ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ತಾವೇ ಸಂಯೋಜಿಸಿದ ಸಾರ್ವಕಾಲಿಕ ಹಿಟ್ ಹಾಡುಗಳ ಹಕ್ಕುಸ್ವಾಮ್ಯ ವಿಚಾರವಾಗಿ ಅವರಿಗೆ ಹಿನ್ನಡೆಯಾಗಿದೆ.
‘ಅಗತ್ಯಾ’ ಚಿತ್ರಕ್ಕಾಗಿ ಇಳಯರಾಜ ಅವರ ‘ಎನ್ ಇನಿಯ ಪೊನ್ ನಿಲವೇ’ ಹಾಡನ್ನು ಮರುಬಳಕೆ ಮಾಡಲು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ಇಳಯರಾಜ ಅವರಿಂದ ಪರವಾನಗಿ ಪಡೆಯಲಾಗಿತ್ತು. ಆದರೆ ಇದಕ್ಕೆ ಸರಿಗಮ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿ ಚಿತ್ರದ ಮೂಲ ನಿರ್ಮಾಪಕರಿಂದ ತಮಗೆ ಪೂರ್ಣ ಹಕ್ಕು ಸಿಕ್ಕಿದೆ ಎಂದು ಕೋರ್ಟ್ ಮೆಟ್ಟಿಲೇರಿತು.
ಈ ಪ್ರಕರಣವನ್ನು ಆಲಿಸಿದ ದೆಹಲಿ ಹೈಕೋರ್ಟ್ ಪ್ರಮುಖ ಆದೇಶ ನೀಡಿ ಇಳಯರಾಜ ಅವರಿಗೆ ಕೇವಲ ರಾಗ, ಮೆಲೋಡಿ ಸಂಯೋಜನೆಯ ಹಕ್ಕು ಮಾತ್ರ ಇರುತ್ತದೆ. ಆದರೆ ಇಡೀ ಧ್ವನಿಮುದ್ರಣ ಮತ್ತು ಸಾಹಿತ್ಯದ ಮೇಲೆ ಪೂರ್ಣ ಹಕ್ಕಿರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ದೆಹಲಿ ಹೈಕೋರ್ಟ್ ನೀಡಿದ ಈ ಆದೇಶವನ್ನು ಪ್ರಶ್ನಿಸಿ ಇಳಯರಾಜ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಆದರೆ ವಿಭಾಗೀಯ ಪೀಠ ಅವರ ಅರ್ಜಿಯನ್ನು ವಜಾಗೊಳಿಸಿತು. ಬಳಿಕ ಇಳಯರಾಜಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಈ ಅರ್ಜಿಯನ್ನು ವಜಾ ಮಾಡಿ ಹೈಕೋರ್ಟ್ ಆದೇಶವೇ ಅಂತಿಮ ಎಂದು ಸ್ಪಷ್ಟಪಡಿಸಿದೆ.
—–





Be the first to comment