ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್ ಬಿಡುಗಡೆಯಾಗಿದ್ದು, ಕನ್ನಡ, ಇಂಗ್ಲಿಷ್, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸೇರಿ ಒಟ್ಟು ಆರು ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಈ ಟೀಸರ್ನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಅವರ ಪಾತ್ರಗಳನ್ನು ಪರಿಚಯಿಸಲಾಗಿದೆ.
ಸುಮಾರು 1 ನಿಮಿಷ 41 ಸೆಕೆಂಡುಗಳ ಈ ಟೀಸರ್ನಲ್ಲಿ ಪ್ರೇಕ್ಷಕರ ಗಮನ ಸೆಳೆಯುವುದು ಯಶ್ ಅವರ “ಲೇಡೀಸ್ ಅಂಡ್ ಲೇಡೀಸ್… ಒಬ್ಬೊಬ್ಬರೇ ಬರ್ತೀರಾ? ಒಟ್ಟಿಗೆ ಬರ್ತೀರಾ?” ಎಂಬ ಡೈಲಾಗ್. ಟೀಸರ್ನ ಪ್ರಮುಖ ಹೈಲೈಟ್ ಕೂಡ ಇದೇ ಆಗಿದೆ. ಆದರೆ, ಈ ಒಂದೇ ಡೈಲಾಗ್ಗಾಗಿ ಪ್ರತ್ಯೇಕವಾಗಿ ಆರು ಭಾಷೆಗಳಲ್ಲಿ ಟೀಸರ್ ಬಿಡುಗಡೆ ಮಾಡಿರುವುದು ಸ್ವಲ್ಪ ಆಶ್ಚರ್ಯವನ್ನೂ ಮೂಡಿಸಿದೆ.
ಟೀಸರ್ನ ಆರಂಭದಲ್ಲಿ ಕಾಣಿಸುವ ವಾರ್ನಿಂಗ್ ಕಾರ್ಡ್ ಹಾಗೂ ಅದರ ಪ್ರಸ್ತುತಿ ಮೊದಲ ನೋಟಕ್ಕೆ ಉಪೇಂದ್ರ ಅವರ ಸಿನಿಮಾಗಳ ಶೈಲಿಯನ್ನು ನೆನಪಿಸುತ್ತದೆ. ಆದರೆ, ಆ ವಾರ್ನಿಂಗ್ಗೆ ಸಂಬಂಧಿಸಿದಂತೆ ಟೀಸರ್ನಲ್ಲಿ ಕೇವಲ ಒಂದು ದೃಶ್ಯ ಮತ್ತು ಒಂದು ಪದ ಮಾತ್ರ ಹೊಂದಿಕೆಯಾಗುತ್ತವೆ. ಉಳಿದ ಕೆಲ ದೃಶ್ಯಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಟೀಸರ್ನ ಮುಖ್ಯ ಉದ್ದೇಶ ನಾಯಕಿಯರ ಪಾತ್ರಗಳ ಲುಕ್ಗಳನ್ನು ಪರಿಚಯಿಸುವುದಾಗಿರುವುದರಿಂದ, ಇದು ಚಿತ್ರದ ಕಥೆಯ ಬಗ್ಗೆ ಯಾವುದೇ ಮಹತ್ವದ ಸುಳಿವನ್ನು ನೀಡುವುದಿಲ್ಲ.
ಮೊದಲ ಟೀಸರ್ ಬಿಡುಗಡೆಯಾದ ವೇಳೆ ಹಲವು ರೀತಿಯ ಚರ್ಚೆಗಳು ಮತ್ತು ವಿವಾದಗಳು ಕೇಳಿಬಂದಿದ್ದವು. ಆದರೆ ಈ ಬಾರಿ ಚಿತ್ರತಂಡ ಯಾವುದೇ ವಿವಾದಾತ್ಮಕ ಅಂಶಗಳನ್ನು ಸೇರಿಸದೆ ಸುರಕ್ಷಿತ ಪ್ರಚಾರ ತಂತ್ರವನ್ನು ಅನುಸರಿಸಿದಂತಿದೆ. ಸಿನಿಮಾ ಬಿಡುಗಡೆ ಸಮೀಪಿಸುತ್ತಿರುವ ಈ ಹಂತದಲ್ಲಿ ಅನಗತ್ಯ ವಿವಾದಗಳಿಂದ ದೂರ ಉಳಿಯುವ ನಿರ್ಧಾರವನ್ನು ತಂಡ ತೆಗೆದುಕೊಂಡಂತಿದೆ.
ಆದರೆ ಚಿತ್ರದ ಟೈಟಲ್ ಹಾಗೂ ನಾಯಕಿಯರ ಹೆಸರುಗಳನ್ನು ಪ್ರದರ್ಶಿಸಿರುವ ಟೆಕ್ಸ್ಟ್ ಡಿಸೈನ್ ಮಾತ್ರ ಕೊಂಚ ಗೊಂದಲ ಮೂಡಿಸುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ ಟೈಟಲ್ ಶೈಲಿಯ ಜೊತೆಗೆ ಚಿತ್ರತಂಡ ಈ ಹಿಂದೆ ಮತ್ತೊಂದು ಫಾಂಟ್ ಅನ್ನು ಬಳಸಿತ್ತು. ಅದೇ ಟೆಕ್ಸ್ಟ್ ಶೈಲಿಯನ್ನು ಈ ಬಾರಿ ನಾಯಕಿಯರ ಹೆಸರುಗಳನ್ನು ಬರೆಯಲು ಬಳಸಲಾಗಿದೆ. ಹೀಗೆ ಮಾಡುವ ಬದಲು, ಇಡೀ ಟೀಸರ್ನಲ್ಲಿ ಒಂದೇ ರೀತಿಯ ಟೈಪೋಗ್ರಫಿಯನ್ನು ಮುಂದುವರಿಸಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು.
ತಾಂತ್ರಿಕವಾಗಿ ನೋಡಿದರೆ ಹಿನ್ನೆಲೆಯಲ್ಲಿರುವ ಇಂಗ್ಲಿಷ್ ವಾಯ್ಸ್ಓವರ್ ಉತ್ತಮ ಇಂಪ್ಯಾಕ್ಟ್ ನೀಡುತ್ತದೆ. ಯಶ್ ಅವರ ಇಂಗ್ಲಿಷ್ ಹಾಗೂ ಕನ್ನಡ ಡೈಲಾಗ್ಗಳು ಕೂಡ ಸಖತ್ ಮಾಸ್ ಫೀಲ್ ನೀಡುತ್ತವೆ. ಹಿಂದಿ ಡಬ್ಬಿಂಗ್ನಲ್ಲೂ ಅವರ ಧ್ವನಿ ಚೆನ್ನಾಗಿ ಹೊಂದಿಕೊಂಡಿದೆ. ತಮಿಳು ಮತ್ತು ತೆಲುಗು ಆವೃತ್ತಿಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ಗಳ ಧ್ವನಿಯೂ ಪಾತ್ರಕ್ಕೆ ನ್ಯಾಯ ಒದಗಿಸುತ್ತದೆ.
ಆದರೆ ಮಲಯಾಳಂ ಆವೃತ್ತಿಯಲ್ಲಿ ಮಾತ್ರ ಯಶ್ ಅವರ ಪಾತ್ರಕ್ಕೆ ನೀಡಿರುವ ಧ್ವನಿ ಅಷ್ಟಾಗಿ ಮ್ಯಾಚ್ ಆಗುವುದಿಲ್ಲ. ಉಳಿದ ಐದು ಭಾಷೆಗಳೊಂದಿಗೆ ಹೋಲಿಸಿದರೆ ಮಲಯಾಳಂ ಡಬ್ಬಿಂಗ್ ಸ್ವಲ್ಪ ನಿರಾಸೆ ಮೂಡಿಸುತ್ತದೆ.
ಒಟ್ಟಾರೆಯಾಗಿ, ‘ಲೇಡೀಸ್ ಅಂಡ್ ಲೇಡೀಸ್’ ಟೀಸರ್ ಕಥೆಯನ್ನು ಬಹಿರಂಗಪಡಿಸದೇ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಪಾತ್ರಗಳ ಪರಿಚಯಕ್ಕಿಂತ ಹೆಚ್ಚಾಗಿ ಯಶ್ ಅವರ ಒಂದೇ ಡೈಲಾಗ್ ಹಾಗೂ ಸ್ಟೈಲಿಷ್ ಪ್ರೆಸೆಂಟೇಷನ್ಗೆ ಇಲ್ಲಿ ಹೆಚ್ಚು ಒತ್ತು ನೀಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.





Be the first to comment