ನಾಕು ತಂತಿ

‘ನಾಕು ತಂತಿ’ ಚಿತ್ರದ ಟೀಸರ್ ನಾಕು ಜನ ಪತ್ರಕರ್ತೆಯರಿಂದ ಅನಾವರಣ

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಗೆ ಜನರ ಬೆಂಬಲ ಸಿಕ್ಕೆ ಸಿಗುತ್ತದೆ. ಅಂತಹ ಉತ್ತಮ ಕಂಟೆಂಟ್ ವುಳ್ಳ ” ನಾಕು ತಂತಿ ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸುರಂ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳ ನಿರ್ಮಾಪಕರೆಂದೆ ಹೆಸರಾಗಿರುವ ಜಯರಾಮ ದೇವಸಮುದ್ರ ನಿರ್ಮುಸಿರುವ ಹಾಗೂ ಡಿಕೆಎಸ್ ಪ್ರೊಡಕ್ಷನ್ಸ್ ನ ಯೋಗೇಶ್ ಬಸವನಗೌಡ ಹಾಗೂ ಸಾಯಿಬಿಂದು ಪ್ರೊಡಕ್ಷನ್ಸ್ ನ ನಂಬೂರು ಸಾಯಿ ಅವರ ಸಹ ನಿರ್ಮಾಣವಿರುವ ಹಾಗೂ ಪ್ರತಿಭಾವಂತ ನಟಿಯರಾದ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಇದೇ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಹಾಗೂ ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಮತ್ತು ಪ್ರೀತಮ್ ಶಿವಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ನಾಕುತಂತಿ” ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಯುವ ಪತ್ರಕರ್ತೆಯರಾದ ಮಂಗಳಾ, ದೀಪಿಕಾ, ಸರೋಜ ಹಾಗೂ ಸ್ವಾತಿ ನಾಲ್ವರು ಸೇರಿ “ನಾಕು ತಂತಿ” ಚಿತ್ರದ ಟೀಸರ್ ಅನಾವರಣ ಮಾಡಿ ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ನಾಕು ತಂತಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಉತ್ತಮ ಕಂಟೆಂಟ್ ಹಾಗೂ ಹೊಸಪ್ರತಿಭೆಗಳ ಬೆಂಬಲಕ್ಕೆ ನಮ್ಮ ಸುರಂ ಮೂವೀಸ್ ಸದಾ ಇರುತ್ತದೆ. ಅದೇ ರೀತಿ ಈ ಚಿತ್ರದ ಕಥೆ ಕೂಡ ನನ್ನ ಗಮನ ಸೆಳೆಯಿತು. ಹಾಗಾಗಿ ನಾನು ಈ ಚಿತ್ರದ ನಿರ್ಮಾಣಕ್ಕೆ ಮುಂದಾದೆ. ಜನರಿಗೂ “ನಾಕು ತಂತಿ” ಹಿಡಿಸಲಿದೆ ಎಂದು ನಿರ್ಮಾಪಕ ಜಯರಾಮ್ ದೇವಸಮುದ್ರ ತಿಳಿಸಿದರು.

ನಾನು ಮೂಲತಃ ರೈತ. ಸಿನಿಮಾ ಪ್ರೇಮಿ. ಸಿನಿಮಾ ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಈಗ ಸುರಂ ಮೂವೀಸ್ ನ ಜಯರಾಮ್ ಅವರು ಈ ಚಿತ್ರದ ನಿರ್ಮಾಣಕ್ಕೆ ಬಂದಿರುವುದು ನಮಗೆ ದೊಡ್ಡ ಬಲ ಬಂದಂತಾಗಿದೆ ಎಂದು ಸಹ ನಿರ್ಮಾಪಕ ಯೋಗೇಶ್ ಬಸವನಗೌಡ ಹೇಳಿದರು. ಮತ್ತೊಬ್ಬ ಸಹ ನಿರ್ಮಾಪಕ ನಂಬೂರು ಸಾಯಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾಕು ತಂತಿ

ನಾವು ನಾಲ್ಕು ಜನರು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವವರು. ಹಿರಿತೆರೆಯ ಸಿನಿಮಾ ಮಾಡುವುದು ನಮ್ಮ ಕನಸು. ಮೊದಲ ಪ್ರಯತ್ನದಲ್ಲೇ ಒಬ್ಬೊಬ್ಬರೆ ಎರಡು ಗಂಟೆಯ ಒಂದು ಸಿನಿಮಾ ಮಾಡುವುದು ಬೇಡ ಎಂದು ತೀರ್ಮಾನಿಸಿ, ನಾಲ್ಕು ಜನರು ಚರ್ಚಿಸಿ, ನಾಲ್ಕು ಕಥೆಗಳ “ನಾಕು ತಂತಿ” ಚಿತ್ರವನ್ನು ನಿರ್ದೇಶಿಸಿದ್ದೇವೆ. ನಾಲ್ಕು ಬೇರೆ ಬೇರೆ ಕಥೆಗಳನ್ನು ನಾಲ್ಕು ಜನರು ಪ್ರತ್ಯೇಕವಾಗಿ ನಿರ್ದೇಶನ ಮಾಡಿದ್ದೇವೆ. ಒಟ್ಟಾರೆಯಾಗಿ ಇದೊಂದು ಮಹಿಳಾ ಪ್ರಧಾನ ಚಿತ್ರ. ಪ್ರತಿ ನಿತ್ಯ ನಾವು ನೋಡುವ, ಕೇಳಿರುವ, ಕೇಳುತ್ತಿರುವ ಮಧ್ಯಮ ವರ್ಗದ ಹೆಣ್ಣುಮಕ್ಕಳ ಕಥೆ. ಈ ನಾಲ್ಕು ಕಥೆಗಳ ಪ್ರಮುಖಪಾತ್ರಗಳಲ್ಲಿ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸಮೂರ್ತಿ ನಟಿಸಿದ್ದಾರೆ. ಸು ಫ್ರಮ್ ಸೋ” ಖ್ಯಾತಿಯ ಸುಮೇಧ್ ಕೆ ಸಂಗೀತ ನೀಡಿದ್ದು, ರೊನದ ಬಕ್ಕೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ.ನಾಲ್ಕು ಜನ ನುರಿತ ಛಾಯಾಗ್ರಾಹಕರು ಛಾಯಾಗ್ರಹಣ ಮಾಡಿದ್ದಾರೆ. ನಮ್ಮ ಚಿತ್ರ ಕೂಡ ಜನರ ಮನಸ್ಸಿಗೆ ಹತ್ತಿರವಾಗುತ್ತದೆ. ಅವಕಾಶ ನೀಡಿದ ನಿರ್ಮಾಪಕರಾದ ಜಯರಾಮ್ ದೇವಸಮುದ್ರ ಹಾಗೂ ಸಹ ನಿರ್ಮಾಪಕರಾದ ಯೋಗೇಶ್ ಬಸವನಗೌಡ ಹಾಗೂ ನಂಬೂರು ಸಾಯಿ ಅವರಿಗೆ ನಮ್ಮ ಧನ್ಯವಾದ ಎಂದರು ನಿರ್ದೇಶಕರಾದ ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್, ಹಾಗೂ ಪ್ರೀತಮ್ ಶಿವಕುಮಾರ್ .

ನಾನು ಈ ಸಿನಿಮಾದಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ನನ್ನ ಹತ್ತಿರ ಫೈಟ್ ಕೂಡ ಮಾಡಿಸಿದ್ದಾರೆ ಎಂದು ನಟಿ ಸಿಂಧು ಶ್ರೀನಿವಾಸಮೂರ್ತಿ ಹೇಳಿದರು‌.

ನಟಿ ಖುಷಿ ರವಿ ಮಾತನಾಡಿ, ನಾನು ಈ ಚಿತ್ರದಲ್ಲಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾರ್ಮಲ್ ನರ್ಸ್ ಹತ್ತಿರ ಸಿನಿಮಾದವರು ಬಂದಾಗ ಆಕೆ ಅವರನ್ನು ಹೇಗೆ ನೋಡಿಕೊಳ್ಳುತ್ತಾಳೆ ಎನ್ನುವುದನ್ನು ಈ ಪಾತ್ರದ ಮೂಲಕ ಮಾಡಿದ್ದೇನೆ ಎಂದರು.

ನನ್ನದು ಐಟಿ ಉದ್ಯೋಗಿಯ ಪಾತ್ರ. ಐಟಿ ಉದ್ಯೋಗ ಸಿಕ್ಕ ಮೇಲೆ ಸಾಕಷ್ಟು ಕನಸು ಕಾಣುತ್ತೇನೆ. ಅದು ಈಡೇರುತ್ತದೆಯೊ? ಇಲ್ಲವೊ? ಎನ್ನುವುದನ್ನು ತೆರೆಯ ಮೇಲೆ ನೋಡಬೇಕು ಎಂದು ನಟಿ ರೋಷಿಣಿ ಪ್ರಕಾಶ್ ಹೇಳಿದರು.

ಸಂಗೀತಾ ಭಟ್ ಈ ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಮನೆ, ಕುಟುಂಬ ಹಾಗೂ ದಿನನಿತ್ಯದ ಜವಾಬ್ದಾರಿಗಳ ನಡುವೆ ಸಾಗುವ ಆಕೆಯ ಬದುಕು ಮತ್ತು ಆಕೆಯದೇ ಆದ ಪ್ರಪಂಚವನ್ನು ಈ ಕಥೆ ತೆರೆದಿಡುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!