳಕಿನತ್ತ ಕರೆದುಕೊಂಡು ಹೋಗುವಂತೆ ಮಾಡಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!