ಶ್ರೀಮುರಳಿ ಅಭಿನಯ ಬಹುನಿರೀಕ್ಷಿತ ಪರಾಕ್ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.
‘ಪರಾಕ್’ ಚಿತ್ರ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಚಿತ್ರತಂಡದ ಕೆಲ ಸದಸ್ಯರು ಮಾಧ್ಯಮಗಳ ಕುರಿತು ನಕಾರಾತ್ಮಕವಾಗಿ ಮಾತನಾಡಿದ್ದು ಈ ವಿಚಾರವನ್ನು ಸುದ್ದಿಗಾರರೊಬ್ಬರು ಟೀಸರ್ ಬಿಡುಗಡೆ ಕಾರ್ಯಕ್ರಮದ ವೇಳೆ ಪ್ರಶ್ನಿಸಿದರು. ಈ ವೇಳೆ ಶ್ರೀಮುರಳಿ ತಮ್ಮ ತಂಡದ ಸದಸ್ಯರಿಂದಾದ ತಪ್ಪಿಗೆ ನಾನು ಕ್ಷಮೆ ಕೋರುವುದಾಗಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
“ಮಾಧ್ಯಮಗಳು ನಮ್ಮನ್ನು ಸದಾ ಬೆಂಬಲಿಸಿವೆ. ನನ್ನ ಸಿನಿಮಾ ಬದುಕಿನಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಇತ್ತೀಚಿನ ಬೆಳವಣಿಗೆಗಳಿಂದ ಯಾರಿಗಾದರೂ ಬೇಸರವಾಗಿದ್ದರೆ ನಾನು ವೈಯಕ್ತಿಕವಾಗಿ ಕ್ಷಮೆ ಕೇಳುತ್ತೇನೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು. ಮುಂದೆಯೂ ಇದೇ ಪ್ರೀತಿ ಮತ್ತು ಸಹಕಾರ ಮುಂದುವರಿಯಲಿ ಎಂಬುದು ನನ್ನ ಆಶಯ” ಎಂದು ಶ್ರೀಮುರಳಿ ಹೇಳಿದರು.
ಶ್ರೀಮುರಳಿ ಅವರ ಮಾತಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
‘ಪರಾಕ್’ ಚಿತ್ರದ ಕುರಿತು ಮಾತನಾಡಿದ ಶ್ರೀಮುರಳಿ, ‘ಇದು ತಮ್ಮ ವೃತ್ತಿಜೀವನದ ಮಹತ್ವದ ಚಿತ್ರಗಳಲ್ಲಿ ಒಂದಾಗಿದ್ದು, ಚಿತ್ರಕ್ಕಾಗಿ ಇಡೀ ತಂಡ ಸಾಕಷ್ಟು ಶ್ರಮಪಟ್ಟಿದೆ. ಪ್ರೇಕ್ಷಕರು ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
‘ಪರಾಕ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
—–





Be the first to comment