ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಒಟ್ಟು ಪ್ರಚಾರ ವೆಚ್ಚ ₹375 ಕೋಟಿಗೆ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸೋನಿ ಪಿಕ್ಚರ್ಸ್ ಕೈಜೋಡಿಸಿ ಹಾಲಿವುಡ್ ಶೈಲಿಯ ಅಂತಾರಾಷ್ಟ್ರೀಯ ಮಾರ್ಕೆಟಿಂಗ್ ತಂತ್ರವನ್ನು ಅನುಸರಿಸಲು ಮುಂದಾಗಿದೆ. ವಿದೇಶಿ ಪ್ರಚಾರಕ್ಕಾಗಿ ಸೋನಿ ಪಿಕ್ಚರ್ಸ್ ₹235 ಕೋಟಿ ವೆಚ್ಚ ಮಾಡಲಿದ್ದು, ನಿರ್ಮಾಪಕರು ಹೆಚ್ಚುವರಿಯಾಗಿ ₹140 ಕೋಟಿ ಹೂಡಿಕೆ ಮಾಡುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಒಂದು ಸಿನಿಮಾದ ಪ್ರಚಾರಕ್ಕಾಗಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತ ಮೀಸಲಿಡುತ್ತಿರುವುದು ಎನ್ನಲಾಗುತ್ತಿದೆ. ಚಿತ್ರವನ್ನು ದೇಶೀಯ ಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸುವ ಗುರಿಯೊಂದಿಗೆ ಚಿತ್ರತಂಡ ತಂತ್ರ ರೂಪಿಸಿದೆ.
ಜುಲೈ 24ರಂದು ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ ಜಾಗತಿಕ ಬಿಡುಗಡೆ ಕಾರ್ಯತಂತ್ರದ ಹಿನ್ನೆಲೆಯಲ್ಲಿ ಟ್ರೇಲರ್ ಬಿಡುಗಡೆ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿಲ್ಲ.
ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಮತ್ತು ಹಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ. ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.





Be the first to comment