ಕೊರಗಜ್ಜ

‘ಕೊರಗಜ್ಜ’ ನಿರ್ದೇಶಕರಿಗೆ ಫ್ಲಾಟ್ ಗಿಫ್ಟ್ ನೀಡಿದ ನಿರ್ಮಾಪಕ!

ಕಳೆದ ಜನವರಿ ತಿಂಗಳಲ್ಲಿ ಬಿಡುಗಡೆಗೆ ಸರ್ವ ಸನ್ನದ್ದವಾಗಿ, ಝೀ ಮ್ಯೂಸಿಕ್ ಬ್ಯಾನರ್ ಅಡಿ ಭರ್ಜರಿ ಆಡಿಯೋ ಲಾಂಚ್ ಕೂಡಾ ಮಾಡಿದ್ದ, ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರವನ್ನು ,ಕೊನೇ ಗಳಿಗೆಯಲ್ಲಿ ಧಿಡೀರ್ ಎಂದು ಚಿತ್ರವು 3D ಯಾಗಿ ಮಾರ್ಪಡಿಸುವ ದೊಡ್ಡ ಸುದ್ದಿ ಕೊಟ್ಟು ಬಿಡುಗಡೆಯನ್ನು ಮುಂದೂಡಿತು.

ಈಗ ಕೊಚ್ಚಿ ಮತ್ತು ಚೆನ್ನೈ ನಲ್ಲಿ ಚಿತ್ರದ 3ಡಿ ಕೆಲಸ ಭರದಿಂದ ಸಾಗುತ್ತಿದೆ. ಚಿತ್ರವು ತಾಂತ್ರಿಕವಾಗಿ ಯಾವುದೇ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಚಿತ್ರ ಮೂಡಿ ಬರುತ್ತಿದೆ ಎನ್ನುವ ವಿಷಯವನ್ನು ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದರು. ಇದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಗಳು ಆಸಕ್ತಿ ತೋರಿಸುತ್ತಿರುವುದರಿಂದ ಖುಷಿ ಪಟ್ಟಿರುವ ನಿರ್ಮಾಪಕ ತ್ರಿವಿಕ್ರಮ ಸಪಲ್ಯರವರು, ಕಳೆದ ಮೂರು ವರ್ಷಗಳಿಂದ ಚಿತ್ರದ ಈ ಮಟ್ಟದ ಬೆಳವಣಿಗೆಗೆ ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಗೆ “ಶೋಭ ಡೆವಲಪರ್ಸ್” ನ ಮೂರು ಬೆಡ್ ರೂಮಿನ,ಮಾರ್ಕೆಟ್ ವೇಲ್ಯು ಸುಮಾರು ರೂ1.75 ಕೋಟಿ ಬೆಲೆಬಾಳುವ ಐಷಾರಾಮಿ ಫ್ಲಾಟ್ ನ್ನು ಗಿಫ್ಟ್ ಆಗಿ ನೀಡಿ, ಚಿತ್ರದ ಮೇಲೆ ಮತ್ತು ನಿರ್ದೇಶಕರ ಮೇಲೆ ತಮಗಿರುವ ಅಭಿಮಾನವನ್ನು ತೋರಿಸಿರುತ್ತಾರೆ.ಈಗಾಗಲೇ ಆರು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಅಸ್ಸಾಮಿ, ಚೈನಿಸ್ ಮತ್ತು ಇಂಗ್ಲಿಷ್ ಅವತರಣಿಕೆ ಗಳೂ ಸೇರ್ಪಡೆಗೊಂಡಿದೆ ಎಂಬವಿಚಾರ ಕೂಡಾ ತಿಳಿಸಿದರು.

ಕೊರಗಜ್ಜ

ಶುಕ್ರವಾರ ಹೊಸ ಫ್ಲಾಟ್ ನ ಗ್ರಹ ಪ್ರವೇಶ ನಡೆಯಿತು.ಬಳಿಕ ಪರಮಶ್ರೇಷ್ಠ ಶ್ರೀ ಸತ್ಯನಾರಾಯಣ ದೇವರ ವ್ರತ ಪೂಜೆ ಕೂಡಾ ನಡೆದು, ಭಾನುವಾರದಂದು ಬೆಂಗಳೂರಿಗೆ ತುಸು ಅಪರೂಪ ಅನ್ನಬಹುದಾದ ಕೊರಗಜ್ಜ ದೈವದ ಅಗೆಲು ಸೇವೆ ಯನ್ನು ಪತ್ರಕರ್ತರ ಮತ್ತು ಬಂದ ಅತಿಥಿಗಳ ಸಮ್ಮುಖದಲ್ಲಿ ನಡೆಸಲಾಯ್ತು‌.

ಹಿರಿಯ ನಟಿ ಭವ್ಯರವರು ಕೊರಗಜ್ಜ ದೈವದ ಅಗೆಲು ಸೇವೆಗೆ ಇಷ್ಟವಾದ ಕುಚಲಕ್ಕಿ ಅನ್ಮ, ಹುರುಳಿ-ಬಸಳೆ ಸಾರು, ಬಂಗುಡೆ ಮೀನಿನ ಗಸಿ,ಮಿಡಿ ಮಾವಿನ ಉಪ್ಪಿನಕಾಯ್,ಕೋಳಿ ಸುಕ್ಕ,ಕಳ್ಳು ಮೊದಲಾದ ಭಕ್ಷ್ಯಗಳನ್ನು ಗೆರಸೆಯಲ್ಲಿಟ್ಟು ಸಮರ್ಪಿಸಿದರು.

ನಿರ್ದೇಶಕರ ಧರ್ಮ ಪತ್ನಿ ರಾಜಶ್ರೀ ಸುಧೀರ್ ಎಲ್ಲಾ ಭಕ್ಷ್ಯಗಳನ್ನು ಅಣಿಗೊಳಿಸಿದರೆ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಭವ್ಯರಿಗೆ ಸಾಥ್ ನೀಡಿದರು.

ನಂತರ ಪತ್ರಿಕಾಗೋಷ್ಟಿ ಯಲ್ಲಿ ಮಾತನಾಡಿದ ನಟಿ ಭವ್ಯರವರು” ಕೊರಗಜ್ಜ ಸಿನಿಮಾವು ನನ್ನನ್ನು ಹೆಚ್ಚು ದೈವಭಕ್ತಳನ್ನಾಗಿಸಿದೆ.ನಾನು ಈ ಚಿತ್ರದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಾ ಚಿತ್ರತಂಡದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜೊತೆಗಿದ್ದೇನೆ.

ಚಿತ್ರದಲ್ಲಿ ನಾನು ಕೊರಗಜ್ಜನಿಗೆ ಪ್ರಪ್ರಥಮವಾಗಿ ಅಗೆಲು ಸೇವೆ ನೀಡುವ ರಾಣಿ “ಪಂಜಂದಾಯಿ” ಪಾತ್ರ ವಹಿಸಿದ್ದೆ. ಈಗ ನಿಜ ಜೀವನದಲ್ಲೂ ನಿರ್ದೇಶಕರಿಗೆ ಗಿಫ್ಟ್ ಆಗಿ ದೊರೆತಿರುವ ಹೊಸ ಫ್ಲಾಟ್ ನಲ್ಲಿ ಕೊರಗಜ್ಜನಿಗೆ ಅಗೆಲು ಸೇವೆ ಮಾಡುವಂತಹ ಸೌಭಾಗ್ಯ ನಿರ್ದೇಶಕರು ನನಗೆ ಮಾಡಿ ಕೊಟ್ಟಿದ್ದಾರೆ. ಬಹುಷಃ ನನ್ನಷ್ಟು ಸೌಭಾಗ್ಯ ವಂತೆ ಈ ಚಿತ್ರದಲ್ಲಿ ಯಾರೂ ಇರಲಿಕ್ಕೆ ಸಾಧ್ಯವಿಲ್ಲ ಎಂದರು.

ನಿರ್ಮಾಪಕ ತ್ರಿವಿಕ್ರಮರವರು ಮಾತನಾಡುತ್ತಾ ಚಿತ್ರವು ಚೈನಿಸ್ ಭಾಷೆಗೂ ಡಬ್ ಆಗುತ್ತಿದೆ ಎನ್ನುವ ಸುದ್ದಿಯನ್ನು ಸಂತೋಷದಿಂದ ಹಂಚಿಕೊಂಡರು.ಹಾಂಕಾಂಗ್ ಮತ್ತು ಬೀಜಿಂಗ್ ನಿಂದ ಹಾಗೂ ಇನ್ನಿತರ ಕಡೆಗಳಿಂದ ಅಂತರಾಷ್ಟ್ರೀಯ ವಿತರಣಾ ಸಂಸ್ಥೆಗಳು ವಿದೇಶಗಳಲ್ಲಿ ಚಿತ್ರ ಬಿಡುಗಡೆ ಗೊಳಿಸಲು ಮುಂದೆ ಬರುತ್ತಿದೆ. ಚಿತ್ರದ ಬಜೆಟ್ 40 ಕೋಟಿ ರುಪಾಯಿ ದಾಟಿದರೂ, ವ್ಯಾವಹಾರಿಕವಾಗಿ ಹೆಚ್ಚು ವಿಶ್ವಾಸ ಮತ್ತು ಖುಷಿ ಹೆಚ್ಚುತ್ತಿರುವ ಈ ಹಿನ್ನೆಯಲ್ಲಿ ಕಳೆದ 3ವರ್ಷಗಳಿಂದ ಈ ಚಿತ್ರಕ್ಕಾಗಿ ಶ್ರಮಿಸುತ್ತಿರುವ ನಿರ್ದೇಶಕರಿಗೆ ಈ ಫ್ಲಾಟನ್ನು ಗಿಫ್ಟ್ ಆಗಿ ನೀಡುತ್ತಿದ್ದೇನೆ- ಎಂದರು. ಕಾರ್ಯಕಾರಿ ನಿರ್ಮಾಪಕ ಹಾಗೂ ಚಿತ್ರದ ಎಡಿಟರ್ ವಿದ್ಯಾಧರ್ ಶೆಟ್ಟಿಯವರುಆಗಸ್ಟ್ ನಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆಸಲಾಗುವುದು ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು.

ಬಹುಷಃ 2D ಯಿಂದ 3D ಕನ್ವರ್ಷನ್ ಆಗುತ್ತಿರುವ ಇದೇ ಮೊದಲ ಕನ್ನಡ ಚಿತ್ರ “ಕೊರಗಜ್ಜ”.

Be the first to comment

Leave a Reply

Your email address will not be published. Required fields are marked *

Translate »
error: Content is protected !!