ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಖ್ಯಾತ ನೃತ್ಯ ನಿರ್ದೇಶಕ, ನಟ ಪ್ರಭುದೇವ 24 ವರ್ಷಗಳ ನಂತರ ಮತ್ತೆ ಒಂದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಸಜ್ಜಾಗಿದ್ದಾರೆ.
ಓಟಿಟಿ ಸಂಸ್ಥೆ ನೆಟ್ಫ್ಲಿಕ್ಸ್ ಈ ಮಲ್ಟಿಸ್ಟಾರರ್ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ನಿರ್ಮಿಸುತ್ತಿದ್ದು, ಕಾಲಿವುಡ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಸಿನಿಮಾ ಯಾವುದೇ ಥಿಯೇಟರ್ ಬಿಡುಗಡೆ ಇಲ್ಲದೆ, ನೇರವಾಗಿ ನೆಟ್ಫ್ಲಿಕ್ಸ್ ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಯಾದ ಪುಲಿಯಾಟ್ಟಂ ನೃತ್ಯ ಹಿನ್ನೆಲೆಯನ್ನು ಒಳಗೊಂಡ ಕಾದಂಬರಿಯೊಂದರ ಆಧಾರದ ಮೇಲೆ ಕಾರ್ತಿಕ್ ಸುಬ್ಬರಾಜ್ ಈ ಗ್ರಾಮೀಣ ಆ್ಯಕ್ಷನ್-ಡ್ರಾಮಾ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.
ಈ ಚಿತ್ರದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಅವರೊಂದಿಗೆ ತಮಿಳಿನ ಮತ್ತೊಬ್ಬ ಜನಪ್ರಿಯ ಯುವ ನಟ ಅಥರ್ವ ಮುರಳಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ಚಿತ್ರದ ಮೊದಲ ಹಂತದ ಶೂಟಿಂಗ್ ನ್ನು ರಹಸ್ಯವಾಗಿ ಈಗಾಗಲೇ ಮುಗಿಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಚಿತ್ರದ ಮುಂದಿನ ಹಂತದ ಚಿತ್ರೀಕರಣ ಅಕ್ಟೋಬರ್ ಮಧ್ಯಭಾಗದಿಂದ ಆರಂಭವಾಗಲಿದೆ.
ಈ ಸಿನಿಮಾವನ್ನು ತಮಿಳು ಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
2002 ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ H2O ಸಿನಿಮಾದಲ್ಲಿ ಉಪೇಂದ್ರ ಮತ್ತು ಪ್ರಭುದೇವ ಒಟ್ಟಿಗೆ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅದಾದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.
—–





Be the first to comment