ಯುದ್ಧಕಾಂಡ, ಬ್ರಹ್ಮವಿಷ್ಣು ಮಹೇಶ್ವರ ಚಿತ್ರಗಳ ನಂತರ ವಕೀಲನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿರುವ ದಶರಥ ಚಿತ್ರವು ಈ ವಾರ ರಾಜ್ಯಾದಾದ್ಯಂತ ಪ್ರೇಕ್ಷಕರನ್ನು ರಂಜಿಸಲು ಬೆಳ್ಳಿಪರದೆಗೆ ಬರುತ್ತಿದ್ದಾರೆ.ಕನ್ನಡ ಚಿತ್ರದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಎಂ.ಎಸ್.ರಮೇಶ್ ಅವರು ದಶರಥ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ದರ್ಶನ್ರ ಅಂ ಚಿತ್ರದಲ್ಲಿ ತಬಲಾ ತಬಲಾ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನೃತ್ಯ ನಿರ್ದೇಶನ ಮಾಡಿದ್ದರೆ, ಈ ಚಿತ್ರದಲ್ಲಿರುವ ಒಂದು ಗೀತೆಯನ್ನು ಚಾಲೆಂಜಿಂಗ್ಸ್ಟಾರ್ ದರ್ಶನ್ ದನಿ ನೀಡಿದ್ದು, ರವಿಚಂದ್ರನ್ ಅವರು ಸ್ಟೆಪ್ಸ್ ಹಾಕಿದ್ದಾರೆ.
ಈವರೆಗೆ ತನ್ನ ಮಾಸ್ ಡೈಲಾಗ್ಗಳಿಂದ ಹಾಗೂ ಭರ್ಜರಿ ಆ್ಯಕ್ಷನ್ಗಳಿಂದ ಸಾಹಸಪ್ರಿಯರನ್ನು ರಂಜಿಸಿ ಸೈ ಎನಿಸಿಕೊಂಡಿದ್ದ ನಟ ದರ್ಶನ್ ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗಾಗಿಯೇ ಒಂದು ಹಾಡನ್ನು ಹಾಡಿದ್ದು, ದರ್ಶನ್ ಅವರ ಧ್ವನಿಯಲ್ಲಿ ಈ ಹಾಡು ಹೇಗೆ ಕೇಳಲಿದೆ, ಅದಕ್ಕೆ ರವಿಚಂದ್ರನ್ ಅವರು ಹೇಗೆ ಡ್ಯಾನ್ಸ್ ಮಾಡಿರಬಹುದು ಎನ್ನುವ ಕುತೂಹಲವಂತೂ ದಚ್ಚು ಹಾಗೂ ರವಿಮಾಮಾ ಅಭಿಮಾನಿಗಳಲ್ಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಡಿರುವ ಗೀತೆಯನ್ನು ದಶರಥ ಚಿತ್ರದ ಟೈಟಲ್ ಟ್ರ್ಯಾಕ್ ಆಗಿ ಬಳಸಿಕೊಂಡಿದ್ದು ಅದರ ಮೂಲಕ ನಾಯಕನ ಇಂಟ್ರೊಡಕ್ಷನ್ ಮಾಡಲಿದ್ದಾರೆ. ದಶರಥ ಎಂದರೆ ಇಂದು ರಾಮಾಯಣದ ಕಥೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು.ಆದರೆ ಈ ಚಿತ್ರದ ನಾಯಕನಲ್ಲಿ ದಶರಥನ ಗುಣವಿರುವುದರಿಂದ ಈ ಚಿತ್ರಕ್ಕೆ ಆ ಟೈಟಲ್ ಇಟ್ಟಿದ್ದು ಇದರಲ್ಲಿ ಸಾಕಷ್ಟು ಕುತೂಹಲ ಭರಿತ ಅಂಶಗಳಿವೆ. ಚಿತ್ರದ ಗೀತೆಯೊಂದಕ್ಕೆ ಮಾತ್ರವಲ್ಲದೆ ಕ್ಲೈಮ್ಯಾಕ್ಸ್ನಲ್ಲೂ ದರ್ಶನ್ರ ಧ್ವನಿಯನ್ನು ಬಳಸಿಕೊಳ್ಳಲಾಗಿದ್ದು, ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ವಾಯ್ಸ್ ಮಿಕ್ಸಿಂಗ್ ಮಾಡಿಸಲಾಗಿದೆ. ಅಕ್ಷಯ್ ಸಮರ್ಥ ಅವರು ಬಲು ಅದ್ಧೂರಿಯಾಗಿ ದಶರಥ ಚಿತ್ರವನ್ನು ನಿರ್ಮಿಸಿದ್ದಾರೆ.
ಕಿಚ್ಚ ಸುದೀಪ್ ಅವರು ನಟಿಸಿದ್ದ ಚಂದು ಚಿತ್ರದಲ್ಲಿ ನಟಿಸಿದ ನಂತರ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದ ನಟಿ ಸೋನಿಯಾ ಅಗರ್ವಾಲ್ ದಶರಥ ಚಿತ್ರದ ಮೂಲಕ ರೀ ಎಂಟ್ರಿಯಾಗಿ ರವಿಚಂದ್ರನ್ ಅವರಿಗೆ ಜೋಡಿಯಾಗಿದ್ದಾರೆ. ರವಿಚಂದ್ರನ್ರ ವಿರುದ್ಧವಾಗಿ ವಾದಿಸುವ ಲಾಯರ್ ಪಾತ್ರಧಾರಿಯಾಗಿ ರಂಗಾಯಣರಘು ನಟಿಸಿದ್ದರೆ, ಪ್ರಿಯಾಮಣಿ ಅವರು ಕೂಡ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.
ದಶರಥ ಚಿತ್ರದ ಎಲ್ಲ ಹಾಡುಗಳು ಇಂಪಾಗಿದ್ದು ಅದರಲ್ಲೂ ಕರಿ ಕೋಟ್ ಹಾಕೋರೆಲ್ಲಾ ಕೇಸ್ ಗೆಲ್ಲೋದಿಲ್ಲ… ಗೆದ್ದು ಬಿಗೋರೆಲ್ಲಾ ಹರಿಶ್ಚಂದ್ರಲ್ಲ ಎಂಬ ಹಾಡು ಕೂಡ ಚೆನ್ನಾಗಿದೆಯಾದರೂ ವಕೀಲರನ್ನು ಅವಹೇಳನ ಮಾಡಲಾಗಿದೆ ಎಂದು ಕೆಲ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿ.ಮನೋಹರ್ ಬರೆದಿರುವ ಈ ಹಾಡಿಗೆ ಗುರುಕಿರಣ್, ಪಿಚ್ಚಳ್ಳಿ ಶ್ರೀನಿವಾಸ್ ಹಾಗೂ ದೊಡ್ಡಪ್ಪ ದನಿಯಾಗಿದ್ದರು. ಈಗ ವಿವಾದಗಳು ಪರಿಹಾರವಾಗಿದ್ದು, ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲು ಅಣಿಯಾಗುತ್ತಿದೆ.
ರವಿಚಂದ್ರನ್ ಅವರು ವಕೀಲನಾಗಿ ನಟಿಸಿರುವ ದಶರಥ ಚಿತ್ರವು, ಈ ಹಿಂದೆ ಅವರು ವಕೀಲರಾಗಿದ್ದ ಯುದ್ಧಕಾಂಡ ಹಾಗೂ ಬ್ರಹ್ಮವಿಷ್ಣು ಮಹೇಶ್ವರ ಚಿತ್ರಗಳಂತೆ ಸಕ್ಸಸ್ ಹಾದಿಯಲ್ಲಿ ಸಾಗುವಂತಾಗಲಿ.
Be the first to comment