ʻಟಾಕ್ಸಿಕ್ʼ ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳನ್ನು ತೆಗೆದು ಹಾಕುವಂತೆ ನಟಿ ಕಿಯಾರಾ ಅಡ್ವಾಣಿ ಅವರು ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಮನವಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಕಿಯಾರಾ ಅಡ್ವಾಣಿ ಮತ್ತು ಯಶ್ ನಡುವೆ ಕೆಲವು ಬೋಲ್ಡ್ ದೃಶ್ಯ ಚಿತ್ರೀಕರಿಸಲಾಗಿದೆ. ಶೂಟಿಂಗ್ ನಂತರ ಈ ಸೀನ್‌ಗಳ ಔಟ್‌ಪುಟ್ ನೋಡಿದ ಕಿಯಾರಾ ಅಡ್ವಾಣಿ ಅವರು ಅಸಮಾಧಾನಗೊಂಡಿದ್ದಾರೆ. ಈ ಸೀನ್‌ಗಳು ಎಲ್ಲಿ ತಮ್ಮ ಇಮೇಜ್‌ಗೆ ಧಕ್ಕೆ ಉಂಟಾಗಬಹುದು ಎನ್ನುವ ಕಾರಣದಿಂದ ಕಿಯಾರಾ ಅವರು ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ಈ ದೃಶ್ಯಗಳನ್ನ ಕತ್ತರಿಸಲು ಅಥವಾ ಅವುಗಳ ತೀವ್ರತೆ ಕಡಿಮೆ ಮಾಡಲು ವಿನಂತಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ನಟ ಯಶ್ ಅವರ ನಿಲುವೇನು ಎಂದು ಸ್ಪಷ್ಟವಾಗಿಲ್ಲ. ಕಥೆಯ ಬೇಡಿಕೆಗೆ ತಕ್ಕಂತೆ ಈ ದೃಶ್ಯಗಳು ಇರಲೇಬೇಕು ಎಂದು ಚಿತ್ರತಂಡ ಭಾವಿಸಿದೆ. ಆದರೆ ನಟಿಯ ಕಂಫರ್ಟ್ ಕೂಡ ಮುಖ್ಯವಾಗಿದ್ದು ಚಿತ್ರತಂಡ ಈ ದೃಶ್ಯಗಳನ್ನ ಹೇಗೆ ಎಡಿಟ್ ಮಾಡಬೇಕು ಅಥವಾ ಉಳಿಸಿಕೊಳ್ಳಬೇಕೆಂಬ ಬಗ್ಗೆ ಗೊಂದಲದಲ್ಲಿದೆ ಎಂದು ಹೇಳಲಾಗುತ್ತಿದೆ.
ʻಟಾಕ್ಸಿಕ್ʼ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣವಿದೆ. ʻಕೆವಿಎನ್ʼ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ರಿಲೀಸ್ ಆಗಲಿದೆ.





Be the first to comment