ಖ್ಯಾತ ಗಾಯಕಿ ಎಸ್. ಜಾನಕಿ ನಿಧನ

ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದ ದಕ್ಷಿಣ ಭಾರತದ  ಖ್ಯಾತ ಗಾಯಕಿ ಎಸ್. ಜಾನಕಿ ಅವರು  ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ತಮ್ಮ 88ನೇ ವಯಸ್ಸಿನಲ್ಲಿ ಜಾನಕಿ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಅವರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಆರು ದಶಕಗಳ ಕಾಲ ಹಾಡಿ ಸಂಗೀತ ಲೋಕವನ್ನು ಆಳಿದ್ದರು.

1938ರ ಏಪ್ರಿಲ್ 23 ರಂದು ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ, ಭಾರತೀಯ ಸಂಗೀತ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬೆಂಗಾಲಿ, ಕೊಂಕಣಿ ಸೇರಿದಂತೆ  ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಿಗೂ ಧ್ವನಿಯಾಗುವ ಮೂಲಕ ಭಾರತದ ಅತ್ಯಂತ ಬಹುಮುಖ ಪ್ರತಿಭೆಯ  ಗಾಯಕಿ ಎನಿಸಿಕೊಂಡಿದ್ದರು.

ಆಂಧ್ರ ಮೂಲದ ಜಾನಕಿ  ವೃತ್ತಿಜೀವನದಲ್ಲಿ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದು ಕನ್ನಡ ಭಾಷೆಯಲ್ಲಿ. ಹೆಚ್ಚೂಕಡಿಮೆ ಡಾ.ರಾಜ್‌ಕುಮಾರ್‌ ಅವರ ಎಲ್ಲಾ ಚಿತ್ರಗಳಲ್ಲೂ ಎಸ್‌.ಜಾನಕಿ ಅವರ ದನಿ ಇರುತ್ತಿತ್ತು. ಎಸ್‌.ಜಾನಕಿ ಅವರು ಎಸ್.ಪಿ. ಬಾಲಸುಬ್ರಹ್ಮಣ್ಯಂ,  ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದರು.

1957 ರಲ್ಲಿ ತಮಿಳಿನ ‘ವಿಧಿಹಿನ್ ವಿಲಾಯಟ್ಟು’ ಚಿತ್ರದ ಮೂಲಕ 19ನೇ ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯಕಿಯಾಗಿ ಜಾನಕಿ  ಚಿತ್ರರಂಗ ಪ್ರವೇಶಿಸಿದರು.  ಅವರು ವೃತ್ತಿಜೀವನ ಆರಂಭಿಸಿದ ಮೊದಲ ವರ್ಷದಲ್ಲೇ 6 ವಿಭಿನ್ನ ಭಾಷೆಗಳಲ್ಲಿ ಹಾಡಿದ್ದರು. 2016 ರಲ್ಲಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವವರೆಗೆ ಸತತ 60 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.  ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2018 ರ ತಮಿಳಿನ ‘ಪನ್ನಾಡಿ’ ಚಿತ್ರಕ್ಕಾಗಿ ಮತ್ತೊಮ್ಮೆ ಹಾಡಿದ್ದರು.

ಎಸ್. ಜಾನಕಿ ಅವರ ಅಪಾರ ಪ್ರತಿಭೆಗೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳು, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’, ರ್ನಾಟಕ ಸರ್ಕಾರದ ಅತ್ಯುನ್ನತ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.

ಎಸ್. ಜಾನಕಿ ಅವರ  ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾಗೂ ಸಂಗೀತ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!