ಮೃತ್ಯುದೇವತೆ

‘ಮೃತ್ಯುದೇವತೆ’ ಸಿನಿಮಾದ ‘ನಮ್ಮಾವ ಮಾದೇವ’ ಹಾಡು ಬಿಡುಗಡೆ

ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸರಸ್ವತಿ ನವೀನ್ ಮಹಾದೇವ್ ನಿರ್ಮಿಸಿರುವ ಈ ಮಹಿಳಾ ಪ್ರಧಾನ ‘ಮೃತ್ಯುದೇವತೆ’ ಚಿತ್ರಕ್ಕೆ ನವೀನ್ ಮಹಾದೇವ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರದ ಪ್ರಚಾರದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ‘ನಮ್ಮಾವ ಮಾದೇವ’ ಎಂಬ ಸಾಂಗನ್ನು ಬಿಡುಗಡೆ ಮಾಡಲಾಯಿತು. ಹಿಮಶ್ರೀ ಹಾಗೂ ನವೀನ್ ಮಹದೇವ್ ಅಭಿನಯದ ಈ ಹಾಡಿಗೆ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ.

ಈ ವೇಳೆ ಮಾತನಾಡಿದ ನಟ-ನಿರ್ದೇಶಕ ನವೀನ್ ಮಹಾದೇವ್, “ಸೆನ್ಸಾರ್ ಪ್ರಕ್ರಿಯೆಯ ಸಣ್ಣ ಏರುಪೇರಿನಿಂದಾಗಿ ಚಿತ್ರದ ಬಿಡುಗಡೆ ಕೊಂಚ ತಡವಾಗಿದೆ. ಚಿತ್ರದ ಮೊದಲ ಹಾಡಿಗೆ ಹೆಣ್ಣು ಮತ್ತು ಹೆಣ್ತನವನ್ನು ಗೌರವಿಸಿರುವ ರೀತಿಗೆ ಭಾರಿ ಪ್ರಶಂಸೆ ಸಿಕ್ಕಿದೆ. ನಾಯಕಿ ಹಿಮಶ್ರೀ ಅವರ ಒತ್ತಾಯದ ಮೇರೆಗೆ ಈ ಎರಡನೇ ಹಾಡನ್ನು ಶೂಟ್ ಮಾಡಿದೆವು. ಸಿನಿಮಾ ಗೆಲ್ಲಲು ಟ್ರೇಲರ್ ಮತ್ತು ಹಾಡುಗಳು ಮುಖ್ಯವಾದ್ದರಿಂದ, ಬರೋಬ್ಬರಿ 30 ದಿನಗಳನ್ನು ತೆಗೆದುಕೊಂಡು ಅದ್ಭುತವಾಗಿ ಟ್ರೈಲರ್ ಕಟ್ ಮಾಡಿದ್ದೇನೆ” ಎಂದರು.

ಚಿತ್ರದ ಸಹ ನಿರ್ದೇಶಕ ದೇವು ಮಾತನಾಡಿ, “ಸಿನಿಮಾದಲ್ಲಿ ಕೋಳಿ ಕೊಯ್ಯುವ ಒಂದು ದೃಶ್ಯವಿದೆ. ಅದಕ್ಕೆ ಸೆನ್ಸಾರ್ ಮಂಡಳಿಯವರು ಅನಿಮಲ್ ಬೋರ್ಡ್‌ನಿಂದ ಕಡ್ಡಾಯವಾಗಿ ಅನುಮತಿ ಪತ್ರ ತರಲು ಸೂಚಿಸಿದ್ದಾರೆ. ಈ ತಾಂತ್ರಿಕ ಕಾರಣದಿಂದ ರಿಲೀಸ್ ತಡವಾಗುತ್ತಿದ್ದು, ಎಂ.ಪಿ. ಫಿಲಂಸ್‌ನ ಮುನೀಂದ್ರ ಅವರು ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.

ಮೃತ್ಯುದೇವತೆ

ನಾಯಕಿ ಸಾರಿಕಾ ರಾವ್ ಮಾತನಾಡಿ”ಇದು ಕೇವಲ ಮನೋರಂಜನೆಯ ಸಿನಿಮಾವಲ್ಲ, ಬದಲಾ ವಣೆಗೆ ಪ್ರೇರಣೆ ನೀಡುವ ಚಿತ್ರ. ಹೆಣ್ಣಿನ ಸಹನೆ ಮೀರಿದಾಗ ಏನಾಗುತ್ತದೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ನಾನು ‘ಆರತಿ’ ಎಂಬ ಸ್ವಿಗ್ಗಿ ಡೆಲಿವರಿ ಹುಡುಗಿಯ ವಿಭಿನ್ನ ಶೇಡ್‌ಗಳಿರುವ ಪಾತ್ರ ಮಾಡಿದ್ದೇನೆ. ಪೋಷಕರು ತಮ್ಮ ಹೆಣ್ಣುಮಕ್ಕಳ ಜೊತೆ ಬಂದು ನೋಡಬೇಕಾದ ಸಿನಿಮಾ ಇದು”‌ ಎನ್ನುತ್ತಾರೆ ನಾಯಕಿ ಸಾರಿಕಾ ರಾವ್. ಮತ್ತೊಬ್ಬ ನಾಯಕಿ ಹಿಮಶ್ರೀ ಮಾತನಾಡಿ, “ನಾನು ಮಲೆನಾಡಿನ ಮುಗ್ಧ ಹಳ್ಳಿಯ ಹುಡುಗಿ ಸೌಮ್ಯ ಎಂಬ ಪಾತ್ರ ಮಾಡಿದ್ದು, ಅಪರಿಚಿತರನ್ನು ತಕ್ಷಣಕ್ಕೆ ನಂಬಬಾರದು ಎಂಬ ಸಂದೇಶ ಚಿತ್ರದಲ್ಲಿದೆ” ಎಂದು ಹೇಳಿದರು.

‘ಅಣ್ಣಯ್ಯ’ ಧಾರಾವಾಹಿ ಖ್ಯಾತಿಯ ಮಾಹೀನ್ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದು, ಪವನ್ ಶೆಟ್ಟಿ ಮತ್ತು ಸೂರ್ಯ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ ನಿರ್ದೇಶನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!