ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ನಟ ಚಿಕ್ಕಣ್ಣ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಿದ್ದಾರೆ.
ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ಚಿಕ್ಕಣ್ಣ ಅವರು ಮಾತನಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಗುರುತಿಸಿದ ಚಿಕ್ಕಣ್ಣ, ತನಗೆ ಟೆನ್ಷನ್ ಆಗುತ್ತಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ನ್ಯಾಯಾಲಯ ಚಿಕ್ಕಣ್ಣ ಅವರ ಸಾಕ್ಷ್ಯ ವಿಚಾರಣೆಯನ್ನು ಮುಂದೂಡಿದೆ.
ಸಾಕ್ಷ್ಯ ನೀಡುವ ವೇಳೆ ಚಿಕ್ಕಣ್ಣ ಅವರಿಗೆ ಮೊದಲು ತಮ್ಮ ಮೊಬೈಲ್ ಸಂಖ್ಯೆ ತಿಳಿಸುವಂತೆ ಕೇಳಲಾಗಿದೆ. ದರ್ಶನ್ ಪರಿಚಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದರ್ಶನ್ ಕಳೆದ 10ರಿಂದ 15 ವರ್ಷಗಳಿಂದ ಪರಿಚಯವಿದ್ದು, ಅವರೊಂದಿಗೆ 3-4 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಹಾಜರಿದ್ದ ದರ್ಶನ್ ಅವರನ್ನು ಗುರುತಿಸಿದ ಚಿಕ್ಕಣ್ಣ, ಪವಿತ್ರಾ ಗೌಡ ಕಳೆದ 2-3 ವರ್ಷಗಳಿಂದ ಪರಿಚಯವಿದ್ದಾರೆ ಎಂದು ಹೇಳಿದ್ದಾರೆ. 14ನೇ ಆರೋಪಿ ಪ್ರದೂಷ್ ಪರಿಚಯವಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಸ್ಟೋನಿ ಬ್ರೂಕ್ ಹೋಟೆಲ್‌ಗೆ ತೆರಳಿದ್ದ ವಿಚಾರವಾಗಿ ನ್ಯಾಯಾಲಯ ಪ್ರಶ್ನಿಸಿದಾಗ, ತಾವು ಊಟಕ್ಕೆ ಹೋಗಿದ್ದು ನಿಜ. ಆದರೆ ಯಾವ ದಿನ ಹೋಗಿದ್ದೆ ಎಂಬುದು ನೆನಪಿಲ್ಲ ಎಂದು ಉತ್ತರಿಸಿದ್ದಾರೆ. ಮಧ್ಯಾಹ್ನ ಸುಮಾರು 1.30ರಿಂದ 3 ಗಂಟೆಯೊಳಗೆ ಹೋಟೆಲ್‌ಗೆ ತೆರಳಿದ್ದೆ. ಹೋಟೆಲ್‌ಗೆ ಒಬ್ಬರೇ ಹೋಗಿದ್ದಾಗಿ ಹೇಳಿದ ಚಿಕ್ಕಣ್ಣ, ಅಲ್ಲಿ ದರ್ಶನ್, ಪ್ರದೂಷ್ ಸೇರಿದಂತೆ ಇನ್ನೂ 3-4 ಇದ್ದರು. ಆದರೆ ಟೆನ್ಷನ್‌ನಿಂದಾಗಿ ಉಳಿದವರ ಹೆಸರುಗಳು ನೆನಪಿಗೆ ಬರುತ್ತಿಲ್ಲ. ಹೋಟೆಲ್‌ನಲ್ಲಿ ಸಿನಿಮಾ ವಿಚಾರವಾಗಿ ಮಾತನಾಡಿದ್ದೆವು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಘಟನೆ ನಡೆದಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.
ನಟ ಯಶಸ್ ಸೂರ್ಯ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ವೇಳೆ ದರ್ಶನ್ ಅವರೊಂದಿಗಿನ ತಮ್ಮ ದೀರ್ಘಕಾಲದ ಪರಿಚಯದ ಬಗ್ಗೆ ವಿವರಿಸಿದ್ದಾರೆ. 2010ರಲ್ಲಿ ಬಿಡುಗಡೆಯಾದ ‘ಚಿಂಗಾರಿ’ ಸಿನಿಮಾದಿಂದ ‘ಕುರುಕ್ಷೇತ್ರ’, ‘ಚಕ್ರವರ್ತಿ’, ‘ಒಡೆಯ’, ‘ಗರಡಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ದರ್ಶನ್ ಅವರೊಂದಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.
ಘಟನೆ ನಡೆದ ದಿನ ಸ್ಟೋನಿಬ್ರೂಕ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾಗಿ ಯಶಸ್ ಸೂರ್ಯ ಹೇಳಿದ್ದಾರೆ. ಅಲ್ಲಿ ಸಿನಿಮಾ ವಿಚಾರಗಳ ಕುರಿತು ಮಾತ್ರ ಚರ್ಚೆ ನಡೆದಿತ್ತು. ಊಟ ಮುಗಿದ ತಕ್ಷಣ ತಾವು ರೆಸ್ಟೋರೆಂಟ್‌ನಿಂದ ಹೊರಟು ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು,ಕಾನೂನು ಪ್ರಕ್ರಿಯೆಗಳ ಮೇಲೆ ಗಮನ ನೆಟ್ಟಿದೆ.
—-





Be the first to comment