ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್2 ಚಿತ್ರದ ಶೂಟಿಂಗ್ ವೇಳೆಯ ದೃಶ್ಯಗಳು ಲೀಕ್ ಆಗಿದ್ದು, ಚಿತ್ರತಂಡಕ್ಕೆ ಶಾಕ್ ಆಗಿದೆ.
ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೈಲರ್ 2 ಚಿತ್ರದ ಸಣ್ಣ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಅಕ್ರಮವಾಗಿ ವಿಡಿಯೋವನ್ನು ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ನಿರ್ಮಾಣ ಸಂಸ್ಥೆ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಆ್ಯಂಟಿ-ಪೈರಸಿ ತಂಡ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಲೀಕ್ ಆಗಿರುವ ವಿಡಿಯೋಗಳನ್ನು ತೆಗೆದುಹಾಕುವ ಕಾರ್ಯ ಪ್ರಗತಿಯಲ್ಲಿದೆ.ಈ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಖಾತೆಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದಿದೆ.
ಅಭಿಮಾನಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷವಾಗಿ ಎಚ್ಚರಿಕೆ ನೀಡಲಾಗಿದೆ. ಲೀಕ್ ಆಗಿರುವ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ ಸಾಮಾಜಿಕ ಜಾಲತಾಣ ಖಾತೆಗಳು ಸಸ್ಪೆಂಡ್ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ತಮಿಳು ಚಿತ್ರಗಳು ಬಿಡುಗಡೆಯಾಗುವ ಮುನ್ನ ಲೀಕ್ ಆಗುತ್ತಿರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕೆ ವಿನ್ ಪ್ರೊಡಕ್ಷನ್ ಅವರ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ಆಗಿರುವ ಜನ ನಾಯಗನ್ ಇಡೀ ಚಿತ್ರ ಕೆಲ ದಿನಗಳ ಹಿಂದೆ ಲೀಕ್ ಆಗಿತ್ತು. ಈ ಸಂಬಂಧ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಜೈಲರ್ ಚಿತ್ರದ ಮುಂದುವರಿದ ಭಾಗವಾಗಿರುವ ಜೈಲರ್ 2 ಶೂಟಿಂಗ್ ದೃಶ್ಯಗಳು ಕ್ಲಿಕ್ ಆಗಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ.





Be the first to comment