ನಿರಂಜನ್ ಸುಧೀಂದ್ರ ನಟನೆಯ ‘ಸ್ಪಾರ್ಕ್’ ಚಿತ್ರದ ‘ಮಧುರ ಮುಗುಳುನಗೆ..’ ಹಾಡು ಬಿಡುಗಡೆಯಾಗಿದೆ.
ನಿರಂಜನ್ ಅವರ ಅಜ್ಜಿ (ಉಪೇಂದ್ರ ಅವರ ತಾಯಿ) ಅನಸೂಯಮ್ಮ ಈ ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಪ್ರೇಮಗೀತೆಯನ್ನು ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅವರೇ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ.
ಹಾಡಿನ ಬಿಡುಗಡೆ ಬಳಿಕ ಮಾತನಾಡಿದ ಪ್ರಿಯಾಂಕಾ , ” ಈ ಹಾಡು ತುಂಬಾನೇ ಚೆನ್ನಾಗಿದೆ. ಈ ಹಿಂದೆ ಇದೇ ಚಿತ್ರದ “ಶಕಲಕ” ಹಾಡು ತೆರೆಕಂಡಾಗ ರೀಲ್ಸ್ ಮಾಡುವ ಬಗ್ಗೆ ನಾನು ಮತ್ತು ಉಪ್ಪಿ ಮಾತನಾಡಿಕೊಂಡಿದ್ದೆವು. ಆದರೆ ನಮಗೆ ಸ್ಟೆಪ್ಸ್ ಹಾಕಲು ಅದಕ್ಕಿಂತ ಈ ಹಾಡು ಸುಲಭವಾದೀತು ಅಂತ ಅನಿಸಿದೆ. ಖಂಡಿತವಾಗಿ ರೀಲ್ಸ್ ಮಾಡುತ್ತೇವೆ. ನಿರಂಜನ್ ಜೊತೆ ನಾನು ಸಿನಿಮಾದಲ್ಲಿಯೂ ಕೆಲಸ ಮಾಡಿದ್ದೇನೆ” ಎಂದರು.

ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ಡಾರ್ಲಿಂಗ್ ಕೃಷ್ಣ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.
ನಿರಂಜನ್ ಜೋಡಿಯಾಗಿ ರಚನಾ ಇಂದರ್ ನಟಿಸಿದ್ದಾರೆ. ಖಳ ಪಾತ್ರವನ್ನು ಲವ್ಲಿಸ್ಟಾರ್ ಪ್ರೇಮ್ ನಿರ್ವಹಿಸಿದ್ದಾರೆ. ಡಿ. ಮಹಾಂತೇಶ್ ಹಂದ್ರಾಳ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕ ನಿರಂಜನ್ ಸುಧೀಂದ್ರ, ‘ಈ ಚಿತ್ರದಲ್ಲಿ ಮಾಧ್ಯಮದ ಪ್ರತಿನಿಧಿಯಾಗಿ ನಟಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ನಿರ್ದೇಶಕ ಮಹಾಂತೇಶ್, ಹಾಡಿನ ಗುಣಮಟ್ಟದ ಹಾಗೆಯೇ ಚಿತ್ರವೂ ಮೂಡಿ ಬಂದಿದೆ. ಅದಕ್ಕೆ ಕಾರಣ ನಿರ್ಮಾಪಕರು. ಗುರುಗಳಾದ ದಯಾಳ್ ಅವರಿಂದ ಸಿನಿಮಾ ಮೇಕಿಂಗ್ ನಲ್ಲಿ ಹಣ ಪೋಲು ಮಾಡದಿರುವುದನ್ನು ಮತ್ತು ಡಾರ್ಲಿಂಗ್ ಕೃಷ್ಣ ಅವರಿಂದ ಭಾವನೆಗಳನ್ನು ಪರದೆಯ ಮೇಲೆ ತೋರಿಸುವುದನ್ನು ಮಾದರಿಯಾಗಿ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

ಸ್ಪಾರ್ಕ್ ನಿರ್ಮಾಣದಲ್ಲಿ ಭಾಗಿಯಾಗಿರುವ ಅವಿನಾಶ್ ವಸಿಷ್ಠ, ‘ನಾನು ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಎರಡು ನಿಮಿಷ ಕೂಡ ಗಮನ ಚಿತ್ರದಿಂದ ಹೊರಗೆ ಬಂದಿಲ್ಲ. ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಮೆಚ್ಚುವಂಥ ಚಿತ್ರ’ ಎಂದು ತಿಳಿಸಿದ್ದಾರೆ.
‘ಸ್ಪಾರ್ಕ್’ ಚಿತ್ರ ಸೆಪ್ಟೆಂಬರ್ 25ರಂದು ತೆರೆ ಕಾಣಲಿದೆ.






Be the first to comment