ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಕಾಂಬಿನೇಷನ್‌ನ ‘ವಾರಣಾಸಿ’ ಸಿನಿಮಾದ ಸೆಟ್‌ನಿಂದ ಹೊಸ ಫೋಟೋವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
ಚಿತ್ರತಂಡ ಮುನ್ನೆಚ್ಚರಿಕೆ ವಹಿಸಿದರೂ ಸೆಟ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೇ 26ರಂದು ಸೋರಿಕೆಯಾದ ಹೊಸ ಫೋಟೋದಲ್ಲಿ ಸಿನಿಮಾದ ಅದ್ದೂರಿ ಸೆಟ್ ಇದೆ. ಬ್ಲೂ-ಸ್ಕ್ರೀನ್ ಹಿನ್ನೆಲೆಯೊಂದಿಗೆ ಕಲ್ಲಿನ ಕೆತ್ತನೆಗಳು ಮತ್ತು ಕಲಾತ್ಮಕವಾದ ಕಲ್ಲಿನ ಕಂಬಗಳು ಫೋಟೋದಲ್ಲಿ ಕಾಣಿಸಿಕೊಂಡಿವೆ. ಇದು ಚಿತ್ರದ ಅತ್ಯಂತ ಪ್ರಮುಖ ಭಾಗವಾದ ‘ಉಗ್ರಭಟ್ಟಿ ಗುಹೆಗಳ’ ಸೀಕ್ವೆನ್ಸ್‌ನ ಸೆಟ್ ಎನ್ನಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರ ಕ್ಯಾರೆಕ್ಟರ್ ಪೋಸ್ಟರ್‌ಗಳಲ್ಲಿ ಈ ಗುಹೆಯ ಝಲಕ್ ಕಾಣಿಸಿತ್ತು. ಆದರೆ ಈಗ ಲೀಕ್ ಆಗಿರುವ ಫೋಟೋ ಇಡೀ ಸೆಟ್‌ನ ಭವ್ಯತೆಯನ್ನು ಬಹಿರಂಗಪಡಿಸಿದೆ. ಉಗ್ರಭಟ್ಟಿ ಗುಹೆಯ ಸೀಕ್ವೆನ್ಸ್ ಹಿಂದೂ ಪುರಾಣಗಳ ಉಗ್ರ ದೇವತೆಯಾದ ಮಾತಾ ಛಿನ್ನಮಸ್ತಾ ದೇವಿಯ ಸುತ್ತ ಹೆಣೆಯಲಾಗಿದೆ. ಈ ದೇವತೆಯ ಕಥೆ ಚಿತ್ರದ ಕಥಾಹಂದರಕ್ಕೆ ಬಹಳ ಮುಖ್ಯವಾಗಿದೆ.
ಸಿನಿಮಾದಲ್ಲಿ ಮಹೇಶ್ ಬಾಬು ಅವರ ಪಾತ್ರವು ದುಷ್ಟ ಶಕ್ತಿಯನ್ನು ಸೋಲಿಸಲು ಈ ದೇವತೆಯ ದೈವಿಕ ಅನುಗ್ರಹವನ್ನು ಪಡೆಯಲು ಗುಹೆಗೆ ಭೇಟಿ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆ ವಾರಣಾಸಿ ಶೆಡ್ಯೂಲ್‌ನಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಒಟ್ಟಿಗೆ ಇರುವ ವಿಡಿಯೋ ಲೀಕ್ ಆಗಿತ್ತು. ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಉಗ್ರಭಟ್ಟಿ ಗುಹೆಯ ದೃಶ್ಯಗಳು ಲೀಕ್ ಆಗಿರುವುದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ.
ಸಾಹಸ ಪ್ರಧಾನವಾಗಿರುವ ‘ವಾರಣಾಸಿ’ ಪ್ಯಾನ್-ವರ್ಲ್ಡ್ ಸಿನಿಮಾವನ್ನು ಒಡಿಶಾ, ಆಫ್ರಿಕಾ ಮತ್ತು ಹೈದರಾಬಾದ್‌ನ ವಿವಿಧ ಭಾಗಗಳಲ್ಲ ಚಿತ್ರೀಕರಿಸಲಾಗುತ್ತಿದೆ. 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ.
—-





Be the first to comment