ಹಳ್ಳಿ ಸೊಗಡನ್ನು ಹೊತ್ತು ಚಂದನವನದಲ್ಲಿ ಅನೇಕ ಚಿತ್ರಗಳು ತೆರೆಗೆ ಬಂದಿದ್ದು ಸಕ್ಸಸ್ ಕೂಡ ಆಗಿವೆ ಈಗ ಅದೇ ಸಾಲಿಗೆ ಸೇರುವ ಚಿತ್ರ ಪಾರವ್ವನ ಕನಸು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರೊಂದಿಗೆ ಸಿ.ಮಲ್ಲಿಕಾರ್ಜುನ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು ಮೊನ್ನೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ್ರು, ಕಾರ್ಯದರ್ಶಿ ಎನ್.ಎಂ.ಸುರೇಶ್ ಹಾಜರಿದ್ದು ಹಾಡುಗಳ ಸಿಡಿ ಬಿಡುಗಡೆ ನೆರವೇರಿಸಿದರು. ನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಹಳ್ಳಿಯಿಂದ ಡೆಲ್ಲಿಗೆ ಹಲವು ಕನಸುಗಳನ್ನು ಹೊತ್ತು ಬರುವಂತೆ ಈ ಚಿತ್ರದ ನಾಯಕಿ ಪಾರವ್ವ ಕೂಡ ಹಳ್ಳಿಯಲ್ಲಿ ಕೂಲಿ ಕೆಲಸ ಬಿಟ್ಟು ಸಿಟಿಯಲ್ಲಿ ಕೆಲಸ ಹುಡುಕಿಕೊಂಡು ಬರುತ್ತಾಳೆ, ಇಲ್ಲಿಗೆ ಬಂದ ನಂತರ ಅವರು ಕಂಡ ಕನಸಿನಲ್ಲಿ ಹಳ್ಳಿಯಲ್ಲಿದ್ದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿರ್ಮಿಸುತ್ತಾಳೆಯೋ? ತನ್ನ ಮಕ್ಕಳಿಗೆ ಮದುವೆ ಮಾಡುತ್ತಾಳೆಯೋ? ಎಂಬುದೇ ಈ ಚಿತ್ರದ ಕಥಾಹಂದರ. ಈ ಚಿತ್ರದ ಕಥೆ ಆಕಸ್ಮಿಕವಾಗಿಯೇ ಹುಟ್ಟಿದೆ ಎಂದು ಹೇಳಿದರು.
ನಿರ್ಮಾಪಕ, ನಾಯಕ ನಟ ಸುರೇಶ್ಕುಮಾರ್ ಮಾತನಾಡಿ, ನಿಜ ಜೀವನದಲ್ಲಿ ಬಿಲ್ಡರ್ ಆಗಿರುವ ನನಗೆ ನಿರ್ದೇಶಕ ಮಲ್ಲಿಕಾರ್ಜುನ್ ಹೇಳಿದ ಕಥೆ ತುಂಬಾ ಹಿಡಿಸಿತು, ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವಂತೆ ಸಿನಿಮಾ ನಿರ್ಮಿಸಿ ನೋಡು ಎಂಬ ಮಾತನ್ನು ಹೇಳಬೇಕು.
ಏಕೆಂದರೆ ನಾಲ್ಕು ಅಪಾರ್ಟ್ಮೆಂಟ್ ಕಟ್ಟುವುದು, ಒಂದು ಸಿನಿಮಾ ನಿರ್ಮಿಸುವುದು ಎರಡೂ ಒಂದೇ. ತಾಯಿಯ ಕನಸನ್ನು ನನಸಾಗಿಸಲು ಹೊರಡುವ ಮಗನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.ನಾಯಕಿ ರಶೀತಾ ಮಾತನಾಡಿ, ಹಳ್ಳಿ ಸೊಡಗಿನ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸು ನನಗೆ ಮೊದಲಿನಿಂದಲೂ ಇತ್ತು ಅದು ಪಾರವ್ವನ ಕನಸು ಚಿತ್ರದ ಮೂಲಕ ನನಸಾಗಿದೆ. ಈ ಚಿತ್ರದ ಹಾಡುಗಳನ್ನು ಮಂಗಳೂರು, ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದರು.
ಚಿನ್ನೇಗೌಡ್ರು ಮಾತನಾಡಿ, ಈ ಸಿನಿಮಾದ ಮುಹೂರ್ತಕ್ಕೆ ಬಂದಿದ್ದೆ. ನಂತರ ಪೋಸ್ಟರ್ ರಿಲೀಸ್ ಮಾಡಿದ್ದೆ. ಈಗ ಆಡಿಯೋ ಕೂಡ ರಿಲೀಸ್ ಮಾಡುತ್ತಿದ್ದೇನೆ ಎಂದು ಹೇಳಿದರು. ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಸದ್ಯದಲ್ಲೇ ತೆರೆ ಮೇಲೆ ಬರಲಿದೆ.
ಪಾರವ್ವನಾಗಿ ಹಿರಿಯ ನಟಿ ಸುಂದರಶ್ರೀ ಅಭಿನಯಿಸಿದ್ದು ಈ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸುವಂತಾಗಲಿ ಎಂಬುದೇ ಸಿನಿಸುದ್ದಿಯ ಆಶಯ.
Be the first to comment